Saturday, November 25, 2023

ಆಶ್ರಯ, ಆಶೀರ್ವಾದ ನೀಡಿ ನಿರ್ಗಮಿಸಿರುವ ಸ್ವಾಮೀಜಿಗಳ ಸ್ಮರಣೆ ಮುಖ್ಯ : ಶ್ರೀ ಸಂಗಮಾನಂದ ಸ್ವಾಮೀಜಿ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಉದ್ಘಾಟಿಸಿದರು.  
    ಭದ್ರಾವತಿ: ಧರ್ಮ, ಜಾತಿ ಬೇಧಭಾವವಿಲ್ಲದೆ ಆಶ್ರಯ, ಆಶೀರ್ವಾದ ನೀಡಿ ನಿರ್ಗಮಿಸಿರುವ ಸ್ವಾಮೀಜಿಗಳ ಸ್ಮರಣೆ ಮುಖ್ಯ ಎಂದು ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಹೇಳಿದರು.
    ಶ್ರೀಗಳು ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಶೀರ್ವಚನ ನೀಡಿದರು.
    ಮನುಷ್ಯರ ಬದುಕು ಸಾರ್ಥಕಗೊಳ್ಳಬೇಕಾದರೆ ಧಾರ್ಮಿಕ ಹಾಗು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಶ್ರೀ ಕ್ಷೇತ್ರ ಭದ್ರಗಿರಿ ಅನೇಕ ಸಾಧು ಸಂತರುಗಳ ಸಂಗಮ ಸ್ಥಳ. ಅನೇಕ ಸಾಧುಗಳು ಇಲ್ಲಿಗೆ ಭೇಟಿ ನೀಡಿದ್ದು, ಇದೊಂದು ಪುಣ್ಯಸ್ಥಳವಾಗಿದೆ ಎಂದರು.
    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ರಾಜ್ಯ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರನ್ನು ಸೆಳೆದ ಮಹತ್ವದ ಕ್ಷೇತ್ರ ಭದ್ರಗಿರಿ. ಭಕ್ತರನ್ನು ಸೆಳೆಯುವುದು ಸಲಭವಲ್ಲ. ವಿಶೇಷ ಶಕ್ತಿ ಇದ್ದಾಗ ಮಾತ್ರ ಭಕ್ತರು ಆಕರ್ಷಿತರಾಗಲು ಸಾಧ್ಯ ಎಂದರು.
ಶ್ರೀಮಂತರಿಗೆ ಮಹತ್ವನೀಡಲು ಅನೇಕ ಮಠಗಳಿವೆ. ಆದರೆ ಭದ್ರಗಿರಿ ಆಶ್ರಮವು ಬಡವರಿಗೆ ಆದ್ಯತೆ ನೀಡುವ ಮೂಲಕವೇ ಮನ್ನಣೆ ಪಡೆದಿದೆ. ಈ ಆಶ್ರಮದ ವತಿಯಿಂದ ಬಡವರಿಗೆ ನೆರವಾಗುವಂಥ ಹಲವರು ಸೇವಾ ಕಾರ್ಯಗಳನ್ನು ಮುಂದುವರೆಸಿದೆ. ಈ ಆಶ್ರಮದ ಅಭಿವೃದ್ಧಿಗೆ ತಮ್ಮ ಕುಟುಂಬದವರು ಸದಾ ಸ್ಪಂದಿಸುವುದಾಗಿ ತಿಳಿಸಿದರು.
    ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ದವತ್ತೀರು ಸ್ವಾಮೀಜಿಗಳ ನಡೆ-ನುಡಿ ಭಕ್ತರಿಗೆ ಆದರ್ಶ. ಭಕ್ತರಲ್ಲಿ ಅಜ್ಞಾನ ದೂರಾಗಿಸಿ, ಜ್ಞಾನವನ್ನು ಸ್ಥಾಪಿಸುವುದೇ ಪ್ರತಿಯೊಬ್ಬ ಸ್ವಾಮೀಜಿಗಳ ಮೂಲ ಕರ್ತವ್ಯ ಎಂದರು.
    ಕುಂಬಾರ ಗುರುಪೀಠದ ಶ್ರೀಕುಂಬಾರ ಗುಂಡಯ್ಯ ಸ್ವಾಮೀಜಿ, ಕೊಲ್ಲೂರಿನ ರಾಘವೇಂದ್ರ,ಲಿಂಗಯ್ಯ ಸ್ವಾಮೀಜಿ, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್ ಶ್ರೀನಿವಾಸ್ ಅವರ ಪತ್ನಿ ವಾಣಿ, ಎಂ.ಸಿ ಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ಸಿ ರಾಮೇಗೌಡ, ಉಪಾಧ್ಯಕ್ಷೆ ಅಲಮೇಲಮ್ಮ, ಆಶ್ರಮದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಘೋಷ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.
    ವಿದ್ಯಾರ್ಥಿ ಸೃಜನ್ ಪ್ರಾರ್ಥಿಸಿದರು. ಡಾ. ವಿಕ್ರಂ ಸ್ವಾಗತಿಸಿ, ಡಾ. ದಿವ್ಯ ದವತ್ತೀರು ಶ್ರೀಗಳು ನಡೆದುಬಂದ ಹಾದಿಯನ್ನು ಪರಿಚಯಿಸಿದರು. ಮಂಜುನಾಥ್ ನಿರೂಪಿಸಿ, ವಂದಿಸಿದರು.

ಭದ್ರಾವತಿ : ಅರಣ್ಯ ಇಲಾಖೆ ಬೋನಿಗೆ ಸಿಕ್ಕಿ ಬಿದ್ದ ಮತ್ತೊಂದು ಚಿರತೆ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
    ಭದ್ರಾವತಿ : ಕ್ಷೇತ್ರದಲ್ಲಿ ಇತ್ತೀಚೆಗೆ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ಬೋನಿಗೆ ಚಿರತೆಯೊಂದು ಸಿಕ್ಕಿ ಬಿದ್ದ ಪ್ರಕರಣ ನಡೆದಿತ್ತು. ಇದೀಗ ಗ್ರಾಮೀಣ ಭಾಗದಲ್ಲಿ ಮತ್ತೊಂದು ಚಿರತೆ ಬೋನಿಗೆ ಸಿಕ್ಕಿ ಬಿದ್ದಿದೆ.
    ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋನಿಗೆ ಸಿಕ್ಕಿ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ.
    ಇತ್ತೀಚೆಗೆ ಗ್ರಾಮದ ಮನೆಯೊಂದರಲ್ಲಿ ಕಟ್ಟಿ ಹಾಕಲಾಗಿದ್ದ ಸಾಕು ನಾಯಿಯೊಂದರ ಮೇಲೆ ಚಿರತೆ ದಾಳಿ ನಡೆಸಿ ಪರಾರಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೋನ್ ಇಟ್ಟಿದ್ದರು. ಈ ನಡುವೆ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಚಿರತೆ ಬೋನ್‌ಗೆ ಸಿಕ್ಕಿ ಬಿದ್ದಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರು, ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಎಚ್ಚರ ವಹಿಸುವಂತೆ ಮನವಿ ಮಾಡಿದರು.
    ಸುಮಾರು ೨ ತಿಂಗಳ ಹಿಂದೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಮರಿ ಚಿರತೆಯೊಂದು ಸಿಕ್ಕಿ ಬಿದ್ದಿತ್ತು.  

ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಅನಾವರಣ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಅನಾವರಣಗೊಳಿಸಿದರು.
    ಭದ್ರಾವತಿ: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಅನಾವರಣಗೊಳಿಸಿದರು.
    ಕಳೆದ ೨ ವರ್ಷಗಳ ಹಿಂದೆ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆರಂಭಗೊಂಡ ಟ್ರಸ್ಟ್ ಈಗಾಗಲೇ ಕೆಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಟ್ರಸ್ಟ್ ಪ್ರಮುಖರು, ಪತ್ರಕರ್ತ ಅನಂತಕುಮಾರ್ ಹೇಳಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಸದಸ್ಯ ಚನ್ನಪ್ಪ, ಪ್ರಮುಖರಾದ ಎಸ್.ಎಸ್ ಭೈರಪ್ಪ, ಟಿ. ರಾಜೇಂದ್ರ, ವೈ. ನಟರಾಜ್, ಪ್ರಕಾಶ್‌ಕಾರಂತ್, ಮರಿಯಪ್ಪ, ಜಯಲಕ್ಷ್ಮೀ, ಎಚ್.ಆರ್ ಮಮತ, ಚಂದ್ರಶೇಖರ್, ಟಿ.ಎಚ್ ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಲಕ್ಷ್ಮೀ ಪೂಜೆ ನೆರವೇರಿಸಿ ಸಸಿಗಳನ್ನು ವಿತರಿಸಿ ಟ್ರಸ್ಟ್ ಮುಂದಿನ ಕಾರ್ಯಗಳಿಗೆ ಸಹಕಾರ ಕೋರಲಾಯಿತು.