Tuesday, July 1, 2025

ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    ಭದ್ರಾವತಿ : ನಗರಸಭೆ ವತಿಯಿಂದ ೨೦೨೫-೨೬ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯಡಿ ಶೇ.೭.೨೫ ಹಾಗು ಶೇ.೫ರ ಕ್ರಿಯಾ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಇತರೆ ಬಡವರ್ಗದವರಿಗೆ(ಮಾರಾಣಾಂತಿಕ ಕಾಯಿಲೆ) ಹಾಗು ವಿಕಲಚೇತನರಿಗೆ(ಶ್ರವಣ ಸಾಧನ, ವೀಲ್‌ಛೇರ್, ವಾಕರ್ ಖರೀದಿಸಲು ಸಹಾಯಧನ) ಶೇ.೭.೨೫ ಹಾಗು ಶೇ.೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. 
    ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯೊಂದಿಗೆ ಎರಡು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ೫ ವರ್ಷದೊಳಗಿನ ಜಾತಿ ಪ್ರಮಾಣ ಪತ್ರ, ಜಾಲ್ತಿ ಸಾಲಿನ ವಾರ್ಷಿಕ ವರಮಾನ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ,  ತರಬೇತಿ ಪ್ರಮಾಣ ಪತ್ರ, ಪಡಿತರ ಚೀಟಿಯ ನಕಲು ಪ್ರತಿ ಮತ್ತು ನಿವಾಸಿ ದೃಢೀಕರಣ ಪತ್ರಗಳ ನಕಲು ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಸಲ್ಲಿಸ ತಕ್ಕದ್ದು. 
    ಜು.೧೧ರೊಳಗೆ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿ ನಗರಸಭೆ ಶೇ.೨೪.೧೦ರ ನಿಧಿ ವಿಭಾಗದಿಂದ ಪಡೆಯಬಹುದಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. 

ಕೆ. ಸಾರಮ್ಮ ನಿಧನ



ಕೆ. ಸಾರಮ್ಮ 
    ಭದ್ರಾವತಿ: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಾಗದ ನಗರದ ೬ನೇ ವಾರ್ಡ್ ನಿವಾಸಿ ಕೆ. ಸಾರಮ್ಮ(೬೮) ಮಂಗಳವಾರ ನಿಧನ ಹೊಂದಿದರು. 
    ಸಾರಮ್ಮ ಅವರು ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಸಂತಾಪ ಸೂಚಿಸಿದೆ. 

ವಿಐಎಸ್‌ಎಲ್ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

೭ನೇ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ೭ನೇ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಕಾರ್ಖಾನೆಯ ಭದ್ರಾ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸುವ ಮೂಲಕ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಲಾಯಿತು. 
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ,  ಮುಖ್ಯ ಮಹಾಪ್ರಬಂಧಕ(ಸ್ಥಾವರ), ಕೆ.ಎಸ್ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಮಕ್ಕಳಿಗೆ ಅಭಿನಂದನಾ ಪತ್ರ, ನಗದು ಪುರಸ್ಕಾರ ಮತ್ತು ಸಸಿಗಳನ್ನು ನೀಡಿ, ಅವರ ಸಾಧನೆಗಳನ್ನು ಪ್ರಶಂಸಿಸಲಾಯಿತು. 
ಸಮಾರಂಭದಲ್ಲಿ ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಕಾರ್ಮಿಕರು, ಅವರ ಕುಟುಂಬದವರು ಪಾಲ್ಗೊಂಡಿದ್ದರು. 
    ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ,  ಕಾಖಾನೆಯ ಉದ್ಯೋಗಿಗಳ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡಲು ಇರುವ ಹಲವು ಯೋಜನೆಗಳ ಬಗ್ಗೆ ತಿಳಿಸಿದರು. ಎಸ್. ಅನನ್ಯ ಪ್ರಾರ್ಥಿಸಿದರು. 

ದ್ವಿಚಕ್ರ ವಾಹನ ಕಳ್ಳತನ : ಓರ್ವ ಯುವಕ ಬಂಧನ

ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ತೊಡಗಿದ್ದ ಯುವಕನೋರ್ವನನ್ನು ಬಂಧಿಸಿ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ತೊಡಗಿದ್ದ ಯುವಕನೋರ್ವನನ್ನು ಬಂಧಿಸಿ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತನಗರದ ನಿವಾಸಿ ಹರ್ಷ(೧೯) ಬಂಧಿತ ಯುವಕನಾಗಿದ್ದು, ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ನಿವಾಸಿ ಜಿ. ಮಹೇಶ್ ಎಂಬುವರು ಮೇ.೩೧ರಂದು ಬೆಳಿಗ್ಗೆ ನಗರದ ಬಿ.ಎಚ್ ರಸ್ತೆಯ ಸುರೇಶ್ ಆಟೋ ವರ್ಕ್ಸ ಮುಂಬಾಗದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ೧೨೫ ದ್ವಿಚಕ್ರ ವಾಹನ ಕಳ್ಳತನ ಮಾಡಲಾಗಿದೆ ಎಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
     ಈ ಹಿನ್ನಲೆಯಲ್ಲಿ ಪ್ರಕರಣ ಭೇದಿಸಲು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ , ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್‌ರವರ ನೇತೃತ್ವದಲ್ಲಿ ಸಹಾಯಕ ಉಪ ನಿರೀಕ್ಷಕ ಟಿ.ಪಿ ಮಂಜಪ್ಪ, ಸಿಬ್ಬಂದಿಗಳಾದ ನವೀನ್ ಮತ್ತು ಪ್ರಸನ್ನ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.  
    ಪ್ರಕರಣ ಭೇದಿಸಿದ ತಂಡ ಹರ್ಷನನ್ನು ಬಂಧಿಸಿ ಕಳ್ಳತನ ಮಾಡಲಾಗಿದ್ದ ೪ ಮತ್ತು ಕೃತ್ಯಕ್ಕೆ ಬಳಸಿದ ೧ ಒಟ್ಟು ೫ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು ೨.೪೦ ಲಕ್ಷ ರು. ಗಳಾಗಿವೆ. ಹರ್ಷನ ವಿರುದ್ಧ  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ೩, ಚಿಕ್ಕಮಗಳೂರು ಜಿಲ್ಲೆ ಬೀರೂರು ಠಾಣೆಯಲ್ಲಿ ೧  ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ದಾಖಲಾಗಿದ್ದವು. ತನಿಖಾ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.