Friday, May 5, 2023

ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತದಾನ ಕುರಿತು ಜಾಗೃತಿ

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಯುವ ಮತದಾರರಿಗೆ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೫ :  ತಾಲೂಕು ಆಡಳಿತ, ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಯುವ ಮತದಾರರಿಗೆ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
    ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಜಾಥಾ ನಡೆಸಲಾಯಿತು. ಮತದಾನ ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು. ಮೇ.೧೦ರಂದು ವಿಧಾನಸಭೆ ಚುನಾವಣೆ ಮತದಾನ ಹಿನ್ನಲೆಯಲ್ಲಿ ಕಳೆದ ಸುಮಾರು ೨ ತಿಂಗಳಿನಿಂದ ಕ್ಷೇತ್ರದಾದ್ಯಂತ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.


  ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್, ಸಹಾಯಕ ನಿರ್ದೇಶಕ ಉಪೇಂದ್ರ, ಪಾಲಿಟೆಕ್ನಿಕ್ ಯುವ ಮತದಾರರು, ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚುನಾವಣೆಯಲ್ಲಿ ಹಣ, ಹೆಂಡ, ಅಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳದಿರಿ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಜಾಗೃತಿ ಕರಪತ್ರ ವಿತರಣೆಗೆ ಚಾಲನೆ

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಶಾಖೆವತಿಯಿಂದ ಶುಕ್ರವಾರ ಜಾಗೃತಿ ಕರಪತ್ರ ವಿತರಣೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಮೇ. ೫ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಭವಿಷ್ಯದ ಚಿಂತನೆಗಳೊಂದಿಗೆ ಮಾದರಿ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಲವಾರು ವರ್ಷಗಳಿಂದ ಮತದಾನ ಜಾಗೃತಿ ನಡೆಯುತ್ತಿದ್ದು, ಪ್ರಸ್ತುತ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಶಾಖೆ ವತಿಯಿಂದ ಮುಗ್ದ ಮತದಾರರು ಹಣ, ಹೆಂಡದ ಅಮಿಷಗಳಿಗೆ ಬಲಿಯಾಗದಂತೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೨ರ ಕಛೇರಿ ವತಿಯಿಂದ ಶುಕ್ರವಾರ ಕರಪತ್ರಗಳ ವಿತರಣೆಗೆ ಚಾಲನೆ ನೀಡಲಾಯಿತು. ಮೇ. ೧೦ರಂದು ಚುನಾವಣೆ ನಡೆಯಲಿದ್ದು, ಮುಗ್ದ ಮತದಾರರಿಗೆ ಮದ್ಯ ಕುಡಿಸಿ, ಹಣ ಅಥವಾ ಅಮಿಷಗಳಿಂದ  ಮತ ಪಡೆಯುವ ಪ್ರಯತ್ನಗಳು ನಡೆಯಬಹುದು. ಇದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು. ರಾಜಕೀಯ ಪಕ್ಷಗಳು ಹಣ, ಮದ್ಯ ಹಂಚುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ನಡೆಯುತ್ತಿದೆ.
    ಜನಜಾಗೃತಿ ವೇದಿಕೆ ಸದಸ್ಯರಾದ ಜಿ. ಆನಂದ ಕುಮಾರ್, ಪಾಲಾಕ್ಷಪ್ಪ, ರಾಜೇಶ್, ರೇವಣಕರ್ ಹಾಗೂ ನವಜೀವನ ಸಮಿತಿ ಸದಸ್ಯರುಗಳು, ಯೋಜನಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿಗೆ ವ್ಯಾಪಕ ಬೆಂಬಲ : ಗೆಲುವು ಖಚಿತ

ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮದ್ ಸನ್ನಾವುಲ್ಲಾ


ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮದ್ ಸನ್ನಾವುಲ್ಲಾ ಮಾತನಾಡಿದರು.
    ಭದ್ರಾವತಿ, ಮೇ. ೫ : ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರಿಗೆ ಈ ಬಾರಿ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಶೇ.೬೦ರಷ್ಟು ಮತ ಲಭಿಸುವ ವಿಶ್ವಾಸವಿದೆ ಎಂದು ಮಾಜಿ ಉಪಮೇಯರ್, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮದ್ ಸನ್ನಾವುಲ್ಲಾ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೦ ವರ್ಷಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಎರಡು ಬೃಹತ್ ಕಾರ್ಖಾನೆಗಳು ಬೆಳವಣಿಗೆ ಕಾಣದೆ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದೆ. ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದಾಗಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದರು.
    ಈ ಬಾರಿ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಗೆಲುವು ಖಚಿತವಾಗಿದ್ದು, ಇವರ ಗೆಲುವಿಗಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಮತಯಾಚನೆ ಸಂದರ್ಭದಲ್ಲಿ ಇವರಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್  ಅಧಿಕಾರಕ್ಕೆ ಬಂದಲ್ಲಿ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕರಿಯಪ್ಪ, ತ್ಯಾಗರಾಜ್, ಇಬ್ರಾಹಿಂ ಖಾನ್, ಎ. ಮಸ್ತಾನ್, ಸೈಯದ್ ಅಜ್ಮಲ್, ತರುಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೫ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
    ಮಧ್ಯಾಹ್ನ ಸುಮಾರು ೧೨.೩೦ರ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ಆರಂಭಗೊಂಡಿತು. ಈ ಬಾರಿ ದೇವಸ್ಥಾನದ ಪ್ರಾಂಗಣದಲ್ಲಿಯೇ ಧಾರ್ಮಿಕ ಆಚರಣೆಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
    ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತಾಧಿಗಳು ಸ್ವಾಮಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಸೇವಾಕರ್ತರಿಂದ ಪಾನಕ, ಕೋಸಂಬರಿ ಸೇರಿದಂತೆ ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕ ಎಸ್. ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಸ್ಥಾನದ ಸೇವಾಕರ್ತರು, ಭಕ್ತರು ಪಾಲ್ಗೊಂಡಿದ್ದರು.