Wednesday, March 30, 2022

ಯಶಸ್ವಿಯಾಗಿ ಜರುಗಿದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಭದ್ರಾವತಿ ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ಬುಧವಾರ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಹಾಗು ಸ್ವಯಂ ಪ್ರೇರಿತ ನೇತ್ರದಾನ ನೋಂದಣಿ ಶಿಬಿರವನ್ನು ಎರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ಉಮೇಶ್, ವಂದೇ ಮಾತರಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎ ಪ್ರಸನ್ನಕುಮಾರ್ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಉದ್ಘಾಟಿಸಿದರು.
    ಭದ್ರಾವತಿ, ಮಾ. ೩೦: ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ತಾಲೂಕಿನ ಅಂತರಗಂಗೆ-ಕೆ.ಎಚ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ವೈದ್ಯಾಧಿಕಾರಿಗಳ ಕಛೇರಿ ಸಹಯೋಗದೊಂದಿಗೆ ಬುಧವಾರ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಹಾಗು ಸ್ವಯಂ ಪ್ರೇರಿತ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಲಾಗಿತ್ತು.
    ಎರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ಉಮೇಶ್, ವಂದೇ ಮಾತರಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎ ಪ್ರಸನ್ನಕುಮಾರ್ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಶಿಬಿರ ಉದ್ಘಾಟಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಶಿಬಿರ ಪರಿಶೀಲನೆ ನಡೆಸಿದರು. ಟ್ರಸ್ಟ್ ಉಪಾಧ್ಯಕ್ಷ ಬಿ. ರೇಣೋಜಿರಾವ್, ಕಾರ್ತಿಕ್, ಜಗದೀಶ್ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ತಜ್ಞ ವೈದ್ಯರ ತಂಡ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಶಿಬಿರದ ಯಶಸ್ವಿಗೆ ಶ್ರಮಿಸಿದರು. ನೂರಾರು ಮಂದಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.

ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿರುವ ಶಿಶು ಪಾಲನ ಕೇಂದ್ರದಲ್ಲಿ ಬುಧವಾರ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಶಿಬಿರ ಉದ್ದೇಶಿಸಿ ಮಾತನಾಡಿದರು.
    ಭದ್ರಾವತಿ, ಮಾ. ೩೦: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿರುವ ಶಿಶು ಪಾಲನ ಕೇಂದ್ರದಲ್ಲಿ ಬುಧವಾರ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
    ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಗು ಉಜ್ಜನಿಪುರದಲ್ಲಿ ಶಿಶು ಪಾಲನ ಕೇಂದ್ರಗಳನ್ನು ತೆರೆಯಲಾಗಿದ್ದು, ದಿನದ ಕೂಲಿ ನಂಬಿ ಬದುಕುತ್ತಿರುವ ದಂಪತಿಗಳಿಗೆ ಈ ಕೇಂದ್ರಗಳು ಹೆಚ್ಚಿನ ಸಹಕಾರಿಯಾಗಿವೆ.
    ಶಿವಮೊಗ್ಗ ಗುತ್ತಿ ಮಲ್ನಾಡ್ ಹಾಸ್ಪಿಟಲ್ ತಜ್ಞ ವೈದ್ಯರ ತಂಡ ತಪಾಸಣೆ ನಡೆಸಿತು. ಕಾರ್ಮಿಕ ಇಲಾಖೆ ನಿರೀಕ್ಷಕಿ ಮುಮ್ತಾಜ್ ಬೇಗಂ, ನಗರಸಭೆ ಸದಸ್ಯೆ ಸವಿತ, ಮುಖಂಡ ಉಮೇಶ್ ಸೇರಿದಂತೆ ಇನ್ನಿತರರು ಶಿಬಿರಕ್ಕೆ ಚಾಲನೆ ನೀಡಿದರು.

ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷಾ ಪರೀಕ್ಷೆಗೆ ೧೨೨ ಮಂದಿ ಗೈರು

    ಭದ್ರಾವತಿ, ಮಾ. ೩೦: ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷಾ ಪರೀಕ್ಷೆ ಬುಧವಾರ ನಡೆದಿದ್ದು, ತಾಲೂಕಿನಲ್ಲಿ ಒಟ್ಟು ೧೨೨ ಮಂದಿ ಗೈರು ಹಾಜರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದ್ದಾರೆ.
    ದ್ವಿತೀಯ ಭಾಷಾ ಪರೀಕ್ಷೆಗೆ ಒಟ್ಟು ೪೪೮೫ ವಿದ್ಯಾರ್ಥಿಗಳ ಪೈಕಿ ೪೩೬೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೨೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ೧೫ ಪರೀಕ್ಷಾ ಕೇಂದ್ರಗಳಲ್ಲಿ ೪೧೬೭ ಮತ್ತು ಮರು ಪರೀಕ್ಷೆ ತೆಗೆದುಕೊಂಡ ೨೭ ವಿದ್ಯಾರ್ಥಿಗಳು ಸೇರಿ ಒಟ್ಟು ೪೧೯೪ ವಿದ್ಯಾರ್ಥಿಗಳ ಪೈಕಿ ೪೧೨೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಉಳಿದಂತೆ ೧ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ೨೮೧ ಮತ್ತು ಮರು ಪರೀಕ್ಷೆ ತೆಗೆದುಕೊಂಡ ೧೦ ವಿದ್ಯಾರ್ಥಿಗಳು ಸೇರಿ ಒಟ್ಟು ೨೯೧ ವಿದ್ಯಾರ್ಥಿಗಳಪೈಕಿ ೨೪೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ದ್ವಿತೀಯ ಭಾಷಾ ಪರೀಕ್ಷೆ ಸಹ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.  

ಬದಕಿನ ಸಾರ್ಥಕತೆಗೆ ವಚನಗಳು ಸಹಕಾರಿ : ಬಾರಂದೂರು ಪ್ರಕಾಶ್

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 626ನೇ ವಚನ ಮಂಟಪ ಮತ್ತು ದತ್ತಿ ಹಾಗು ಎಂ.ಎಸ್ ಈಶ್ವರಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಮಾತನಾಡಿದರು.
    ಭದ್ರಾವತಿ, ಮಾ. ೩೦: ಪ್ರತಿಯೊಬ್ಬರ ಬದುಕು ಸಾರ್ಥಕಗೊಳ್ಳಬೇಕು. ನಾವುಗಳು ಕೈಗೊಳ್ಳುವ ಕಾರ್ಯಗಳು ಇದಕ್ಕೆ ಪೂರಕವಾಗಿರಬೇಕು. ವಚನಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಹೇಳಿದರು.
    ಅವರು ಬುಧವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 626ನೇ ವಚನ ಮಂಟಪ ಮತ್ತು ದತ್ತಿ ಹಾಗು ಎಂ.ಎಸ್ ಈಶ್ವರಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ನಾವು ಬದುಕಿರುವಾಗ ಮಾಡುವ ಕಾರ್ಯಗಳು ನಮ್ಮನ್ನು ಜೀವಂತವಾಗಿ ಉಳಿಸುತ್ತವೆ. ಈಶ್ವರಯ್ಯನವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ನಮ್ಮೆಲ್ಲರ ಸ್ಮರಣೆಯಲ್ಲಿ ಉಳಿದುಕೊಂಡಿದ್ದಾರೆ. ಶರಣ ಸಾಹಿತ್ಯ ಪರಿಷತ್ ಬದುಕಿನ ಸಾರ್ಥಕತೆಯನ್ನು ಸಾರುವ ನಿಟ್ಟಿನಲ್ಲಿ ಹಾಗು ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಜಿಲ್ಲೆಯಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳು ನಿರಂತರವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆಯೊಂದಿಗೆ ಪರಿಷತ್ ಮುನ್ನಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
    ಪರಿಷತ್ ತಾಲೂಕು ಗೌರವಾಧ್ಯಕ್ಷ ಬಸವನಗೌಡ ಮಾಳಗಿ, ಬಸವಕೇಂದ್ರ ಅಧ್ಯಕ್ಷ ಜಗದೀಶ್ ಕವಿ, ಕದಳಿ ಮಹಿಳಾ ವೇದಿಕೆ ಸಂಚಾಲಕಿ ಹೇಮಾವತಿ ಚಿಗಟೇರಪ್ಪ ಮಾತನಾಡಿದರು.
    ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಪರಿಷತ್ ಪ್ರಮುಖರು, ಕದಳಿ ಮಹಿಳಾ ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜನ್ನಾಪುರ-ಸಿದ್ದಾಪುರ ಕೆರೆ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಏ.೪ರಂದು ಧರಣಿ ಸತ್ಯಾಗ್ರಹ

ಮೊದಲು ಕೆರೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ, ಮಲ-ಮೂತ್ರಗಳಿಂದ ತುಂಬಿರುವ ಹೂಳು ತೆಗೆಯಿರಿ

ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಗೊಳಿಸಿವ ನಿಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲು ಮುಂದಾಗುತ್ತಿರುವುದನ್ನು ವಿರೋಧಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಸಭೆ ನಡೆಸಲಾಯಿತು.
    ಭದ್ರಾವತಿ, ಮಾ. ೩೦: ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ತಿಳಿಸಿದರು.
    ನಮ್ಮ ಪೂರ್ವಿಕರು ಜನಸಾಮಾನ್ಯರಿಗೆ, ಜಾನುವಾರುಗಳಿಗೆ ಮತ್ತು ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು, ಜನ್ನಾಪುರ-ಸಿದ್ದಾಪುರ ಕೆರೆ ಒಟ್ಟು ೫೨ ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಕೆರೆ ಜಾಗವನ್ನು ೪೫ ಎಕರೆ ೨೦ ಗುಂಟೆ ಎಂದು ಗುರುತಿಸಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ಭೂ ಕಬಳಿಕೆದಾರರನ್ನು ರಕ್ಷಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ಸರ್ವೆ ಕಾರ್ಯ ನಡೆಸಿ ಗುರುತಿಸಲಾಗಿರುವ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ೩೦ ಎಕರೆ ಜಾಗವನ್ನು ಮಾತ್ರ ಸೀಮಿತಗೊಳಿಸಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಮೊದಲನೇ ಕಂತಿನ ಹಣ ಅಂದಾಜು ೪,೪೮,೦೦,೦೦೦ ರು.  ಬಿಡುಗಡೆಗೊಳಿಸಿದೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಮೊದಲು ೫೨ ಎಕರೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
    ನೂರಾರು ವರ್ಷಗಳಿಂದ ಈ ಕೆರೆ ಮಲ-ಮೂತ್ರಗಳಿಂದ ತುಂಬಿಕೊಂಡಿದ್ದು, ಕಲುಷಿತಗೊಂಡಿರುವ ಕೆರೆಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮೊದಲು ಕೈಗೊಳ್ಳಬೇಕಾಗಿದೆ. ಆ ನಂತರ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
    ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಮುಂದಾಗಿರುವ ತಾಲೂಕು ಆಡಳಿತ ಹಾಗು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಹೋರಾಟ ನಡೆಸಲಾಗುತ್ತಿದ್ದು, ಕೆರೆಯನ್ನು ಪೂರ್ಣಪ್ರಮಾಣದಲ್ಲಿ ಸಂರಕ್ಷಿಸುವುದು ಮೊದಲ ಆದ್ಯತೆಯಾಗಿದೆ. ಈ ಹಿನ್ನಲೆಯಲ್ಲಿ  ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗರಹ ನಡೆಸಲಾಗುತ್ತಿದೆ ಎಂದರು.
    ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ರಿಯಾಜ್ ಅಹಮದ್, ಪ್ರಮುಖರಾದ ಚನ್ನಪ್ಪ, ಕೃಷ್ಣೇಗೌಡ, ವಿಶ್ವೇಶ್ವರ ಗಾಯಕ್ವಾಡ್, ಎನ್. ರಾಮಕೃಷ್ಣ, ಕೆ. ಮಂಜುನಾಥ್, ರಾಮಚಂದ್ರ, ಶ್ರೀನಿವಾಸ್, ಜಿ. ರಾಜು, ಗಿರಿನಾಯ್ಡು, ವಿಲ್ಸನ್ ಬಾಬು, ವಿನೋದ್, ವೆಂಕಟರಮಣಶೆಟ್ಟಿ, ಹನುಮಂತಪ್ಪ, ಮುದ್ದಪ್ಪ, ರಾಜೇಂದ್ರ, ಹಾವು ಮಂಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.