Wednesday, June 21, 2023

ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದ ಆಚರಣೆಗೆ ಸಹಕಾರ ನೀಡಿ

ಶಾಂತಿಸಭೆಯಲ್ಲಿ ಮುಸ್ಲಿಂ ಮುಖಂಡರ ಮನವಿ

ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
    ಭದ್ರಾವತಿ, ಜೂ. ೨೧ : ತಾಲೂಕಿನಾದ್ಯಂತ ಈ ಬಾರಿ ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದಿಂದ ಆಚರಿಸಲು ಹೆಚ್ಚಿನ ಸಹಕಾರ ನೀಡಬೇಕೆಂದು ಬುಧವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಮುಸ್ಲಿಂ ಸಮುದಾಯದ ಮುಖಂಡರು, ಜೂ.೨೮ರಿಂದ ೩ ದಿನಗಳ ಕಾಲ ಹಬ್ಬದ ಆಚರಣೆ ನಡೆಯಲಿದೆ. ಮೊದಲ ದಿನ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯ ಈದ್ಗಾ ಮೈದಾನ ಸೇರಿದಂತೆ ೪ ಖಬರ್‌ಸ್ತಾನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ೩ ದಿನಗಳ ಕಾಲ ಹಬ್ಬದ ಸಂಭ್ರಮದಲ್ಲಿ ತೊಡಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಧರ್ಮದವರು ಸಹ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
    ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪೊಲೀಸ್ ಇಲಾಖೆ ಹೆಚ್ಚಿನ ಸಹಕಾರ ನೀಡಬೇಕು. ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತಹ ವಾತಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದರು.
    ಸಭೆಯಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಫೀರ್‌ಷರೀಫ್, ಮಸ್ತಾನ್, ದಿಲ್‌ದಾರ್, ಖಾದರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಟಿಪ್ಪುಸುಲ್ತಾನ್, ಸೈಯದ್ ರಿಯಾಜ್, ವಿ. ಕದಿರೇಶ್, ಪ್ರಜಾಪ್ರತಿನಿಧಿ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಸೇರಿದಂತೆ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಶತಮಾನೋತ್ಸವ ಸಂಭ್ರಮದ ಆಚರಣೆಗೆ ಸಿದ್ದತೆ

ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಸಭೆ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಂಭ್ರಮದ ಆಚರಣೆಗಾಗಿ ಸಭೆ ನಡೆಸಲು ಬುಧವಾರ ನಗರಕ್ಕೆ ಆಗಮಿಸಿದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ.  
    ಭದ್ರಾವತಿ, ಜೂ. ೨೧ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಒಂದೆಡೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಮತ್ತೊಂದೆಡೆ ಕಾರ್ಖಾನೆ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ.
    ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಕಾರ್ಖಾನೆಗೆ ಇತಿಹಾಸದ ವೈಭವ ಮರುಕಳುಹಿಸುವಂತೆ ಮಾಡಲು ಇದೀಗ ಕಾರ್ಖಾನೆ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಕಾರ್ಖಾನೆಯ ಕಾಯಂ, ಗುತ್ತಿಗೆ ಕಾರ್ಮಿಕ ಸಂಘಟನೆಗಳು ಹಾಗು ಅಧಿಕಾರಿಗಳ ಸಂಘ ಮುಂದಾಗಿವೆ. ಈ ಸಂಬಂಧ ಬುಧವಾರ ದೊಡ್ಡಣ್ಣ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಶತಮಾನೋತ್ಸವ ಸಂಭ್ರಮದಿಂದ ಆಚರಿಸುವ ಸಂಬಂಧ ಒಮ್ಮತದ ತಿರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
    ಶತಮಾನೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಮತ್ತೊಮ್ಮೆ ಸಭೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.  ನಂತರ ಶತಮಾನೋತ್ಸವದ ಅಂತಿಮ ರೂಪುರೇಷೆಗಳು ಹೊರ ಬೀಳಲಿವೆ ಎನ್ನಲಾಗಿದೆ.
    ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ರಾಮಲಿಂಗಯ್ಯ, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭದ್ರಾವತಿ ವಿವಿಧೆಡೆ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭದ್ರವತಿಯಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಶುಗರ್ ಟೌನ್ ಲಯನ್ ಕ್ಷಬ್, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಹಾಗು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಯೋಗ ದಿನಾಚರಣೆ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
    ಭದ್ರಾವತಿ, ಜೂ. ೨೧ : ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬುಧವಾರ ನಗರದ ವಿವಿಧೆಡೆ ಶಾಲಾ-ಕಾಲೇಜುಗಳು, ಸರ್ಕಾರಿ ಕಛೇರಿಗಳು, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.
        ಪತಂಜಲಿ ಯೋಗ ಸಮಿತಿ ಹಾಗೂ ಶುಗರ್ ಟೌನ್ ಲಯನ್ ಕ್ಷಬ್, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಹಾಗು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಯೋಗ ದಿನಾಚರಣೆ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
    ಪ್ರಮುಖರಾದ ಪತಂಜಲಿ ಯೋಜ ಸಮಿತಿ ಜಿಲ್ಲಾ ಪ್ರಭಾರಿ ಅನ್ನಪೂರ್ಣ ಸತೀಶ್, ತಾಲೂಕು ಪ್ರಭಾರಿ ಚನ್ನಪ್ಪ, ಯುವ ಪ್ರಭಾರಿ ಮಲ್ಲಿಕಾರ್ಜುನ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಅಧ್ಯಕ್ಷ ಪಿ. ವೆಂಕಟರಮಣ ಶೇಟ್, ಜಿಲ್ಲಾ ಸಂರಕ್ಷಕ್ ವೀಣಾ ಎಸ್. ಭಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರಸಭೆ ವತಿಯಿಂದ ಆಚರಿಸಲಾಯಿತು.

    ನಗರಸಭೆಯಲ್ಲಿ ಯೋಗ ದಿನಾಚರಣೆ:

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರಸಭೆ ವತಿಯಿಂದ ಆಚರಿಸಲಾಯಿತು. ನಗರಸಭೆ ಪ್ರಭಾರಿ ಅಧ್ಯಕ್ಷೆ ಸರ್ವಮಂಗಳ ಭೈರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಶೃತಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಾಕಾರ್ಮಿಕರು ಪಾಲ್ಗೊಂಡಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರದ ನ್ಯೂಟೌನ್ ಲಿಟ್ಲ್ ಫ್ಲವರ್ ಆಂಗ್ಲ ಶಾಲೆಯಲ್ಲಿ ಆಚರಿಸಲಾಯಿತು.

    ಲಿಟ್ಲ್ ಫ್ಲವರ್ ಆಂಗ್ಲ ಶಾಲೆ :

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರದ ನ್ಯೂಟೌನ್ ಲಿಟ್ಲ್ ಫ್ಲವರ್ ಆಂಗ್ಲ ಶಾಲೆಯಲ್ಲಿ ಆಚರಿಸಲಾಯಿತು.
    ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಸೆಂಟರ್ ಯೋಗ ಗುರು ಮಹೇಶ್ ಮತ್ತು ಯೋಗ ಶಿಕ್ಷಕಿ ದಾಕ್ಷಾಯಿಣಿ ಯೋಗ ಪ್ರದರ್ಶನದ ಮೂಲಕ ಮಕ್ಕಳಿಗೆ ಯೋಗ ಮಹತ್ವ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಆರ್. ರಿಚಿ ರೋಹಿತ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರದ ಬೈಪಾಸ್ ರಸ್ತೆ, ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.

    ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆ:

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರದ ಬೈಪಾಸ್ ರಸ್ತೆ, ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.
    ನ್ಯೂಟೌನ್ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ಕೆ.ಎಂ ಮಾಲತೇಶ್ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು. ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾಸ್ಟರ್ ಕ್ರಿಸ್ತುರಾಜ್ ನಿಲಗಲ್ ಅಧ್ಯಕ್ಷತೆ ವಹಿಸಿದ್ದರು.
    ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಮೀಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಪಶ್ಚಿಮ)ಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡು ಯೋಗ ದಿನಾಚರಣೆಯಲ್ಲಿ ಸಂಭವಿಸಿದರು.
    ಪತ್ರಿಕಾ ವಿತರಕ ಮಹಮದ್ ರಫಿ, ಪತ್ರಕರ್ತ ಅನಂತಕುಮಾರ್, ಶಿಕ್ಷಕಿಯರಾದ ಜ್ಯೋತಿ, ಸುಮತಿ ಕಾರಂತ್, ಸವಿತ, ಸಂಸ್ಥೆಯ ಆಡಳಿತಾಧಿಕಾರಿ ಪಾದರ್ ಸೋನಿ ಮ್ಯಾಥ್ಯೋ ಜೆನ್ ಹಾಗು ಸಿಬ್ಬಂದಿ ವರ್ಗದವರಾದ ಕೊಂಡಯ್ಯ, ಲಕ್ಷ್ಮೀ ಹಾಗು ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ಭದ್ರಾವತಿ ತಾಲೂಕು ಮಂಡಲದಿಂದ ಈ ಬಾರಿ ವಸುದೈವ ಕುಟುಂಬಕಂ ಎಂಬ ಧ್ಯೇಯ ಘೋಷದೊಂದಿಗೆ ಆಚರಿಸಲಾಯಿತು. 

    ಬಿಜೆಪಿ ತಾಲೂಕು ಮಂಡಲದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ :

    ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ತಾಲೂಕು ಮಂಡಲದಿಂದ ಈ ಬಾರಿ ವಸುದೈವ ಕುಟುಂಬಕಂ ಎಂಬ ಧ್ಯೇಯ ಘೋಷದೊಂದಿಗೆ ಆಚರಿಸಲಾಯಿತು.  ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್  ಅಧ್ಯಕ್ಷತೆ ವಹಿಸಿದ್ದರು.
    ಯೋಗ ಗುರುಗಳಾದ ಚನ್ನಪ್ಪ, ಜಂಗಮಪ್ಪ. ಲಕ್ಷ್ಮೀ, ತೃಪ್ತಿ, ಸತ್ಯ ಮತ್ತು ಆರ್. ಉಮಾಪತಿ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು. ಶಿವರಾಜ್ ಯೋಗ ಕುರಿತು ಉಪನ್ಯಾಸ ನೀಡಿದರು.
    ಪಕ್ಷದ ಮಂಡಲ ಕಾರ್ಯದರ್ಶಿ ಚನ್ನೇಶ್. ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಜಯಲಕ್ಷ್ಮಿ, ಸುಲೋಚನಪ್ರಕಾಶ್, ಸರಸ್ವತಿ, ಮಂಜುಳಾ, ಉಷಾ ವೀರಶೇಖರ್, ಶ್ಯಾಮಲ, ಪರಮೇಶ್ವರಪ್ಪ, ರಘು ರಾವ್, ರಾಜಶೇಖರ್, ಚಂದ್ರಪ್ಪ,  ಕಾ.ರಾ ನಾಗರಾಜ್, ಧರ್ಮೋಜಿರಾವ್, ಸಾಗರ್, ಕವಿತಾ ರಾವ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಯೋಗ ಆಸಕ್ತರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೯ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ಡಾ. ವೀಣಾ ಎಸ್ ಭಟ್, ಪ್ರಭು ಹಾಗು ಎ.ಕೆ ನಾಗೇಂದ್ರಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವೇಶ್ವರಾಯ ವಿದ್ಯಾಸಂಸ್ಥೆ:

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೯ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
     ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕ, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ವಿದ್ಯಾಸಂಸ್ಥೆ ಅಧ್ಯಕ್ಷ  ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಟಿ.ಜಿ ಸುರೇಶ್ ಆಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭು ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಎಸ್. ಭಟ್ ಮತ್ತು ರಾಷ್ಟ್ರೀಯ ಯೋಗ ಕ್ರೀಡಾಪಟು ಪಾಲಾಕ್ಷಪ್ಪ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು.  
    ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ನಿರೂಪಿಸಿದರು.  ಶಿಕ್ಷಕರಾದ ಕವಿತಾ ಪ್ರಾರ್ಥಿಸಿ, ಎಂ.ಎಸ್ ಮಂಜುನಾಥ್ ಸ್ವಾಗತಿಸಿ, ರೇಣುಕಪ್ಪ ವಂದಿಸಿದರು.


ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್‌ರವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು :

    ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವಣದಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
    ನಗರದ ಅಂತರಾಷ್ಟ್ರೀಯ ಯೋಗ ಪಟು, ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್‌ರವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಯುವ ಯೋಗಪಟು ಬಿ.ಆರ್ ಧನುಷ್ ಯೋಗ ಪ್ರದರ್ಶನ ನಡೆಸಿಕೊಟ್ಟರು.
    ಪ್ರಾಂಶುಪಾಲ ಡಾ. ಮಂಜುನಾಥ ಸಕ್ಲೇಶ್, ಐಕ್ಯೂಎಸಿ ಸಂಚಾಲಕ ಡಾ.ಟಿ. ಪ್ರಸನ್ನ, ಸಂಚಾಲಕ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್ ಮತ್ತು ಅಧ್ಯಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಾರದಾ ಪ್ರಾರ್ಥಿಸಿ,  ಚಂದನ ನಿರೂಪಿಸಿ, ಪ್ರಭಾಕರ್ ವಂದಿಸಿದರು.