Wednesday, June 21, 2023

ವಿಐಎಸ್‌ಎಲ್ ಶತಮಾನೋತ್ಸವ ಸಂಭ್ರಮದ ಆಚರಣೆಗೆ ಸಿದ್ದತೆ

ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಸಭೆ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಂಭ್ರಮದ ಆಚರಣೆಗಾಗಿ ಸಭೆ ನಡೆಸಲು ಬುಧವಾರ ನಗರಕ್ಕೆ ಆಗಮಿಸಿದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ.  
    ಭದ್ರಾವತಿ, ಜೂ. ೨೧ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಒಂದೆಡೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಮತ್ತೊಂದೆಡೆ ಕಾರ್ಖಾನೆ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ.
    ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಕಾರ್ಖಾನೆಗೆ ಇತಿಹಾಸದ ವೈಭವ ಮರುಕಳುಹಿಸುವಂತೆ ಮಾಡಲು ಇದೀಗ ಕಾರ್ಖಾನೆ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಕಾರ್ಖಾನೆಯ ಕಾಯಂ, ಗುತ್ತಿಗೆ ಕಾರ್ಮಿಕ ಸಂಘಟನೆಗಳು ಹಾಗು ಅಧಿಕಾರಿಗಳ ಸಂಘ ಮುಂದಾಗಿವೆ. ಈ ಸಂಬಂಧ ಬುಧವಾರ ದೊಡ್ಡಣ್ಣ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಶತಮಾನೋತ್ಸವ ಸಂಭ್ರಮದಿಂದ ಆಚರಿಸುವ ಸಂಬಂಧ ಒಮ್ಮತದ ತಿರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
    ಶತಮಾನೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಮತ್ತೊಮ್ಮೆ ಸಭೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.  ನಂತರ ಶತಮಾನೋತ್ಸವದ ಅಂತಿಮ ರೂಪುರೇಷೆಗಳು ಹೊರ ಬೀಳಲಿವೆ ಎನ್ನಲಾಗಿದೆ.
    ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ರಾಮಲಿಂಗಯ್ಯ, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

No comments:

Post a Comment