Friday, October 8, 2021

ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿಬಾಬಾ ಸೇವಾ ಕ್ಷೇತ್ರದಲ್ಲಿ ಶುಕ್ರವಾರ  ತಾಲೂಕಿನ ಇಸಿಓ, ಬಿಐಇಆರ್‌ಟಿ ಮತ್ತು ಸಿಆರ್‌ಪಿ ಹಾಗು ಆಯ್ದ ಶಾಲೆಗಳ ಶಿಕ್ಷಕರು, ವಿಕಲನ ಚೇತನ ಮಕ್ಕಳು ಮತ್ತು ಪೋಷಕರಿಗೆ ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. ಚಿತ್ರಕಲಾ ಶಿಕ್ಷಕರಾದ ಜನ್ನಾಪುರ ಸಹ್ಯಾದಿ ಶಾಲೆಯ ಸುಧೀಂದ್ರ ಕುಮಾರ್, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆಯ ವೆಂಕಟೇಶ್,  ಕನಕ ವಿದ್ಯಾಸಂಸ್ಥೆಯ ಗಣೇಶ್ ಮತ್ತು ಪೇಪರ್‌ಟೌನ್ ಪ್ರೌಢಶಾಲೆಯ ಬಾಲರಾಜ್ ಅವರನ್ನು  ಕಾರ್ಯಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೮ : ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಶಿಕ್ಷಣ ವಿಭಾಗದ ವತಿಯಿಂದ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿಬಾಬಾ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ತಾಲೂಕಿನ ಇಸಿಓ, ಬಿಐಇಆರ್‌ಟಿ ಮತ್ತು ಸಿಆರ್‌ಪಿ ಹಾಗು ಆಯ್ದ ಶಾಲೆಗಳ ಶಿಕ್ಷಕರು, ವಿಕಲನ ಚೇತನ ಮಕ್ಕಳು ಮತ್ತು ಪೋಷಕರಿಗೆ ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
    ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದ ಡಿವೈಪಿಸಿ ಉಮಾ ಮಹೇಶ್ವರ್, ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ವಿವರ ನೀಡಿ ಇಲಾಖೆಯ ಜವಾಬ್ದಾರಿಗಳನ್ನು ವಿವರಿಸಿದರು.
    ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಮಾನಸ ನರ್ಸಿಂಗ್ ಹೋಂ ವೈದ್ಯೆ ಡಾ. ವಿದ್ಯಾ ಮಾತನಾಡಿ, ಬುದ್ಧಿಮಾಂದ್ಯತೆ ಎಂದರೇನು?, ಬುದ್ದಿಮಾಂದ್ಯತೆಗೆ ಕಾರಣಗಳು, ಪರಿಹಾರಗಳು ಹಾಗೂ ಅಂತಹ ಮಕ್ಕಳಿಗೆ ನೀಡಬಹುದಾದ ಜೀವನ ಕೌಶಲ್ಯಗಳು, ಸಮುದಾಯ ನೀಡಬಹುದಾದ ಸಹಕಾರಗಳ ಕುರಿತು ಸಾಂದರ್ಭಿಕ ವಿಡಿಯೋಗಳ ಪ್ರದರ್ಶನದ ಮೂಲಕ ಸಮಗ್ರವಾಗಿ ಮಾಹಿತಿ ನೀಡಿದರು.
    ನ್ಯೂಟೌನ್ ತರಂಗ ಶಾಲೆಯ ತಾರಾಮಣಿ  ಶ್ರವಣ ದೋಷ ನ್ಯೂನತೆಗಳು ಕುರಿತು ಮಾತನಾಡಿ, ಶ್ರವಣ ದೋಷದ ಲಕ್ಷಣಗಳು, ಕಾರಣಗಳು, ಪರಿಹಾರಗಳು ಹಾಗೂ ಸಮುದಾಯದ ಸಹಕಾರಗಳ ಕುರಿತು ಮಾಹಿತಿ ನೀಡಿದರು.
    ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಚೇರಿಯ ಕಟ್ಟಡವನ್ನು ಚಿತ್ರ ಕಲೆಯ ಕೌಶಲ್ಯದ ಮೂಲಕ ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಿರುವ ಚಿತ್ರಕಲಾ ಶಿಕ್ಷಕರಾದ ಜನ್ನಾಪುರ ಸಹ್ಯಾದಿ ಶಾಲೆಯ ಸುಧೀಂದ್ರ ಕುಮಾರ್, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆಯ ವೆಂಕಟೇಶ್,  ಕನಕ ವಿದ್ಯಾಸಂಸ್ಥೆಯ ಗಣೇಶ್ ಮತ್ತು ಪೇಪರ್‌ಟೌನ್ ಪ್ರೌಢಶಾಲೆಯ ಬಾಲರಾಜ್ ಅವರನ್ನು  ಕಾರ್ಯಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪನಿರ್ದೇಶಕರ ಕಛೇರಿಯ ಡಿವೈಪಿಸಿ ಗಣಪತಿ, ರಾಮಪ್ಪಗೌಡ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಿಆರ್‌ಪಿ ಸುನಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮನ್ವಯಾಧಿಕಾರಿ ವೈ. ಗಣೇಶ್ ಸ್ವಾಗತಿಸಿದರು. ಕವಿತಾ ನಿರೂಪಿಸಿದರು.  ಮನ್ಸೂರ್ ಅಹ್ಮದ್ ವಂದಿಸಿದರು.

ಬಾಲ್ಯದಿಂದಲೇ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ : ಹೊ.ರಾ. ರಾಜಾರಾಂ

ಭದ್ರಾವತಿಯಲ್ಲಿ ತರುಣ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಹಳೇನಗರದ ಕೇಶವಪುರ ಬಡಾವಣೆಯ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿದ್ಯಾಭಾರತಿ ಶಿವಮೊಗ್ಗ ವಿಭಾಗದ ಪ್ರಮುಖ್ ಹೊ.ರಾ. ರಾಜಾರಾಂ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಅ. ೮: ಮಕ್ಕಳು ಬಾಲ್ಯದಿಂದಲೇ ಕಲಿಕೆ ಬಗ್ಗೆ ಆಸಕ್ತಿ ಹೊಂದುವ ನಿಟ್ಟಿನಲ್ಲಿ ಪೋಷಕರು ಅನುಸರಿಸಬೇಕಾದ ಕ್ರಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಾಲತಿ ಕಾನಿಟ್ಕರ್ ಅವರ  'ಆನಂದದಿಂದ ಅಧ್ಯಯನ ಮಾಡೋಣ' ಅನುವಾದಿತ ಪುಸ್ತಕ ಹೆಚ್ಚು ಸಹಕಾರಿಯಾಗಿದೆ ಎಂದು ವಿದ್ಯಾಭಾರತಿ ಶಿವಮೊಗ್ಗ ವಿಭಾಗದ ಪ್ರಮುಖ್ ಹೊ.ರಾ. ರಾಜಾರಾಂ ಹೇಳಿದರು.
    ಅವರು ಶುಕ್ರವಾರ ತರುಣ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಹಳೇನಗರದ ಕೇಶವಪುರ ಬಡಾವಣೆಯ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೀಪಕ್ ವಸಂತ್ ಬೇತ್‌ಕೇಕರ್ ಅವರು ಮರಾಠಿ ಭಾಷೆಯಲ್ಲಿ ಬರೆದಿರುವ ಪುಸ್ತಕ ಪ್ರತಿಯೊಬ್ಬರ ಬದುಕನ್ನು ಬದಲಿಸುವ ಸಮಗ್ರವಾದ ವಿಚಾರಧಾರೆಗಳನ್ನು ಒಳಗೊಂಡಿದೆ. ಶಿಕ್ಷಣದ ಮೌಲ್ಯ, ಮಕ್ಕಳ ಕಲಿಕೆ, ಪೋಷಕರ ನಡವಳಿಕೆ, ಜವಾಬ್ದಾರಿಗಳು ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ವಿವರಿಸಲಾಗಿದೆ. ಬೇತ್‌ಕೇಕರ್ ಅವರು ತಮ್ಮ ಬದುಕಿನ ವಾಸ್ತವದ ಅನುಭವಗಳನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ ಎಂದರು.
    ಮಾಲತಿ ಕಾನಿಟ್ಕರ್ ಅವರು ಈ ಪುಸ್ತಕವನ್ನು ಕನ್ನಡ ಅನುವಾದಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರು ಈ ಪುಸ್ತಕ ಕೊಂಡು ಓದುವ ಜೊತೆಗೆ ಅದರಲ್ಲಿನ ವಿಚಾರಧಾರೆಗಳನ್ನು ಜೀವನ ಅಳವಡಿಸಿಕೊಳ್ಳಬೇಕೆಂದರು.
    ಮಾಲತಿ ಕಾನಿಟ್ಕರ್ ಪುಸ್ತಕದಲ್ಲಿನ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಮನವಿ ಮಾಡಿದರು. ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ನಡೆದ ನವೋದಯ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಅನನ್ಯ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದು, ಈಕೆಯನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಪೋತ್ಸಾಹಿಸಲಾಯಿತು. ಈಕೆ ತಾಲೂಕಿನ ಅಂತರಗಂಗೆ ಅರುಣೋದಯ ವಿದ್ಯಾಸಂಸ್ಥೆಯ ಸಹ ಶಿಕ್ಷಕ ವೆಂಕಟೇಶ್ ಅವರ ಪುತ್ರಿಯಾಗಿದ್ದಾಳೆ.
    ಮಧುಕರ್ ಕಾನಿಟ್ಕರ್, ಮೃತ್ಯುಂಜಯ ಕಾನಿಟ್ಕರ್ ಹಾಗು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಪೋಷಕರು, ವಿದ್ಯಾರ್ಥಿಗಳು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.


ಇತ್ತೀಚೆಗೆ ನಡೆದ ನವೋದಯ ಪರೀಕ್ಷೆಯಲ್ಲಿ ಭದ್ರಾವತಿಯ ವಿದ್ಯಾರ್ಥಿನಿ ಅನನ್ಯ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದು, ಈಕೆಯನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಪೋತ್ಸಾಹಿಸಲಾಯಿತು.


ಐಟಿಐ ಕಿರಿಯ ತರಬೇತಿ ಅಧಿಕಾರಿ ತ್ರಿವೇಣಿ ನಿಧನ

ತ್ರಿವೇಣಿ
    ಭದ್ರಾವತಿ, ಅ. ೮: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದುರಸ್ತಿಗಾರ ವಿಭಾಗದ ಕಿರಿಯ ತರಬೇತಿ ಅಧಿಕಾರಿ ತ್ರಿವೇಣಿ ಗುರುವಾರ ನಿಧನ ಹೊಂದಿದರು.
    ೨೦೦೩ರಿಂದ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿವಮೊಗ್ಗದಲ್ಲಿ ವಾಸಿಸುತ್ತಿದ್ದ ಇವರು ಪತಿ, ಓರ್ವ ಪುತ್ರನನ್ನು ಹೊಂದಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.


ಮಂತ್ರಾಲಯ ಶ್ರೀಗಳಿಂದ ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆ

ಭದ್ರಾವತಿಯಲ್ಲಿ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ಸಿದ್ಧಾರೂಢ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ  ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆಯನ್ನು ಶುಕ್ರವಾರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.
    ಭದ್ರಾವತಿ, ಅ. ೮: ಶ್ರೀ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ಸಿದ್ಧಾರೂಢ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ  ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆಯನ್ನು ಶುಕ್ರವಾರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.
    ಪ್ರತಿಷ್ಠಾಪನೆಗೂ ಮೊದಲು ಹವನ ಹೋಮಗಳು, ೧೦೮ ಕಲಶ ಪ್ರತಿಷ್ಠಾಪನೆ ಜರುಗಿದವು. ನಂತರ ಕಲಶಾಭಿಷೇಕ, ಮಹಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ, ಅಲಂಕಾರ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನಡೆದವು. ಮಧ್ಯಾಹ್ನ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
    ಶ್ರೀ ಸಂಕರ್ಷಣ ಧರ್ಮ ಸಂಸ್ಥೆ ಅಧ್ಯಕ್ಷ ವಾಸುದೇವಮೂರ್ತಿ, ಉಪಾಧ್ಯಕ್ಷ ಸಿ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್. ಮಧುಸೂದನ್ ಉಪಸ್ಥಿತರಿದ್ದರು. ಧಾರ್ಮಿಕ ಆಚರಣೆಗಳು ವೇದಬ್ರಹ್ಮ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸಚಾರ್ ಮತ್ತು ಕೆ. ರಾಮಚಂದ್ರಚಾರ್ ಅವರ ನೇತೃತ್ವದಲ್ಲಿ ಜರುಗಿದವು.
    ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂ. ಮಂಜುನಾಥ್, ಈ ಭಾಗದ ನಗರಸಭಾ ಸದಸ್ಯ ಆರ್‌. ಶ್ರೇಯಸ್‌(ಚಿಟ್ಟೆ)  ಸೇರಿದಂತೆ ಸಾವಿರಾರು ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು. ನಂತರ ಶ್ರೀಗಳಿಂದ ಅನುಗ್ರಹ ಭಾಷಣ ನಡೆಯಿತು. ಭಕ್ತರಿಂದ ಪಾದಂಗಳವರ ಪಾದ ಪೂಜೆ ನೆರವೇರಿತು. ಕೊನೆಯಲ್ಲಿ ಮಂತ್ರಾಕ್ಷತೆ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


ಭದ್ರಾವತಿ ನಗರಕ್ಕೆ ಗುರುವಾರ ರಾತ್ರಿ ಆಗಮಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು.