Friday, October 8, 2021

ಬಾಲ್ಯದಿಂದಲೇ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ : ಹೊ.ರಾ. ರಾಜಾರಾಂ

ಭದ್ರಾವತಿಯಲ್ಲಿ ತರುಣ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಹಳೇನಗರದ ಕೇಶವಪುರ ಬಡಾವಣೆಯ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿದ್ಯಾಭಾರತಿ ಶಿವಮೊಗ್ಗ ವಿಭಾಗದ ಪ್ರಮುಖ್ ಹೊ.ರಾ. ರಾಜಾರಾಂ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಅ. ೮: ಮಕ್ಕಳು ಬಾಲ್ಯದಿಂದಲೇ ಕಲಿಕೆ ಬಗ್ಗೆ ಆಸಕ್ತಿ ಹೊಂದುವ ನಿಟ್ಟಿನಲ್ಲಿ ಪೋಷಕರು ಅನುಸರಿಸಬೇಕಾದ ಕ್ರಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಾಲತಿ ಕಾನಿಟ್ಕರ್ ಅವರ  'ಆನಂದದಿಂದ ಅಧ್ಯಯನ ಮಾಡೋಣ' ಅನುವಾದಿತ ಪುಸ್ತಕ ಹೆಚ್ಚು ಸಹಕಾರಿಯಾಗಿದೆ ಎಂದು ವಿದ್ಯಾಭಾರತಿ ಶಿವಮೊಗ್ಗ ವಿಭಾಗದ ಪ್ರಮುಖ್ ಹೊ.ರಾ. ರಾಜಾರಾಂ ಹೇಳಿದರು.
    ಅವರು ಶುಕ್ರವಾರ ತರುಣ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಹಳೇನಗರದ ಕೇಶವಪುರ ಬಡಾವಣೆಯ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೀಪಕ್ ವಸಂತ್ ಬೇತ್‌ಕೇಕರ್ ಅವರು ಮರಾಠಿ ಭಾಷೆಯಲ್ಲಿ ಬರೆದಿರುವ ಪುಸ್ತಕ ಪ್ರತಿಯೊಬ್ಬರ ಬದುಕನ್ನು ಬದಲಿಸುವ ಸಮಗ್ರವಾದ ವಿಚಾರಧಾರೆಗಳನ್ನು ಒಳಗೊಂಡಿದೆ. ಶಿಕ್ಷಣದ ಮೌಲ್ಯ, ಮಕ್ಕಳ ಕಲಿಕೆ, ಪೋಷಕರ ನಡವಳಿಕೆ, ಜವಾಬ್ದಾರಿಗಳು ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ವಿವರಿಸಲಾಗಿದೆ. ಬೇತ್‌ಕೇಕರ್ ಅವರು ತಮ್ಮ ಬದುಕಿನ ವಾಸ್ತವದ ಅನುಭವಗಳನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ ಎಂದರು.
    ಮಾಲತಿ ಕಾನಿಟ್ಕರ್ ಅವರು ಈ ಪುಸ್ತಕವನ್ನು ಕನ್ನಡ ಅನುವಾದಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರು ಈ ಪುಸ್ತಕ ಕೊಂಡು ಓದುವ ಜೊತೆಗೆ ಅದರಲ್ಲಿನ ವಿಚಾರಧಾರೆಗಳನ್ನು ಜೀವನ ಅಳವಡಿಸಿಕೊಳ್ಳಬೇಕೆಂದರು.
    ಮಾಲತಿ ಕಾನಿಟ್ಕರ್ ಪುಸ್ತಕದಲ್ಲಿನ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಮನವಿ ಮಾಡಿದರು. ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ನಡೆದ ನವೋದಯ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಅನನ್ಯ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದು, ಈಕೆಯನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಪೋತ್ಸಾಹಿಸಲಾಯಿತು. ಈಕೆ ತಾಲೂಕಿನ ಅಂತರಗಂಗೆ ಅರುಣೋದಯ ವಿದ್ಯಾಸಂಸ್ಥೆಯ ಸಹ ಶಿಕ್ಷಕ ವೆಂಕಟೇಶ್ ಅವರ ಪುತ್ರಿಯಾಗಿದ್ದಾಳೆ.
    ಮಧುಕರ್ ಕಾನಿಟ್ಕರ್, ಮೃತ್ಯುಂಜಯ ಕಾನಿಟ್ಕರ್ ಹಾಗು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಪೋಷಕರು, ವಿದ್ಯಾರ್ಥಿಗಳು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.


ಇತ್ತೀಚೆಗೆ ನಡೆದ ನವೋದಯ ಪರೀಕ್ಷೆಯಲ್ಲಿ ಭದ್ರಾವತಿಯ ವಿದ್ಯಾರ್ಥಿನಿ ಅನನ್ಯ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದು, ಈಕೆಯನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಪೋತ್ಸಾಹಿಸಲಾಯಿತು.


No comments:

Post a Comment