Thursday, February 18, 2021

ಉತ್ತಮ ಕಾರ್ಯಕ್ಕೆ ಜನರಿಂದ ಸ್ಪಂದನೆ : ಮನೋಹರ್

ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದ ವತಿಯಿಂದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರಂಭದಲ್ಲಿ
   ಭದ್ರಾವತಿ, ಫೆ. ೧೮: ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಜನರು ಗುರುತಿಸುವ ಜೊತೆಗೆ ಸ್ಮರಿಸುತ್ತಾರೆಂದು ನಗರಸಭೆ ಪೌರಾಯುಕ್ತ ಮನೋಹರ್ ತಿಳಿಸಿದರು.
   ಅವರು ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದ ವತಿಯಿಂದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳಾ ಸಂಘ ಸಂಘಟನೆಗಳು ಸಹ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಶಾಶ್ವತಿ ಮಹಿಳಾ ಸಮಾಜ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
  ನ್ಯಾಯವಾದಿ ರೂಪಾರಾವ್ ಸಮಾರಂಭದ ಅಧ್ಯಕ್ಷತೆ ಮಾತನಾಡಿ, ಕಾನೂನಿನ ಅರಿವಿನೊಂದಿಗೆ ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
  ಸುನಂದ ತಂಡದವರು ಪ್ರಾರ್ಥಿಸಿದರು. ಮಮತ ಸ್ವಾಗತಿಸಿದರು. ಯಶೋಧ ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಆರಾಧ್ಯ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವರ್ಷದ ಅದೃಷ್ಟದ ಮಹಿಳೆಯಾಗಿ ರೂಪಾರಾವ್ ಲಾಟರಿ ಮೂಲಕ ಆಯ್ಕೆಯಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫೆ.೧೯ರಂದು ರಕ್ತದಾನ ಶಿಬಿರ

ಭದ್ರಾವತಿ, ಫೆ. ೧೮: ತಾಲೂಕಿನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅರಳಿಹಳ್ಳಿ ಮತ್ತು ಸೀತಾರಾಮಪುರ ಘಟಕದ ವತಿಯಿಂದ ಫೆ. ೧೯ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅರಳಿಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ಶಿಬಿರ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

ಫೆ.೧೯ರಂದು ಶಾಸಕ ಹ್ಯಾರಿಸ್ ವಿರುದ್ಧ ಪ್ರತಿಭಟನೆ

ಭದ್ರಾವತಿ, ಫೆ. ೧೮: ಕನ್ನಡದ ವರನಟ ಡಾ. ರಾಜ್‌ಕುಮಾರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಹ್ಯಾರಿಸ್ ವಿರುದ್ಧ ಫೆ.೧೯ರಂದು ಮಧ್ಯಾಹ್ನ ೧೨ ಗಂಟೆಗೆ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಶಾಸಕ ಹ್ಯಾರಿಸ್ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಪುತ್ಥಳಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ರಾಜ್‌ಕುಮಾರ್ ಅಭಿಮಾನಿಗಳಿಗೆ ಹಾಗು ಕನ್ನಡಿಗರಿಗೆ ಮಾಡಿರುವ ಅಪಮಾನವಾಗಿದ್ದು, ಅಲ್ಲದೆ ಅವರ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಕೋರಿದ್ದಾರೆ.

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ, ಮೈಕ್ರೋ ಫೈನಾನ್ಸ್ ಕಂಪನಿಗಳ ಸ್ಥಗಿತಕ್ಕೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಜೆಡಿಯು ಶಶಿಕುಮಾರ್ ಎಸ್. ಗೌಡ ಮನವಿ


ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯಾಪ್ತಿಗೆ ಒಳಪಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಫೆ. ೧೮: ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯಾಪ್ತಿಗೆ ಒಳಪಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ.
   ತಾಲೂಕಿನ ಆನವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ರಾಜ್ಯದಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಬಡ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಲಿಡ್ ಬ್ಯಾಂಕ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗಿದ್ದು, ಆದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಮೈಕೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕೋರಿದ್ದಾರೆ.
   ಅವನತಿ ದಾರಿಯಲ್ಲಿ ಸಾಗುತ್ತಿರುವ ನಗರದ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಕಳೆದ ಸುಮಾರು ೫ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದ್ದಾರೆ.
   ಸರ್ಕಾರಿ ಆದೇಶದ ಪ್ರಕಾರ ಪ್ರತಿ ತಿಂಗಳು ಸರ್ಕಾರಿ ರಜಾ ದಿನ ಹೊರತುಪಡಿಸಿ ಎಲ್ಲಾ ದಿನ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು. ಆದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕೇವಲ ೫ ರಿಂದ ೬ ದಿನ ಮಾತ್ರ ತೆಗೆಯುತ್ತಿದ್ದಾರೆ. ಸರ್ಕಾರಿ ಆದೇಶ ಪಾಲಿಸುತ್ತಿಲ್ಲ ತಕ್ಷಣ ಕ್ರಮ ಕೈಗೊಳ್ಳುವುದು. ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ೨-೩ ತಲೆಮಾರುಗಳಿಂದ ಸರ್ಕಾರದ ಆದೇಶದ ವಿರುದ್ಧವಾಗಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು ೭೦ ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಸುಮಾರು ೨೦ ನ್ಯಾಯಬೆಲೆ ಅಂಗಡಿಗಳಲ್ಲಿ ಆದೇಶ ಉಲ್ಲಂಘಿಸಲಾಗಿದೆ.  ಈ ಕುರಿತು ಈಗಾಗಲೇ ಹಲವು ಬಾರಿ ಆಹಾರ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರಿಗೆ(ಎ.ಡಿ) ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ.  
   ಸಂಯುಕ್ತ ಜನತಾದಳ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಎಂ.ಡಿ ಕಲಾವತಿ ಹಾಗು ಮುಖಂಡರಾದ ಡಿ.ಕೆ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಸ್ಥಾನ ಪುನರ್ ನಿರ್ಮಾಣ ಮಾಡಿ

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ : ಗೃಹ ಸಚಿವರಿಗೆ ಮನವಿ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅರೇಹಳ್ಳಿ ತಾಂಡದ ಗೋಮಾಳ ಜಾಗದಲ್ಲಿ ನಿರ್ಮಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವಂತೆ ಹಾಗು ದೇವಸ್ಥಾನ ನೆಲಸಮಗೊಳಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೮: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅರೇಹಳ್ಳಿ ತಾಂಡದ ಗೋಮಾಳ ಜಾಗದಲ್ಲಿ ನಿರ್ಮಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವಂತೆ ಹಾಗು ದೇವಸ್ಥಾನ ನೆಲಸಮಗೊಳಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
   ಸುಮಾರು ೨೦ ವರ್ಷಗಳಿಂದಲೂ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಸ್ಥಾನವಿದ್ದು, ಈ ದೇವಸ್ಥಾನದಿಂದ ಯಾರಿಗೂ ತೊಂದರೆಯಾಗಿರುವುದಿಲ್ಲ. ಕೆಲವು ಕಿಡಿಗೇಡಿಗಳು ಜಾಗವನ್ನು ಕಬಳಿಸುವ ಹುನ್ನಾರದಿಂದ ಹಾಗು ಬಂಜಾರ ಸಮಾಜಕ್ಕೆ ಮಸಿ ಬಳಿಯ ಬೇಕೆಂಬ ದುರುದ್ದೇಶದಿಂದ ದೇವಸ್ಥಾನವನ್ನು ನೆಲಸಮ ಗೊಳಿಸಿದ್ದಾರೆಂದು ಆರೋಪಿಸಲಾಯಿತು.
   ಈ ಕೃತ್ಯ ಬಂಜಾರ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಗಲಭೆಗೆ ಕಾರಣವಾಗುವ ಮೊದಲು ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಲಾಯಿತು.
ಬಂಜಾರ ಯುವಕರ ಸಂಘದ ತಾಲೂಕು ಅಧ್ಯಕ್ಷ ಪಿ. ಕೃಷ್ಣನಾಯ್ಕ, ಪ್ರಮುಖರಾದ ಶಂಕರನಾಯ್ಕ, ನಾಗನಾಯ್ಕ, ಮಂಜುನಾಯ್ಕ, ವೆಂಕಟೇಶ್‌ನಾಯ್ಕ ಮತ್ತು ಚಂದ್ರನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.