ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಏಕಾಂಗಿ ಪ್ರತಿಭಟನೆ
ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಕಾನೂನು ಉಲ್ಲಂಘಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಸೋಮವಾರದಿಂದ ಏಕಾಂಗಿಯಾಗಿ ಹೋರಾಟ ಆರಂಭಿಸಿದ್ದಾರೆ.
ಭದ್ರಾವತಿ, ಜ. ೧೧: ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಕಾನೂನು ಉಲ್ಲಂಘಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ತಾಲೂಕು ಕಛೇರಿ ಮುಂಭಾಗ ಸೋಮವಾರದಿಂದ ಏಕಾಂಗಿಯಾಗಿ ಹೋರಾಟ ಆರಂಭಿಸಿದ್ದಾರೆ.
ತಾಲೂಕಿನ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ವಂಶಪಾರಂಪರೆಯಾಗಿ ನಡೆಸಿಕೊಂಡು ಬರುತ್ತಿರುವ ಸುಮಾರು ೧೦ ನ್ಯಾಯಬೆಲೆ ಅಂಗಡಿಗಳಿದ್ದು, ಈ ಅಂಗಡಿ ಮಾಲೀಕರ ವಿದ್ಯಾಭ್ಯಾಸ, ವಯಸ್ಸು ಸೇರಿದಂತೆ ಇನ್ನಿತರ ಮೂಲ ದಾಖಲಾತಿಗಳನ್ನು ಪರಿಶೀಲಿಸುವಂತೆ ಪಕ್ಷದ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಅಲ್ಲದೆ ಪರವಾನಿಗೆ ಕೇವಲ ೩ ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಆದರೂ ಸಹ ೨ ರಿಂದ ೩ನೇ ತಲೆಮಾರಿನವರೆಗೂ ನ್ಯಾಯಬೆಲೆ ಅಂಗಡಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಸಂಬಂಧ ಪ್ರಶ್ನಿಸಿದ್ದಲ್ಲಿ ೩ ವರ್ಷಗಳ ನಂತರವೂ ಮುಂದುವರೆಸಿಕೊಂಡು ಹೋಗಲು ನ್ಯಾಯಾಲಯದ ಆದೇಶವಿರುವುದಾಗಿ ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ವಾಸ್ತವವಾಗಿ ಸರ್ಕಾರದ ಆದೇಶದ ಪ್ರಕಾರ ಅನುಕಂಪದ ಆಧಾರದ ಮೇಲೆ ನಿಗದಿತ ಮಾನದಂಡಗಳಂತೆ ಪರವಾನಿಗೆ ೩ ವರ್ಷಗಳ ಅವಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರು ಹೇಳುತ್ತಿರುವಂತೆ ಉಚ್ಛ ನ್ಯಾಯಾಲಯ ಅಥವಾ ಸರ್ವೋಚ್ಛ ನ್ಯಾಯಾಲಯದ ಆದೇಶಗಳಿದ್ದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗು ಸರ್ಕಾರದ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಆಯಾ ತಿಂಗಳ ಕಮೀಷನ್ ಹಣ ಆಯಾ ತಿಂಗಳಲ್ಲೇ ನೀಡಬೇಕು. ಕೊರೋನಾ ಸಂದರ್ಭದಲ್ಲಿ ಮೃತಪಟ್ಟಿರುವ ಅಂಗಡಿ ಮಾಲೀಕರಿಗೆ ಸರ್ಕಾರದ ವತಿಯಿಂದ ರು.೩೦ ಲಕ್ಷ ಪರಿಹಾರ ನೀಡಬೇಕೆಂದು ಶಶಿಕುಮಾರ್ ಎಸ್. ಗೌಡ ಮನವಿ ಮಾಡಿದ್ದಾರೆ.