ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮನೋಹರ್ ಭರವಸೆ
ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ಭದ್ರಾವತಿ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜ. ೧೧; ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೀನು ವಿತರಣೆ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಅಲ್ಲದೆ ಮೀನಿನ ತ್ಯಾಜ್ಯಗಳಿಂದ ರೋಗರುಚಿನಗಳು ಹರಡುವ ಭೀತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸ್ಥಳೀಯ ನಿವಾಸಿಗಳಿಗೆ ಹಾಗು ಸಮೀಪದಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ದುವಾರ್ಸನೆಯಿಂದ ತೊಂದರೆಯಾಗುತ್ತಿದೆ. ಅಲ್ಲದೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಲಭ್ಯಗಳಿಲ್ಲದೆ ಮೀನು ವ್ಯಾಪಾರಸ್ಥರಿಗೂ ಸಹ ಅನಾನುಕೂಲವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಮುಖಂಡರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪೌರಾಯುಕ್ತ ಮನೋಹರ್, ಮೀನುಗಾರರ ಕುಟುಂಬಗಳನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ವತಿಯಿಂದ ಅವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಗಿದೆ. ಅಲ್ಲದೆ ಸುಮಾರು ೧೦ ಕೋ.ರು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಸಹ ನಿರ್ಮಿಸಿಕೊಡಲಾಗುವುದು. ಮುಂದಿನ ಒಂದು ವರ್ಷದೊಳಗೆ ಎಲ್ಲವೂ ಕಾರ್ಯ ರೂಪಕ್ಕೆ ಬರಲಿದೆ. ಇದುವರೆಗೂ ನಡೆಸಿರುವ ಹೋರಾಟಕ್ಕೆ ಪ್ರತಿಫಲ ಸಿಗಲಿದೆ ಎಂದರು.
ಪಕ್ಷದ ಪ್ರಮುಖರಾದ ಅಧ್ಯಕ್ಷ ಪರಮೇಶ್ವರಚಾರ್, ಕಾರ್ಯದರ್ಶಿ ವಿನೋದ್, ಪ್ರಮುಖರಾದ ಎಚ್. ರವಿಕುಮಾರ್, ಎನ್.ಪಿ ಜೋಸೆಫ್, ಮುಳ್ಕೆರೆ ಲೋಕೇಶ್, ಪರಮೇಶ್ವರ್‌ನಾಯ್ಕ್, ಜಾವಿದ್, ಜೋಸೆಫ್, ಪೀಟರ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತ ದಿನೇಶ್, ರೇಷ್ಮಾಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment