ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಪ್ರತಿಭಟನಾ ಧರಣಿ
ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ತಕ್ಷಣ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಗುರುವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ತಕ್ಷಣ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಗುರುವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಹೃದಯ ಭಾಗದ ಭದ್ರಾನದಿಯಲ್ಲಿ ನಿರ್ಮಿಸಲಾಗಿರುವ ಸುಮಾರು ೧೫೦ ವರ್ಷಗಳಿಗೂ ಹಳೇಯದಾದ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಈ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ಕಳೆದ ಸುಮಾರು ೫ ವರ್ಷಗಳಿಂದ ನಿರ್ಮಿಸುತ್ತಿದ್ದು, ಆದರೆ ಇಂದಿಗೂ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಟ್ಟಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಪಕ್ಷದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಹಳೇಯ ಸೇತುವೆ ಸಂಪೂರ್ಣವಾಗಿ ಶಿಥಿಲಗೊಳ್ಳುತ್ತಿದ್ದು, ಈ ಸೇತುವೆ ಮೇಲೆ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರಿಂದಾಗಿ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜೀವಭಯದಲ್ಲಿ ವಾಹನ ಸವಾರರು, ಪಾದಚಾರಿಗಳು ಸಂಚರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕೆಆರ್‌ಡಿಸಿಎಲ್ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪಕ್ಷದ ಶಿವಮೊಗ್ಗ ಅಧ್ಯಕ್ಷ ಪ್ರಭು, ತಾಲೂಕು ಅಧ್ಯಕ್ಷ ನಾಗರಾಜರಾವ್ ಶಿಂಧೆ, ಪ್ರಧಾನ ಕಾರ್ಯದರ್ಶಿ ತೀರ್ಥೇಶ್, ತ್ಯಾಗರಾಜ, ಬಿ.ಎಸ್. ದಯಾನಂದ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.