Thursday, April 24, 2025

ಉಗ್ರ ಕೃತ್ಯ ನಡೆಯಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ :

ಪ್ರವಾಸಿಗರ ಮೇಲಿನ ಹತ್ಯೆಗೆ ಮುಸ್ಲಿಂ ಸಮುದಾಯದವರಿಂದ ದೇಶಾದ್ಯಂತ ಖಂಡನೆ 

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮಿನ್ ಮುಷಿರಾನೆ ಸಮಿತಿ ಹಿರಿಯ ಸದಸ್ಯ ಸಿ.ಎಂ.ಖಾದರ್ ಮಾತನಾಡಿದರು. 
    ಭದ್ರಾವತಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಲು ಕಾರಣವೇನು ಎಂಬುದನ್ನು ಹಾಗು ಕೃತ್ಯದ ಸಂಪೂರ್ಣ ಹಿನ್ನಲೆಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕೆಂದು ನಗರದ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮಿನ್ ಮುಷಿರಾನೆ ಸಮಿತಿ ಹಿರಿಯ ಸದಸ್ಯ ಸಿ.ಎಂ.ಖಾದರ್ ಒತ್ತಾಯಿಸಿದರು.
  ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಾಯಕ ೨೮ ಪ್ರವಾಸಿಗರ ಹತ್ಯೆಯನ್ನು ಖಂಡಿಸಿದರು. ಇದು ಮಾನವೀಯ ಕೆಲಸವಲ್ಲ. ಇದನ್ನು ಯಾರೂ ಸಹಿಸುವುದಿಲ್ಲ. ಇದಕ್ಕೆ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸಹಾನುಭೂತಿ ವ್ಯಕ್ತಪಡಿಸಲಾಗುತ್ತಿದೆ ಎಂದರು. 
    ಈ ದುರ್ಘಟನೆಗೆ ಕೇಂದ್ರ ಸರ್ಕಾರ ಸರಿಯಾದ ಉತ್ತರ ನೀಡಬೇಕು. ಕಾಶ್ಮೀರದಲ್ಲಿ ಇತ್ತೀಚೆಗೆ ಸುಮಾರು ೫೦-೬೦ ಇಂತಹ ಘಟನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಸಚಿವರುಗಳು ಉತ್ತರ ನೀಡಬೇಕು. ಭಯೋತ್ಪಾದಕರು ಎಲ್ಲೇ ಇದ್ದರೂ, ಹೇಗೆ ಇದ್ದರೂ ಅವರನ್ನು ಹುಡುಕಿ ಸಾರ್ವಜನಿಕವಾಗಿ ನೇಣು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  . ಪ್ರವಾಸಿ ತಾಣದಲ್ಲಿದ್ದ ಎರಡು ಚೆಕ್ ಪೋಸ್ಟ್‌ಗಳನ್ನು ತೆರವುಗೊಳಿಸಲು ಕಾರಣವೇನು ಹಾಗು ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸದಿರಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ. ಇವೆಲ್ಲವನ್ನು ಗಮನಿಸಿದರೆ ಈ ದುರ್ಘಟನೆಯಲ್ಲಿ ಏನೋ ಒಳಸಂಚು ಇದೆ ಎಂಬ ಗುಮಾನಿ ಬರುತ್ತದೆ. ಸಿಬಿಐ ಸಹ ಇದನ್ನೇ ಹೇಳಿದೆ. ಈ ಹಿನ್ನಲೆಯಲ್ಲಿ ಈ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
    ಸಮಸ್ತ ಮುಸ್ಲಿಂ ಸಮಾಜ ಈ ದುರ್ಘಟನೆಯನ್ನು ಖಂಡಿಸಿ ದೇಶದ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕಾಶ್ಮೀರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಿ, ಬಂದ್ ಮಾಡಿ ಭಯೋತ್ಪಾದಕತೆಯ ವಿರುದ್ದ ಹೋರಾಟ ಮಾಡಿ ಉಗ್ರವಾದ ಬುಡ ಸಮೇತ ಕಿತ್ತು ಹಾಕಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದರು. 
    ಈ ನಡುವೆ ರಾಜ್ಯದಲ್ಲಿ ಸಿ.ಟಿ.ರವಿ ಹಾಗು ಪ್ರತಾಪಸಿಂಹರವರು ಎಂದಿನಂತೆ ಜಾತಿ, ಧರ್ಮದ ವಿರುಧ್ಧ ಕಿಡಿ ಕಾರುತ್ತಿದ್ದಾರೆ. ಮಾಧ್ಯಮಗಳಲ್ಲಿ ಅವರ ಹೇಳಿಕೆಗಳೆ ಪ್ರಸಾರ ಆಗುತ್ತಿವೆ. ಮುಲ್ಲಾ, ಮೌಲ್ವಿಗಳನ್ನು ತೇಜೋವಧೆ ಮಾಡುತ್ತಿದ್ದಾರೆ. ಇದೆ ಇವರ ಕೆಲಸವಾಗಿದೆ. ಇದನ್ನು ನೋಡಿಕೊಂಡು ಸಮುದಾಯದವರು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನೀಡಲೇಬೇಕು ಎಂದರು. 
    ಜಿಹಾದಿ ಎಂದರೆ ತಂದೆ-ತಾಯಿಯವರ ಮಾತನ್ನು ಕೇಳದವ. ಇಂತಹವರನ್ನು ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದೆ. ಇಂಹವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು. ಇವರು ಎಂದಿಗೂ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಕುರಾನ್‌ನಲ್ಲಿ ಯಾವುದೇ ಪ್ರಾಣಿಗೆ ಹಿಂಸೆ ಮಾಡಬಾರದು, ನೋವು ಕೊಡಬಾರದು, ಹತ್ಯೆ ಮಾಡಬಾರದು ಎಂದು ಹೇಳಿದೆ. ಅದನ್ನು ನಾವು ಪಾಲಿಸುತ್ತಿದ್ದೇವೆ ಎಂದರು.
  ಪುಲ್ವಾಮ ದಾಳಿಯ ನಂತರ ಇಂತಹ ದಾಳಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಪುನಃ ಇಂತಹ ಘಟನೆ ಮರುಕಳುಹಿಸಿರುವುದು ಭದ್ರತಾ ವೈಫಲ್ಯವಲ್ಲದೆ ಮತ್ತೇನು ಅಲ್ಲ. ಈ ದುರ್ಘಟನೆ ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ. ಮೃತಪಟ್ಟವರಲ್ಲಿ ಸೈಯದ್ ಹುಸೇನ್ ಕುದುರೆ ಸವಾರಿ ಮಾಡಿಸುವ ಅದರಿಂದಲೇ ಜೀವಿಸುವ ಮುಸ್ಲಿಂ ವ್ಯಕ್ತಿ ಸೇರಿರುವುದು ನೋವಿನ ಘಟನೆಯಾಗಿದೆ. ಈ ಘಟನೆಯಲ್ಲಿ ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ಹತ್ಯೆಗೊಳಗಾದ ಎಲ್ಲಾ ಕುಟುಂಬದವರಿಗೆ ನಗರದ ವಿವಿಧ ೬೪ ಮಸೀದಿಗಳಲ್ಲಿ ಸಂತಾಪ ವ್ಯಕ್ತ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಗುತ್ತಿದೆ ಎಂದರು.
    ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಬಾಬಾಜಾನ್, ಅಮೀರ್‌ಜಾನ್, ನ್ಯಾಯವಾದಿ ಮುರ್ತುಜಾಲಿ, ದಿಲ್ದಾರ್, ಅಬ್ದುಲ್ ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಜ್ಜಿ ಕಟ್ಟೆ ಕೆರೆ ಪುನಶ್ಚೇತನಕ್ಕೆ ಬಿಳಿಕಿ ಶ್ರೀ ಸಂತಸ : ಕೆರೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆಯಡಿ ಪುನಶ್ಚೇತನಗೊಳಿಸಿದ ಮಜ್ಜಿ ಕಟ್ಟೆ ಕೆರೆ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.  
    ಭದ್ರಾವತಿ: ಕಳೆದ ಸುಮಾರು ಎರಡು ತಿಂಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆಯಡಿ ಮಜ್ಜಿ ಕಟ್ಟೆ ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಕೆರೆ ಪುನಶ್ಚೇತನಗೊಂಡು ಗ್ರಾಮಸ್ಥರಿಗೆ ಹಸ್ತಾಂತರಗೊಂಡಿದೆ. ಯೋಜನೆಗೆ ಚಾಲನೆ ನೀಡಿದ್ದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಸ ವ್ಯಕ್ತಪಡಿಸಿದ್ದಾರೆ. 
    ಶ್ರೀಗಳು ಕೆರೆ ಹಸ್ತಾಂತರ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಕೆರೆ ಪುನಶ್ವೇತನಗೊಂಡಿರುವ ಸಂಭ್ರಮ ಹಂಚಿಕೊಳ್ಳುವ ಜೊತೆಗೆ ಈ ನಿಟ್ಟಿನಲ್ಲಿ ಕೈಗೊಂಡ ಕಾರ್ಯಗಳನ್ನು ಸ್ಮರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಸೇವಾ ಯೋಜನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ  ಮೋಹನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳು ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತಿವೆ. ಮಹಿಳೆ ಸಬಲೀಕರಣಗೊಂಡಲ್ಲಿ ಇಡೀ ಕುಟುಂಬ ಅಭಿವೃದ್ಧಿ ಹೊಂದುತ್ತದೆ ಎಂಬ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆ ನಿಜಕ್ಕೂ ಅದ್ಭುತವಾಗಿದೆ. ಈ ಹಿನ್ನಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
  ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ ಮಾತನಾಡಿ, ಕೆರೆ ಪುನಶ್ಚೇತನ ಕಾರ್ಯದಲ್ಲಿ ಗ್ರಾಮಸ್ಥರು ಹಾಗು ಕೆರೆ ಅಭಿವೃದ್ಧಿ ಸಮಿತಿ ಸಹಕಾರ ಸ್ಮರಿಸಿದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್.ವೈ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕೆರೆಯ ಸಂಪೂರ್ಣ ರೂಪರೇಷೆಯ ಬಗ್ಗೆ ಕಾಮಗಾರಿ ನಡೆದು ಬಂದ ಹಾದಿಯ ಬಗ್ಗೆ ರಚನೆಗೊಂಡ ಉತ್ತಮ ಕೆರೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. 
  ತಹಸೀಲ್ದಾರ್ ಪರುಸಪ್ಪ ಕುರುಬರ, ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಬಿ.ಎಚ್. ವಸಂತ ಹಾಗು ಅಧ್ಯಕ್ಷ ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.  ಕಾರ್ಯಕ್ರಮದಲ್ಲಿ ಬಿಳಿಕಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರ್ ನಾಯಕ್, ಮಜ್ಜಿಗೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹೇಮಂತ್, ಕೈಗಾರಿಕಾ ಪ್ರದೇಶದ ಕಂಪನಿಗಳ ಮಾಲೀಕರುಗಳು., ಸೇವಾ ಪ್ರತಿನಿಧಿಗಳು. ಒಕ್ಕೂಟ ಪದಾಧಿಕಾರಿಗಳು, ಸದಸ್ಯರು. ಗ್ರಾಮಸ್ಥರಾದ ಓಂಕಾರಪ್ಪ, ಕೃಷ್ಣ ಮೂರ್ತಿ. ಆನಂದ ನಾಯ್ಕ್., ಮುರುಗೇಶ್, ಗಿರಿಯಪ್ಪ. ಗವಿಯಪ್ಪ. ಮೇಲ್ವಿಚಾರಕರಾದ ನಾಗಪ್ಪ ನಿರೂಪಿಸಿ, ಕೃಷಿ ಅಧಿಕಾರಿ ಧನಂಜಯ ಮೂರ್ತಿ ವಂದಿಸಿದರು. 

ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ಪ್ರವಾಸಿಗರಿಗೆ ಸಂತಾಪ : ಉಗ್ರರನ್ನು ಸೆರೆ ಹಿಡಿದು ಕಠಿಣ ಶಿಕ್ಷೆ ವಿಧಿಸಿ

ಬ್ಲಾಕ್ ಕಾಂಗ್ರೆಸ್‌ನಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ : ತಹಸೀಲ್ದಾರ್ ಮೂಲಕ ಮನವಿ  

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾನುಷ್ಯವಾಗಿ ದೇಶದ ಒಟ್ಟು ೨೮ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಗುರುವಾರ ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾನುಷ್ಯವಾಗಿ ದೇಶದ ಒಟ್ಟು ೨೮ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
    ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ರಂಗಪ್ಪವೃತ್ತದಿಂದ ಪಾದಯಾತ್ರೆ ಮೂಲಕ ತಾಲೂಕು ಕಛೇರಿವರೆಗೂ ಆಗಮಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಇದೊಂದು ಹೇಯ ಕೃತ್ಯವಾಗಿದೆ. ಇಡೀ ದೇಶದ ಜನರು ಈ ಕೃತ್ಯವನ್ನು ಖಂಡಿಸುತ್ತಾರೆ. ಹತ್ಯೆ ನಡೆಸಿರುವ ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದರು. 
    ಇಂತಹ ದುರ್ಘಟನೆಗಳನ್ನು ಬಿಜೆಪಿ ಪಕ್ಷ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕೆಲವರು ಮುಸಲ್ಮಾನರ ಒಳಸಂಚಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ದೇಶದಲ್ಲಿ ಮುಸಲ್ಮಾನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ದುರ್ಘಟನೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದರು. 
    ಉಗ್ರರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಉಗ್ರ ಕೃತ್ಯಗಳನ್ನು ನಡೆಸುವುದೇ ಅವರ ಧ್ಯೇಯವಾಗಿರುತ್ತದೆ. ಇಂತಹ ಉಗ್ರರು ಯಾರೇ ಆಗಿರಲಿ, ಯಾವುದೇ ದೇಶಕ್ಕೆ ಸೇರಿದವರಾಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ ೨೮ ಮಂದಿ ಪ್ರವಾಸಿಗರು ಹತ್ಯೆಯಾದ ರೀತಿಯಲ್ಲೇ ಉಗ್ರರನ್ನು ಸಹ ನಡು ರಸ್ತೆಯಲ್ಲಿ ಹತ್ಯೆ ಮಾಡಬೇಕೆಂದು ಆಗ್ರಹಿಸಿದರು.  
    ಪ್ರಮುಖರಾದ ಬ್ಲಾಕ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ತಾಲೂಕು ಅಧ್ಯಕ್ಷೆ ಸುಕನ್ಯ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಎಂ. ರಮೇಶ್‌ಶೆಟ್ಟಿ ಶಂಕರಘಟ್ಟ, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವೀರ್ ಬಾಷಾ,  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಕಾಂತರಾಜ್, ಲತಾ ಚಂದ್ರಶೇಖರ್, ಅನುಸುಧಾ ಮೋಹನ್ ಪಳನಿ, ಐ.ವಿ ಸಂತೋಷ್ ಕುಮಾರ್,  ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸೂಡಾ ಸದಸ್ಯ ಎಚ್ ರವಿಕುಮಾರ್, ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪ, ನಾಮನಿರ್ದೇಶಿತ ಸದಸ್ಯೆ ವಿಜಯಲಕ್ಷ್ಮೀ, ಪ್ರಮುಖರಾದ ಸಿ.ಎಂ ಖಾದರ್, ಎಂ. ಶಿವಕುಮಾರ್, ದಿಲ್‌ದಾರ್, ಅಮೀರ್ ಜಾನ್, ವೈ. ರೇಣುಕಮ್ಮ, ಎಂ.ಎಸ್ ಸುಧಾಮಣಿ, ಸಿ. ಜಯಪ್ಪ, ಜುಂಜ್ಯಾನಾಯ್ಕ, ಶೋಭಾ ರವಿಕುಮಾರ್, ಅಭಿಲಾಷ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.