Friday, January 6, 2023

ವಿಜೃಂಭಣೆಯಿಂದ ಜರುಗಿದ ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಅಮ್ಮನವರ ಸ್ಥಿರ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಜ. ೬ : ನಗರದ ಹೊಸಸೇತುವೆ ರಸ್ತೆಯಲ್ಲಿ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಪ್ರತಿವರ್ಷದಂತೆ ಈ ಬಾರಿ ಸಹ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರ ಸ್ಥಿರ ಮೂರ್ತಿ ಹಾಗು ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ಅಮ್ಮನವರ ಉತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.


ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಅಮ್ಮನವರ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ವಿಶೇಷ ಎಂದರೆ ಪ್ರತಿ ವರ್ಷ ಸುಮಾರು ೫ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಬನದ ಹುಣ್ಣಿಮೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
    ದೇವಾಂಗ ಸಮಾಜದ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ದಾನಿಗಳು, ಗಣ್ಯರು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.  


ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಬಿಜೆಪಿ ಸರ್ಕಾರದಿಂದ ಎಸ್‌ಸಿ/ಎಸ್‌ಟಿ ಮತ ಬ್ಯಾಂಕ್ ಹೊಂದಲು ದಲಿತರ ದಾರಿ ತಪ್ಪಿಸುವ ಹುನ್ನಾರ

ಜ.೮ರಂದು ಚಿತ್ರದುರ್ಗ ಕ್ಷೇತ್ರದ ಎಸ್‌ಸಿ/ಎಸ್‌ಟಿ ವಿಭಾಗದ ಸಮಾವೇಶ

ಜ.೮ರಂದು ಚಿತ್ರದುರ್ಗ ಕ್ಷೇತ್ರದ ಎಸ್‌ಸಿ/ಎಸ್‌ಟಿ ವಿಭಾಗದ ಸಮಾವೇಶ ನಡೆಯುವ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ತಾಲೂಕು ಎಸ್‌ಸಿ/ಎಸ್‌ಟಿ ವಿಭಾಗ ವತಿಯಿಂದ  ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜ. ೭ : ಬಿಜೆಪಿ ಸರ್ಕಾರ ದಲಿತರ ಮತ ಬ್ಯಾಂಕ್ ಹೊಂದುವ ಉದ್ದೇಶದಿಂದ ಅವರ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಜ.೮ರಂದು ಪಕ್ಷದ ಚಿತ್ರದುರ್ಗ ಕ್ಷೇತ್ರದ ಎಸ್‌ಸಿ/ಎಸ್‌ಟಿ ವಿಭಾಗದ ಸಮಾವೇಶ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕ, ಶಿವಮೊಗ್ಗ ಜಿಲ್ಲಾ ವೀಕ್ಷಕ ಎನ್.ಆರ್ ಚಂದ್ರಶೇಖರ್ ಹೇಳಿದರು.
    ಅವರು ಪಕ್ಷದ ತಾಲೂಕು ಎಸ್‌ಸಿ/ಎಸ್‌ಟಿ ವಿಭಾಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ಸರ್ಕಾರ ಭಾವನಾತ್ಮಕವಾಗಿ ಹಿಂದೂ ಧರ್ಮದ ವಿಚಾರಧಾರೆಗಳ ಮೂಲಕ ದಲಿತ ಯುವ ಸಮುದಾಯದ ದಾರಿ ತಪ್ಪಿಸುತ್ತಿದೆ. ಅಲ್ಲದೆ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡದೆ ನಿರುದ್ಯೋಗಿಗಳನ್ನಾಗಿಸಿದೆ ಎಂದರು ಆರೋಪಿಸಿದರು.
    ಮೀಸಲಾತಿ ಹೆಚ್ಚಳದ ಪ್ರಸ್ತಾಪ ಮಾಡಿ ದಲಿತರ ಮತ ಬ್ಯಾಂಕ್ ಹೊಂದುವ ಹುನ್ನಾರ ನಡೆಸುತ್ತಿದೆ. ದಲಿತರ ಮೇಲೆ ಸ್ವಲ್ಪವೂ ಕಾಳಜಿ ಹೊಂದಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಎಸ್‌ಸಿ/ಎಸ್‌ಟಿ ನಿಗಮ ಮಂಡಳಿಗಳಿಗೆ ರು. ೫ ಲಕ್ಷ ಸಹಾಯ ಧನ ನೀಡುತ್ತಿತ್ತು. ಬಿಜೆಪಿ ಸರ್ಕಾರ ಇದನ್ನು ೫೦ ಸಾವಿರ ರು.ಗಳಿಗೆ ಇಳಿಸಿದೆ. ಮಕ್ಕಳ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದೆ. ಅಲ್ಲದೆ ಸಂವಿಧಾನ ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
    ಬಿಜೆಪಿ ಸರ್ಕಾರದ ದಲಿತಪರ ವಿರೋಧಿ ನೀತಿಗಳನ್ನು ಖಂಡಿಸಿ ಇವುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಸಮಾವೇಶದಲ್ಲಿ ಹೊಂದಲಾಗಿದೆ. ಸುಮಾರು ೫ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಕ್ಷದ ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರು ಉಪಸ್ಥಿತರಿರುವರು ಎಂದರು.
    ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಕೆಪಿಸಿಸಿ ಸಂಚಾಲಕ, ಜಿಲ್ಲಾ ಉಸ್ತುವಾರಿ ಮಲ್ಲೇಶಪ್ಪ, ಎಸ್.ಸಿ ವಿಭಾಗದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಆರ್. ಅರುಣ್, ಕೆಪಿಸಿಸಿ ಸಂಚಾಲಕ ಬಿ.ಪಿ ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಡಾ. ಕೃಷ್ಣ, ಎಸ್. ರಾಕೇಶ್, ವಿ. ಮಹೇಶ್ ಮತ್ತು ಶರವಣ ಹಾಗು ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಂಭಾಪುರಿ ಶ್ರೀಗಳ ಜನ್ಮದಿನೋತ್ಸವ ಅಂಗವಾಗಿ ಜ.೭ರಂದು ಹಾಲು, ಹಣ್ಣು, ಬ್ರೆಡ್ ವಿತರಣೆ

    ಭದ್ರಾವತಿ, ಜ. ೬ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಜನ್ಮದಿನೋತ್ಸವ ಪ್ರಯುಕ್ತ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  
   ಬೆಳಿಗ್ಗೆ ೯ ಗಂಟೆಗೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೀರಶೈವ ಲಿಂಗಾಯತ ಸಮಾಜದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ಜ.೧೦ರೊಳಗೆ ಎಸ್‌ಸಿ/ಎಸ್‌ಟಿ ಪಡಿತರದಾರರು ಮಾಹಿತಿ ನೀಡಲು ಮನವಿ


ಭದ್ರಾವತಿ, ಜ. ೬: ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಫಲಾನುಭವಿಗಳ ಮಾಹಿತಿ ನೀಡಲು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಹಸೀಲ್ದಾರ್ ಮತ್ತು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
    ಪರಿಶಿಷ್ಟ ಜಾತಿ/ಪಂಗಡ(ಎಸ್‌ಸಿ/ಎಸ್‌ಟಿ)ದ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಜ.೧೦ರೊಳಗೆ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಅಂಗಡಿ ಮಾಲೀಕರಿಗೆ ನೀಡುವ ಮೂಲಕ ಸಹಕರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಯ್ಯ ಮನವಿ ಮಾಡಿದ್ದಾರೆ.