Saturday, May 20, 2023

ಮೇ.೨೧ರಂದು ಮಾರಿಯಮ್ಮ ದೇವಿ ಕರಗ ಉತ್ಸವ

    ಭದ್ರಾವತಿ, ಮೇ. ೨೦ : ಪ್ರತಿವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕರಗ ಮಹೋತ್ಸವ ನಡೆಯುತ್ತಿದ್ದು, ಮೇ.೨೧ರ ಭಾನುವಾರ ಕರಗ ಉತ್ಸವ ಜರುಗಲಿದೆ.
    ಬೆಳಿಗ್ಗೆ ೮ ಗಂಟೆಗೆ ಶ್ರೀ ದೇವಿಗೆ ಎಳನೀರು ಅಭಿಷೇಕ ಮತ್ತು ೧೦೮ ಕಲಶ ಸಹಿತ ಬ್ರಹ್ಮಕಲಶ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ೧ ಗಂಟೆಗೆ ಶಕ್ತಿ ಕರಗ ಸ್ಥಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ನಂತರ ಅನ್ನದಾನ ನಡೆಯಲಿದೆ. ಸಂಜೆ ೬ ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ಶ್ರೀ ದೇವಿಯವರ ರಾಜಬೀದಿ ಉತ್ಸವ ಮತ್ತು ಮಂಗಳವಾದ್ಯದೊಂದಿಗೆ ಕರಗ ಆಟ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ : ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ

 ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
    ಭದ್ರಾವತಿ, ಮೇ. ೨೦ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
    ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗು ೮ ಮಂದಿ ಸಚಿವರಾಗಿ ಪದಗ್ರಹಣ ಸ್ವೀಕರಿಸುವ ಮೂಲಕ ನಾಡಿನ ಜನರ ಆಶಯದಂತೆ ನೂತನ ಜನಹಿತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ವಿಶ್ವಾಸವನ್ನು ಮುಖಂಡರು, ಕಾರ್ಯಕರ್ತರು ವ್ಯಕ್ತಪಡಿಸಿದರು.  
    ನಗರದ ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಟಿಪ್ಪು ಸುಲ್ತಾನ್, ಬಷೀರ್ ಅಹಮದ್, ಜಾರ್ಜ್, ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಮಾಜಿ ಸದಸ್ಯ ಆಂಜನಪ್ಪ, ಪಕ್ಷದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ರೂಪಾನಾರಾಯಣ, ಮುಖಂಡರಾದ ರಮಾಕಾಂತ್, ಪ್ರಕಾಶ್‌ರಾವ್, ಕೇಶವ, ಅಯೂಬ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಂಗಮೇಶ್ವರ್‌ಗೆ ಕೈ ತಪ್ಪಿದ ಸಚಿವ ಸ್ಥಾನ : ಕ್ಷೇತ್ರದ ಜನತೆಗೆ ನಿರಾಸೆ

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಮೇ. ೨೦ : ಈ ಬಾರಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ಜನತೆಗೆ ನಿರಾಸೆಯುಂಟಾಗಿದೆ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗುವ ಮೂಲಕ ಕ್ಷೇತ್ರದ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆಂಬ ನಿರೀಕ್ಷೆ ಹೊಂದಲಾಗಿತ್ತು.  
    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಕೇವಲ ೮ ಮಂದಿ ಮಾತ್ರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂಬ ಸುದ್ದಿ ಕ್ಷೇತ್ರದಾದ್ಯಂತ ವ್ಯಾಪಕವಾಗಿ ಹರಡಿತ್ತು. ಪ್ರಮಾಣ ವಚನ ಸ್ವೀಕಾರಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಗೊಂಡ ನಂತರ ಕ್ಷೇತ್ರದ ಜನರಲ್ಲಿ ಹೆಚ್ಚಿನ ನಿರಾಸೆಯನ್ನುಂಟು ಮಾಡಿದೆ.
    ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನನಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಮತಯಾಚನೆ ನಡೆಸಿದ್ದರು. ಅಲ್ಲದೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳಲ್ಲೂ ಸಚಿವ ಸ್ಥಾನ ಸಿಗುವ ವಿಶ್ವಾಸ ಮೂಡಿಸುವ ಮೂಲಕ ಉತ್ಸಾಹ ತುಂಬಿದ್ದರು.
    ಜಿಲ್ಲೆಯಲ್ಲಿ ಪ್ರಸ್ತುತ ೩ ಮಂದಿ ಶಾಸಕರಿದ್ದು, ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ಹಿರಿಯರಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕರಾಗಿದ್ದು,  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಈ ಬಾರಿ ಸಚಿವ ಸ್ಥಾನ ಸಿಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.