Wednesday, September 15, 2021

ಸರ್‌ಎಂವಿ ಕಾಲೇಜಿನಲ್ಲಿ ಗಣಕಯಂತ್ರ ಬಳಕೆಗೆ ಚಾಲನೆ

ಕಾಗ್ನಿಜೆಂಟ್ ಕಂಪನಿ ಹಾಗು ರೋಟರಿ ಕ್ಲಬ್ ಸಹಯೋಗದೊಂದಿಗೆ ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಉಚಿತವಾಗಿ ನೀಡಲಾದ ಸುಮಾರು ೧೫ ಗಣಕ ಯಂತ್ರಗಳನ್ನು ವಿದ್ಯಾರ್ಥಿಗಳ ಬಳಕೆಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಸೆ. ೧೫:  ಕಾಗ್ನಿಜೆಂಟ್ ಕಂಪನಿ ಹಾಗು ರೋಟರಿ ಕ್ಲಬ್ ಸಹಯೋಗದೊಂದಿಗೆ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಉಚಿತವಾಗಿ ನೀಡಲಾದ ಸುಮಾರು ೧೫ ಗಣಕ ಯಂತ್ರಗಳನ್ನು ವಿದ್ಯಾರ್ಥಿಗಳ ಬಳಕೆಗೆ ಬುಧವಾರ ಚಾಲನೆ ನೀಡಲಾಯಿತು.
    ಕಾಲೇಜಿನ ಗಣಕಯಂತ್ರ ವಿಭಾಗದಲ್ಲಿ ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್ ಚಾಲನೆ ನೀಡಿ ಕಾಗ್ನಿಜೆಂಟ್ ಕಂಪನಿ ಹಾಗು ರೋಟರಿ ಕ್ಲಬ್‌ಗಳ ಸಮಾಜಮುಖಿ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸಿದರು.
    ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನ ಸಂಯೋಜಕ ಡಾ. ಎಂ.ಎಚ್ ಪ್ರಕಾಶ್ ಆಯೋಜಿಸಿದ್ದರು. ಕಾಲೇಜಿನ ಬೋಧಕ ಹಾಗು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಎನ್. ತ್ರಿವೇಣಿ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ

ಶಿಕ್ಷಕಿ ಎನ್. ತ್ರಿವೇಣಿ
    ಭದ್ರಾವತಿ, ಸೆ. ೧೫: ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಹಿಂದಿ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಹಿಂದಿ ಶಿಕ್ಷಕಿ ಎನ್. ತ್ರಿವೇಣಿ ಆಯ್ಕೆಯಾಗಿದ್ದಾರೆ.
    ಸೆ.೧೪ರಂದು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಿಂದಿ ದಿವಸ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಶಿಕ್ಷಕಿ ಎನ್. ತ್ರಿವೇಣಿ ಆಯ್ಕೆಯಾಗಿದ್ದು, ಈ ಕುರಿತು ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿರುವ ಶಿಕ್ಷಕಿ ಎನ್. ತ್ರಿವೇಣಿ, ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಬಾರಿ ಒಟ್ಟು ೪ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ತಾವು ಸಹ ಒಬ್ಬರಾಗಿವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಎನ್. ತ್ರಿವೇಣಿ ಅವರು ಕಳೆದ ಹಲವಾರು ವರ್ಷಗಳಿಂದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲದೆ ವೃತ್ತಿ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ.
    ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿ ಎನ್. ತ್ರಿವೇಣಿ ಅವರನ್ನು ಅಂತರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಎಚ್.ಆರ್ ರಂಗನಾಥ್ ಹಾಗು ನಗರದ ಶಿಕ್ಷಕ ವೃಂದದವರು ಮತ್ತು ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಸ್ಥಾನದಲ್ಲಿ ಅಪರೂಪದ ಹಬ್ಬ ಎಳೆ ಅಷ್ಟಮಿ ಆಚರಣೆ


ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ಭದ್ರಾವತಿ, ಸೆ. ೧೫: ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ನಮ್ಮ ಪೂರ್ವಿಜರು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹಬ್ಬಗಳಲ್ಲಿ ಎಳೆ ಅಷ್ಟಮಿ ಸಹ ಒಂದಾಗಿದ್ದು, ಈ ಹಬ್ಬವನ್ನು ಕೆಲವೆ ಕೆಲವು ಮನೆತನದವರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಚರಕದಿಂದ ನೂಲು ತೆಗೆದು ದೇವಿ ಮುಂಭಾಗದಲ್ಲಿಟ್ಟು ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ.  
    ಎಳೆ ಅಷ್ಟಮಿ, ಎಳೆ ಗೌರಿ, ಸಣ್ಣಗೌರಿ, ನೊಂಪಿ ಗೌರಿ ಸೇರಿದಂತೆ ಹಲವು ರೀತಿಯಲ್ಲಿ ಕರೆಯುವ ಈ ಹಬ್ಬವನ್ನು ವಿಶೇಷವಾಗಿ ಕಟ್ಟುನಿಟ್ಟಿನಿಂದ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ ಮುಗಿದು ೫ನೇ ದಿನಕ್ಕೆ ಬರುವ ಅಷ್ಟಮಿ ತಿಥಿ ಮೂಲ ನಕ್ಷತ್ರದಂದು ಈ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ದೇವಿ ಮುಂಭಾಗ ಪೂಜಿಸಲ್ಪಟ್ಟ ಎಳೆಗಳನ್ನು ಭಕ್ತರು ಬೆಸ ಸಂಖ್ಯೆಯಲ್ಲಿ ಮನೆಗಳಿಗೆ ಕೊಂಡೊಯ್ಯುದು ದೀಪಾವಳಿ ಹಬ್ಬದ ವರೆಗೂ ಪೂಜಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ.
    ದೇವಸ್ಥಾನದಲ್ಲಿ ಜರುಗಿದ ಹಬ್ಬದಲ್ಲಿ ಎಂ.ಹರನಾಥ ಕೋಠಿ, ಡಿ.ಕೆ ಶಿವಲಿಂಗಪ್ಪ, ಡಿ.ಕೆ ಪಂಚಣ್ಣ, ಹಾಲೇಶ್, ನಾಗರಾಜ್ ಮತ್ತು ನಾಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿವಿಧೆಡೆ ಅನ್ನದಾತ, ಭಾರತರತ್ನ ಸರ್.ಎಂ.ವಿ ಜನ್ಮದಿನ ಆಚರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬುಧವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಭದ್ರಾವತಿ, ಸೆ. ೧೫: ಎರಡು ಬೃಹತ್ ಕಾರ್ಖಾನೆಗಳ ಸ್ಥಾಪನೆಯೊಂದಿಗೆ ಲಕ್ಷಾಂತರ ಜನರಿಗೆ ಅನ್ನದಾತರಾಗಿರುವ ಮೂಲಕ ನಗರದ ಬೆಳವಣಿಗೆಗೆ ಕಾರಣಕರ್ತರಾಗಿರುವ, ಜಗತ್ತಿನ ಶ್ರೇಷ್ಠ ತಂತ್ರಜ್ಞಾನಿಗಳಲ್ಲಿ ಒಬ್ಬರಾಗಿರುವ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಬುಧವಾರ ವಿವಿಧೆಡೆ ಅದ್ದೂರಿಯಾಗಿ ಆಚರಿಸಲಾಯಿತು.
       ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಜನ್ಮದಿನ ಆಚರಣೆ :
   ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಆಡಳಿತ ಕಛೇರಿ ಮುಂಭಾಗದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನ ಆಚರಿಸಲಾಯಿತು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಅವರು ಕಾರ್ಖಾನೆಗೆ ಸರ್.ಎಂ.ವಿ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.  
    ಮುಖ್ಯ ಮಹಾಪ್ರಬಂಧಕ(ಆಪರೇಷನ್ಸ್) ಕೆ.ಎಸ್ ಸುರೇಶ್, ಮಹಾಪ್ರಬಂಧಕ ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ನವೀನ್ ರಾಹುಲ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಭಾರತರತ್ನಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಸರ್.ಎಂ.ವಿ ಕಾಲೇಜಿನಲ್ಲಿ ಜನ್ಮದಿನ ಆಚರಣೆ :
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಕಾಲೇಜಿನ ಆವರಣದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಜಿ ಉಮಾಶಂಕರ್ ಮಾತನಾಡಿ, ಸರ್.ಎಂ.ವಿ ಅವರ ಸಾಧನೆಗಳು, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಹಾಗು ಅವರ ಆದರ್ಶತನಗಳ ಕುರಿತು ಮಾಹಿತಿ ನೀಡಿದರು.  ಕಾಲೇಜಿನ ಬೋಧಕ ಹಾಗು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಬುಧವಾರ ಭಾರತರತ್ನಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
      ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಜನ್ಮದಿನ ಆಚರಣೆ:
  ಪ್ರತಿವರ್ಷದಂತೆ ಈ ಬಾರಿ ಸಹ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು. ಸರ್.ಎಂ.ವಿ ಭಾವಚಿತ್ರಕ್ಕೆ ಕಾರ್ಖಾನೆಯ ಮಹಾಪ್ರಬಂಧಕ ಪ್ರಭಾರಿ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
    ಅಥಿತಿ ಗೃಹದ ಅಧಿಕಾರಿಗಳು, ಸಿಬ್ಬಂದಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಅಧಿಕಾರಿ ಚಂದ್ರಕಾಂತ್, ಸಿಬ್ಬಂದಿ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ರಾಮ್ ಸೇನಾ ಕರ್ನಾಟಕ ಸಂಘಟನೆ ಭದ್ರಾವತಿ ತಾಲೂಕು ಘಟಕ ಹಾಗು ಶ್ರೀ ಲಕ್ಷ್ಮೀನರಸಿಂಹ ಘಟಕದ ವತಿಯಿಂದ ಈ ಬಾರಿ ವಿಶೇಷ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
     ರಾಮ್ ಸೇನಾ ಕರ್ನಾಟಕ ಸಂಘಟನೆ ವತಿಯಿಂದ ಜನ್ಮದಿನ ಆಚರಣೆ :
    ನಗರದ ರಾಮ್ ಸೇನಾ ಕರ್ನಾಟಕ ಸಂಘಟನೆ ತಾಲೂಕು ಘಟಕ ಹಾಗು ಶ್ರೀ ಲಕ್ಷ್ಮೀನರಸಿಂಹ ಘಟಕದ ವತಿಯಿಂದ ಈ ಬಾರಿ ವಿಶೇಷ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ವಿಐಎಸ್‌ಎಲ್ ಕಾರ್ಖಾನೆ ಒಳಭಾಗದಲ್ಲಿರುವ ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ಅಗತ್ಯವಿರುವ ಬಂಡವಾಳ ಹೂಡುವ ಮೂಲಕ ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
    ಸಂಘಟನೆಯ ತಾಲೂಕು ಅಧ್ಯಕ್ಷ ಸಚಿನ್ ವರ್ಣೇಕರ್, ಪ್ರಮುಖರಾದ ಅವಿನಾಶ್, ರಮೇಶ್, ಪ್ರವೀಣ್, ಕೃಷ್ಣ ಜೋಗಿ, ಪವನ್‌ಕುಮಾರ್, ಬಿಳಕ್ಕಿ ಪ್ರಕಾಶ್, ಪ್ರಭು, ಯೋಗೇಶ್, ಸುನಿಲ್‌ಕುಮಾರ್, ಕಾರ್ತಿಕ್ ಮತ್ತು ಸುದರ್ಶನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಬುಧವಾರ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
         ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಜನ್ಮದಿನ ಆಚರಣೆ :
    ನಗರದ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಪ್ರತಿವರ್ಷ ನಿವೃತ್ತ ಕಾರ್ಮಿಕರು ಸರ್.ಎಂ.ವಿ ಜನ್ಮದಿನ ವಿಶೇಷವಾಗಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಸರ್.ಎಂ.ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಸಂಘದ ಅಧ್ಯಕ್ಷ, ಸೂಡಾ ಸದಸ್ಯ ರಾಮಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರು ಪಾಲ್ಗೊಂಡಿದ್ದರು.