Wednesday, September 15, 2021

ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಸ್ಥಾನದಲ್ಲಿ ಅಪರೂಪದ ಹಬ್ಬ ಎಳೆ ಅಷ್ಟಮಿ ಆಚರಣೆ


ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ಭದ್ರಾವತಿ, ಸೆ. ೧೫: ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ನಮ್ಮ ಪೂರ್ವಿಜರು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹಬ್ಬಗಳಲ್ಲಿ ಎಳೆ ಅಷ್ಟಮಿ ಸಹ ಒಂದಾಗಿದ್ದು, ಈ ಹಬ್ಬವನ್ನು ಕೆಲವೆ ಕೆಲವು ಮನೆತನದವರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಚರಕದಿಂದ ನೂಲು ತೆಗೆದು ದೇವಿ ಮುಂಭಾಗದಲ್ಲಿಟ್ಟು ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ.  
    ಎಳೆ ಅಷ್ಟಮಿ, ಎಳೆ ಗೌರಿ, ಸಣ್ಣಗೌರಿ, ನೊಂಪಿ ಗೌರಿ ಸೇರಿದಂತೆ ಹಲವು ರೀತಿಯಲ್ಲಿ ಕರೆಯುವ ಈ ಹಬ್ಬವನ್ನು ವಿಶೇಷವಾಗಿ ಕಟ್ಟುನಿಟ್ಟಿನಿಂದ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ ಮುಗಿದು ೫ನೇ ದಿನಕ್ಕೆ ಬರುವ ಅಷ್ಟಮಿ ತಿಥಿ ಮೂಲ ನಕ್ಷತ್ರದಂದು ಈ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ದೇವಿ ಮುಂಭಾಗ ಪೂಜಿಸಲ್ಪಟ್ಟ ಎಳೆಗಳನ್ನು ಭಕ್ತರು ಬೆಸ ಸಂಖ್ಯೆಯಲ್ಲಿ ಮನೆಗಳಿಗೆ ಕೊಂಡೊಯ್ಯುದು ದೀಪಾವಳಿ ಹಬ್ಬದ ವರೆಗೂ ಪೂಜಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ.
    ದೇವಸ್ಥಾನದಲ್ಲಿ ಜರುಗಿದ ಹಬ್ಬದಲ್ಲಿ ಎಂ.ಹರನಾಥ ಕೋಠಿ, ಡಿ.ಕೆ ಶಿವಲಿಂಗಪ್ಪ, ಡಿ.ಕೆ ಪಂಚಣ್ಣ, ಹಾಲೇಶ್, ನಾಗರಾಜ್ ಮತ್ತು ನಾಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment