Thursday, November 11, 2021

ಎಂಪಿಎಂ ಕಾರ್ಮಿಕರಿಗೆ ಸೇವಾ ಭದ್ರತೆ : ಮುಖ್ಯಮಂತ್ರಿಗಳಿಗೆ ಕೃತಜ್ಞತೆ

    ಭದ್ರಾವತಿ, ನ. ೧೧: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸುಮಾರು ೨೦೨ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಈ ಹಿನ್ನಲೆಯಲ್ಲಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
    ನ.೯ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ 'ಕೃಷ್ಣ'ದಲ್ಲಿ ನಡೆದ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾರ್ಖಾನೆಯಲ್ಲಿ ಉಳಿದುಕೊಂಡಿರುವ ೨೦೨ ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲು ಆದೇಶಿಸಿದ್ದಾರೆ.
    ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶ ಹೊರಡಿಸಿದ ನಂತರ ಕಾರ್ಮಿಕರಲ್ಲಿ ಆತಂಕ ಎದುರಾಗಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು. ಕಾರ್ಮಿಕರು ಹಾಗು ಕುಟುಂಬ ವರ್ಗದವರು ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸಂಪರ್ಕಿಸಿ ಅಳಲು ತೋರ್ಪಡಿಸಿಕೊಂಡ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಸೇವಾ ಭದ್ರತೆ ನೀಡುವ ಸಂಬಂಧ ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್ ಮತ್ತು ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅವರಿಗೆ ಕಾರ್ಮಿಕರು ಹಾಗು ಕುಟುಂಬ ವರ್ಗದವರ ಪರವಾಗಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಕೃತಜ್ಞತೆ ಸಲ್ಲಿಸಿದೆ ಎಂದು ಸಂಘದ ಸಹ ಕಾರ್ಯದರ್ಶಿ ಶ್ರೀಶೈಲ ತಿಳಿಸಿದ್ದಾರೆ.

ಟೈಯರ್ ಪಂಕ್ಚರ್ : ರಸ್ತೆ ಬದಿಗೆ ಹಾರಿ ಪ್ರಾಣ ಕಳೆದುಕೊಂಡ ಚಾಲಕ



    ಭದ್ರಾವತಿ, ನ. ೧೧: ನಗರದ ಬೈಪಾಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಟೈಯರ್ ಪಂಕ್ಚರ್ ಆದ ಹಿನ್ನಲೆಯಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಚಾಲಕ ರಸ್ತೆ ಬದಿಗೆ ಹಾರಿದ್ದು, ಆದರೂ ಸಹ ಪ್ರಾಣ ಕಳೆದುಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
    ಕಾರು ಚಾಲಕ ಸುಶಾಂತ್(೧೮) ಮೃತಪಟ್ಟ ದುದೈರ್ವಿಯಾಗಿದ್ದು, ಕಾರಿನಲ್ಲಿದ್ದ ಉಳಿದ ೩ ಮಂದಿಗೆ ಯಾವುದೇ ಹಾನಿಯಾಗಿಲ್ಲ. ಮೂಲತಃ ಚಿಕ್ಕಮಗಳೂರಿನ ನಿವಾಸಿಯಾಗಿರುವ ಸುಶಾಂತ್ ಸಂಬಂಧಿಕರೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ಕೆ ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದನು ಎನ್ನಲಾಗಿದೆ. ಸುಶಾಂತ್ ಸೇರಿದಂತೆ ಒಟ್ಟು ೪ ಜನ ಯಾವುದೋ ಕಾರ್ಯ ನಿಮಿತ್ತ  ನಗರದ ಬೈಪಾಸ್ ರಸ್ತೆಯ ವೀರಾಪುರ ಗ್ರಾಮಕ್ಕೆ ತೆರಳಿದ್ದು, ಹಿಂದಿರುಗಿ ಹೊಸಮನೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.
    ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೋಟ್ಪಾ ಕಾಯ್ದೆಯಡಿ ಕಾರ್ಯಾಚರಣೆ : ೫,೧೦೦ ರು. ದಂಡ ವಸೂಲಾತಿ


ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ತಾಲೂಕಿನ ಆನವೇರಿ, ಮೈದೊಳಲು ಮತ್ತು ಕೈಮರ ಗ್ರಾಮಗಳ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯಡಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು. 

ಭದ್ರಾವತಿ, ನ. ೧೧: ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಆನವೇರಿ, ಮೈದೊಳಲು ಮತ್ತು ಕೈಮರ ಗ್ರಾಮಗಳ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯಡಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. 

ಒಟ್ಟು  ರು. ೫,೧೦೦ ದಂಡ ವಿಧಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಕ್ಷೇತ್ರ ಆರೋಗ್ಯ  ಶಿಕ್ಷಣಾಧಿಕಾರಿ ಎನ್.ಟಿ ರಾಜೇಗೌಡ, ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಹಾಲಸ್ವಾಮಿ, ಅಲ್ಲಾಉದ್ಧಿನ್ ತಾಜ್,  ಆರೋಗ್ಯ ನಿರೀಕ್ಷಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ರವಿರಾಜ್ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯ ದೇವರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ವಿಧಾನ ಪರಿಷತ್‌ ಚುನಾವಣೆ : ಪೂರ್ವಭಾವಿ ಸಭೆ

 


 ಕರ್ನಾಟಕ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. 

    ಭದ್ರಾವತಿ, ನ. ೧೧:  ಕರ್ನಾಟಕ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. 

ಸಭೆಯಲ್ಲಿ ಟಿ.ವಿ ಪ್ರಕಾಶ್‌ರವರು ಚುನಾವಣಾ ಪೂರ್ವ ಸಿದ್ಧತೆ ವಿವರವಾದ ಮಾಹಿತಿ ನೀಡಿದರು.  ತಹಶೀಲ್ದಾರ್‌ ಆರ್. ಪ್ರದೀಪ್‌ರವರು ಚುನಾವಣಾ ಪ್ರಕ್ರಿಯೆಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿಕೊಡಬಹುದಾದ ಕಾರ್ಯವೈಖರಿಗಳ ಬಗ್ಗೆ ವಿವರಿಸಿದರು. 

ಮತಗಟ್ಟೆ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿಕಲಚೇತನರು ಹಾಗು ವಯೋವೃದ್ಧರಿಗೆ ಮತಗಟ್ಟೆ ಕೊಠಿಡಿಗೆ ತೆರಳಲು ಸೂಕ್ತ ವ್ಯವಸ್ಥೆ ಸೇರಿದಂತೆ ಅಂಶಗಳ  (ಎ.ಎಂ.ಎಫ್)ಬಗ್ಗೆ ಪರಿಶೀಲಿಸಿ  ವರದಿ ನೀಡುವುದು ಹಾಗು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಧಪಟ್ಟಂತೆ ರಚಿಸಲಾಗುವ ತಂಡಗಳಿಗೆ ಪೊಲೀಸ್ ಇಲಾಖೆಯಿಂದ ಒಬ್ಬ ಎ.ಎಸ್.ಐ ಅಥವಾ ಹೆಚ್.ಸಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸುವಂತೆ ರಕ್ಷಣಾ ಇಲಾಖೆಯವರಿಗೆ ಸೂಚಿಸಲಾಯಿತು. 

ಸಭೆಯಲ್ಲಿ ಪೊಲೀಸ್‌ ಉಪಾಧೀಕ್ಷಕ ಸಾಹಿಲ್ ಬಾಗ್ಲಾ . ನಗರಸಭೆ  ಪೌರಾಯುಕ್ತ ಕೆ. ಪರಮೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಮೇಶ್ ಹಾಗೂ ವಿವಿಧ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು ಗಳು ಮತ್ತು ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕರು, ಎಲ್ಲಾ ಹೋಬಳಿಯ ಉಪತಹಶೀಲ್ದಾರ್‌ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.