ಭದ್ರಾವತಿ, ನ. ೧೧: ನಗರದ ಬೈಪಾಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಟೈಯರ್ ಪಂಕ್ಚರ್ ಆದ ಹಿನ್ನಲೆಯಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಚಾಲಕ ರಸ್ತೆ ಬದಿಗೆ ಹಾರಿದ್ದು, ಆದರೂ ಸಹ ಪ್ರಾಣ ಕಳೆದುಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಕಾರು ಚಾಲಕ ಸುಶಾಂತ್(೧೮) ಮೃತಪಟ್ಟ ದುದೈರ್ವಿಯಾಗಿದ್ದು, ಕಾರಿನಲ್ಲಿದ್ದ ಉಳಿದ ೩ ಮಂದಿಗೆ ಯಾವುದೇ ಹಾನಿಯಾಗಿಲ್ಲ. ಮೂಲತಃ ಚಿಕ್ಕಮಗಳೂರಿನ ನಿವಾಸಿಯಾಗಿರುವ ಸುಶಾಂತ್ ಸಂಬಂಧಿಕರೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ಕೆ ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದನು ಎನ್ನಲಾಗಿದೆ. ಸುಶಾಂತ್ ಸೇರಿದಂತೆ ಒಟ್ಟು ೪ ಜನ ಯಾವುದೋ ಕಾರ್ಯ ನಿಮಿತ್ತ ನಗರದ ಬೈಪಾಸ್ ರಸ್ತೆಯ ವೀರಾಪುರ ಗ್ರಾಮಕ್ಕೆ ತೆರಳಿದ್ದು, ಹಿಂದಿರುಗಿ ಹೊಸಮನೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment