Saturday, February 11, 2023

ರಾಜಕೀಯ ಶಕ್ತಿ ಪಡೆದುಕೊಂಡಾಗ ಮಾತ್ರ ಕಾರ್ಖಾನೆ ಉಳಿಸಿಕೊಳ್ಳಲು ಸಾಧ್ಯ :

ಗುತ್ತಿಗೆ ಕಾರ್ಮಿಕರ ೨೪ನೇ ದಿನದ ಹೋರಾಟದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೪ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಶನಿವಾರ ಆಮ್ ಆದ್ಮಿ  ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಬೆಂಬಲ ಸೂಚಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೧: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳಲು ರಾಜಕೀಯ ಶಕ್ತಿ ಅವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮಲ್ಲಿಯೇ ಒಬ್ಬರನ್ನು ಅಭ್ಯರ್ಥಿಯನ್ನಾಗಿಸಿ ಅವರನ್ನು ನಾವು ಗೆಲ್ಲಿಸುತ್ತೇವೆ. ಆ ಮೂಲಕ ಉಳಿಸಿಕೊಳ್ಳುವ ರಾಜಕೀಯ ಶಕ್ತಿ ತುಂಬುತ್ತೇವೆ ಎಂದು ಆಮ್ ಆದ್ಮಿ  ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದರು.
    ಅವರು ಶನಿವಾರ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೪ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
    ದೇಶಾದ್ಯಂತ ಭ್ರಷ್ಟಾಚಾರ ವ್ಯಾಪಕವಾಗಿದ್ದು, ದೇಶದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ. ಸಾರ್ವಜನಿಕರ ಹಣ ಬಂಡವಾಳ ಶಾಹಿಗಳು ಲೂಟಿ ಮಾಡುತ್ತಿದ್ದಾರೆ.  ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಹಣಕ್ಕೆ ಭದ್ರತೆ ಇಲ್ಲದಂತಾಗಿದೆ.  ಈ ಕಾರ್ಖಾನೆ ವಿಚಾರದಲ್ಲೂ ಸಹ ಇದೆ ರೀತಿಯ ಹುನ್ನಾರ ನಡೆಸಲಾಗುತ್ತಿದೆ. ಕಾರ್ಖಾನೆಯನ್ನು ನಷ್ಟಕ್ಕೆ ಒಳಪಡಿಸಿ ನಂತರ ಅದನ್ನು ಕಡಿಮೆ ಬೆಲೆಗೆ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಿದರು.
    ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಉಳಿಸಿಕೊಳ್ಳಬೇಕಾದರೆ ಮೊದಲು ರಾಜಕೀಯ ಶಕ್ತಿ ಪಡೆದುಕೊಳ್ಳಬೇಕು. ಹೋರಾಟ ನಡೆಸುತ್ತಿರುವ ಕಾರ್ಮಿರಲ್ಲಿ ಯಾರಾದರೊಬ್ಬರನ್ನು ಆಯ್ಕೆ ಮಾಡಿ ನಾವು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಸ್ವತಃ ಕೇಜ್ರಿವಾಲ್‌ರವರನ್ನು ಕರೆ ತಂದು ಅವರ ಪರವಾಗಿ ಪ್ರಚಾರ ನಡೆಸುತ್ತೇವೆ. ಉತ್ತಮ ಆಡಳಿತ ನೀಡಲು ಪ್ರತಿಯೊಬ್ಬರು ಮುಂದೆ ಬರಬೇಕು. ಈಗಾಗಲೇ ಪಂಜಾಬ್ ಮತ್ತು ದೆಹಲಿಯಲ್ಲಿ ನಮ್ಮ ಪಕ್ಷ ಜನರು ನಿರೀಕ್ಷಿಸಿರುವ ಆಡಳಿತ ನೀಡುತ್ತಿದೆ ಎಂದರು.
    ಮಾ.೪ರಂದು ಕೇಜ್ರಿವಾಲ್‌ರವರು ದಾವಣಗೆರೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಕಾರ್ಖಾನೆ ಸಮಸ್ಯೆ ಕುರಿತು ಅವರ ಗಮನಕ್ಕೆ ತರಲಾಗುವುದು.  ಈ ಹಿನ್ನಲೆಯಲ್ಲಿ ಅಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರು ಸಹ ಹಾಜರಿರುವಂತೆ ಮನವಿ ಮಾಡಿದರು.
    ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಮಾತನಾಡಿ, ಕಾರ್ಖಾನೆ ಅಭಿವೃದ್ಧಿಗೊಳಿಸುವಂತೆ ಈ ಹಿಂದೆ ಸಾಕಷ್ಟು ಹೋರಾಟ ನಡೆಸಲಾಗಿದೆ. ಆದರೆ ಈ  ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಕಂಡು ಬರುತ್ತಿದೆ. ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿರುವ ಕಾರ್ಖಾನೆಯನ್ನು ಈಗಲೂ ಉಳಿಸಿಕೊಳ್ಳಬಹುದಾಗಿದೆ. ಕಾರ್ಖಾನೆ ಹೊಂದಿರುವ ಭೂಮಿಯಲ್ಲಿ ಕೇವಲ ಕಾಲು ಭಾಗ ಭೂಮಿ ಮಾರಾಟ ಮಾಡಿದರೆ ಸಾಕು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಲಭ್ಯವಾಗಲಿದೆ ಎಂದರು.
    ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ನಮ್ಮ ತೆರಿಗೆ ಹಣದಲ್ಲಿ ಮುನ್ನಡೆಯುತ್ತಿರುವ ನಮ್ಮ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಪ್ರಸ್ತುತ ನಾವುಗಳು ಪರದಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಮಿಳುನಾಡು, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಲ್ಲಿನ ಜನರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಅದು ಸಾಧ್ಯವಾಗದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಆಮ್ ಆದ್ಮಿ ಪಕ್ಷದ ಪ್ರಮುಖರಾದ ಕಿರಣ್, ನಜೀರ್ ಅಹಮದ್, ಮುಕಬುಲ್, ಹರೀಶ್, ಲಿಂಗರಾಜು, ಎಚ್. ರವಿಕುಮಾರ್, ರೇಷ್ಮಬಾನು, ಜಾವೀದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಫೆ.೧೨ರಂದು ಗುತ್ತಿಗೆ ಕಾರ್ಮಿಕರ ನಿಯೋಗದಿಂದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿ ಭೇಟಿ:
    ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಲಿದೆ.
    ಈಗಾಗಲೇ ಶ್ರೀ ಕ್ಷೇತ್ರದ ಕಾರ್ಯದರ್ಶಿಯಾಗಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೂ ಸಹ ಗುತ್ತಿಗೆ ಕಾರ್ಮಿಕರ ನಿಯೋಗದಿಂದ ಮನವಿ ಸಲ್ಲಿಸಲಾಗಿದ್ದು, ಇದೀಗ ಪೀಠಾಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಿದೆ.

ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್. ಮಣಿಶೇಖರ್, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ

ಭದ್ರಾವತಿಯಲ್ಲಿ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಸ್. ಮಣಿಶೇಖರ್ ಹಾಗು ಸುಮಾರು ೫೦೦ ಮಂದಿ ಬೆಂಬಲಿಗರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಫೆ. ೧೧: ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಸ್. ಮಣಿಶೇಖರ್ ಹಾಗು ಸುಮಾರು ೫೦೦ ಮಂದಿ ಬೆಂಬಲಿಗರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಹಳೇನಗರದ ಕನಕಮಂಟಪದಲ್ಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಎಸ್. ಮಣಿಶೇಖರ್‌ರವರನ್ನು ಪಕ್ಷಕ್ಕೆ ಸ್ವಾಗತಿಸಿ ಅಭಿನಂದಿಸಿದರು.
    ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಆರ್. ನಾಗೇಶ್, ದೇಶ ಪ್ರೇಮಿ ಟಿಪ್ಪು ಯುವಕರ ಸಂಘದ ಅಧ್ಯಕ್ಷ ಮೆಹಬೂಬ್, ಕುರುಬ ಸಮಾಜದ ಪ್ರಮುಖರಾದ ಕುಮಾರ್(ಮಾಸ್ಟರ್), ರಾಜು ಹೋಬಳಿದಾರ್, ಮಂಜುನಾಥ್, ನಾಗತಿಬೆಳಗಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್. ವೇಲುಸ್ವಾಮಿ, ನದೀಮ್ ಪಾಷ, ಜಾವೀದ್, ಕೈಸರ್, ನಾಗರಾಜ್ ಸಿಂಧ್ಯಾ, ಕೋಡಿಹಳ್ಳಿ ರುದ್ರೇಶ್, ಹೊಸಮನೆ ಹೇಮಂತ್‌ಕುಮಾರ್, ಕೂಡ್ಲಿಗೆರೆ ರವಿಕುಮಾರ್, ಮುಕುಂದ ಸೇರಿದಂತೆ ಸುಮಾರು ೫೦೦ ಮಂದಿ ಬೆಂಬಲಿಗರು ಎಸ್. ಮಣಿಶೇಖರ್ ಅವರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.
    ಎಸ್. ಮಣಿಶೇಖರ್ ಮೂಲತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಯುವ ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ವರುಣ್‌ಗೌಡ

ವರುಣ್‌ಗೌಡ
    ಭದ್ರಾವತಿ, ಫೆ. ೧೧: ಒಕ್ಕಲಿಗ ಸಮಾಜದ ಯುವ ಮುಖಂಡ, ಕಾಗದನಗರ ವಾರ್ಡ್ ನಂ. ೬ರ ನಿವಾಸಿ ವರುಣ್‌ಗೌಡರನ್ನು ಯುವ ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ನೇಮಕಗೊಳಿಸಲಾಗಿದೆ.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್‌ರವರು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸೂಚನೆ ಮೇರೆಗೆ ವರುಣ್‌ಗೌಡರನ್ನು ಯುವ ಕಾಂಗ್ರೆಸ್ ರಾಜ್ಯ ವಕ್ತಾರರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿ ಆದೇಶ ಹೊರಡಿಸಿದ್ದಾರೆ.  ಕಾಂಗ್ರೆಸ್ ಸರ್ಕಾರದಲ್ಲಿನ ಸಾಧನೆಗಳು ಹಾಗೂ ಪಕ್ಷದ ಕಾರ್ಯಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ರಾಜ್ಯ ವಕ್ತಾರರಾಗಿ ನೇಮಕಗೊಂಡಿರುವ ವರುಣ್‌ಗೌಡರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಪಕ್ಷದ ನಗರ ಹಾಗು ಗ್ರಾಮಾಂತರ ಘಟಕದ ಅಧ್ಯಕ್ಷರು, ಮುಖಂಡರು ಅಭಿನಂದಿಸಿದ್ದಾರೆ.