Sunday, November 20, 2022

ನೂತನ ಪದಾಧಿಕಾರಿಗಳ ಪದಗ್ರಹಣ : ಆಟೋ, ಬೈಕ್ ಜಾಥ

ಭದ್ರಾವತಿ, ನ. 20 : ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕನ್ನಡ ರಾಜ್ಯೋತ್ಸವ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ನಲ್ಲಿ ಭಾನುವಾರ ನಡೆಯಿತು.
      ನೂತನ ಅಧ್ಯಕ್ಷರಾಗಿ ಐ.ವಿ ಸಂತೋಷ್ ಕುಮಾರ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು. ಇದಕ್ಕೂ ಮೊದಲು ಹಳೆನಗರ ಕನಕ ಮಂಟಪ ಮೈದಾನದಿಂದ ಶಿವಮೊಗ್ಗದ ವಿಕಲಚೇತನ, ಕನ್ನಡಾಭಿಮಾನಿ ಶಿವು ರಾಮಪ್ಪ ನೇತೃತ್ವದಲ್ಲಿ  ಆಟೋ ಮತ್ತು  ಬೈಕ್ ಜಾಥ  ನಡೆಸಲಾಯಿತು.   
   ಸಂಸ್ಥಾಪಕ ಅಧ್ಯಕ್ಷ ಡಿ.ಜೆ ಪ್ರಭು ಚಾಲನೆ ನೀಡಿದರು. ರಾಜ್ಯ ಉಪಾಧ್ಯಕ್ಷ ಮೋಸಸ್ ರೋಸಯ್ಯ ಸೇರಿದಂತೆ ಪ್ರಮುಖರು,  ಪದಾಧಿಕಾರಿಗಳು, ಕಾರ್ಯಕರ್ತರು, ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.

ನ.೨೫ರಂದು ಭದ್ರಾವತಿಗೆ ಶ್ರೀ ಶೃಂಗೇರಿ ಜಗದ್ಗುರುಗಳ ಆಗಮನ : ಕೆ.ಆರ್ ಸುಬ್ಬರಾವ್

    ಭದ್ರಾವತಿ, ನ. ೨೦ ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠಕ್ಕೆ ನ.೨೫ರಂದು ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಆಗಮಿಸುತ್ತಿದ್ದಾರೆಂದು ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ತಿಳಿಸಿದರು.
    ಅವರು ಭಾನುವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಸಂಜೆ ೬ ಗಂಟೆಗೆ ಶ್ರೀಗಳನ್ನು ಕೆಎಸ್‌ಆರ್‌ಟಿಸಿ ಘಟಕದ ಸಮೀಪದಲ್ಲಿರುವ ಶ್ರೀ ಶಂಕರವೃತ್ತದಿಂದ ವೇದಘೋಷದೊಂದಿಗೆ, ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಗುವುದು. ಶ್ರೀಗಳು ಮಠಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಧೂಳಿ ಪಾದ ಪೂಜೆ ನಡೆಯಲಿದ್ದು, ನಂತರ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ರಾತ್ರಿ ೮.೩೦ಕ್ಕೆ ಶ್ರೀಗಳು ಶ್ರೀ ಶಾರದಾ ಚಂದ್ರಮೌಳೀಶ್ವರರ ಪೂಜೆ ನೆರವೇರಿಸಲಿದ್ದು, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಜರುಗಲಿದೆ ಎಂದರು.
    ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನ.೨೬ರಂದು ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಲಲಿತಾ ಹೋಮ ಜರುಗಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳಿಂದ ಫಲ-ಮಂತ್ರಾಕ್ಷತೆ ಅನುಗ್ರಹ ಜರುಗಲಿದೆ ಎಂದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾರದಾಂಬೆ ಹಾಗು ಶ್ರೀಗಳ ಕೃಪೆಗೆ ಪಾತ್ರರಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
    ಪ್ರಮುಖರಾದ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ನಾಗರಾಜ್, ಲಲಿತಾ ನಾಗರಾಜ್ ಹಾಗು ಮಠದ ವ್ಯವಸ್ಥಾಪಕ ಶಾಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಗೆ ನ.೨೫ರಂದು ಶ್ರೀ ಶೃಂಗೇರಿ ಜಗದ್ಗುರುಗಳ ಆಗಮನ ಕುರಿತು ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹತಿ ನೀಡಿದರು. 

ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಲು ಸ್ಥಳ ಪರಿಶೀಲನೆ

ಭದ್ರಾವತಿ ತಾಲೂಕಿನ ಕಲ್ಪನ ಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
    ಭದ್ರಾವತಿ, ನ. ೨೦ :  ತಾಲೂಕಿನ ಕಲ್ಪನ ಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
       ಜಾಗೋ ಬಂಜಾರ ಯುವಕರ ಸಂಘದ ಅಧ್ಯಕ್ಷ ಪ್ರವೀಣ್ ನಾಯ್ಕ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಸೂಕ್ತ ಕ್ರೀಡಾಂಗಣವಿಲ್ಲದ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರೀಡಾಂಗಣಕ್ಕೆ ಸ್ಥಳ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ.
      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಾಗೋ ಬಂಜಾರ ಯುವಕರ ಸಂಘದ ಉಪಾಧ್ಯಕ್ಷ ಗುಂಡು, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಹಾಗೂ ಕುಮಾರ್, ರಾಕೇಶ್, ರಾಹುಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.