Friday, December 25, 2020

ಕೊರೋನಾ ನಡುವೆಯೂ ಸಂಭ್ರಮದ ವೈಕುಂಠ ಏಕಾದಶಿ


ಪುರಾಣ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಸಂಭ್ರಮಕ್ಕೆ ಮೊಟಕು



ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ನಡೆಯಿತು.
   ಭದ್ರಾವತಿ, ಡಿ. ೨೫: ಕೋವಿಡ್-೧೯ರ ನಡುವೆಯೂ ತಾಲೂಕಿನ ವಿವಿಧ ದೆವಾಲಯಗಳಲ್ಲಿ ಸಂಪ್ರದಾಯದಂತೆ ಶುಕ್ರವಾರ ವೈಕುಂಠ ಏಕಾದಶಿ ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.
      ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ :  
    ಕ್ಷೇತ್ರದ ಪುರಾಣ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಗಿನ ಜಾವ ೪ ಗಂಟೆಗೆ ದೇವಾಲಯದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಪರುಷೋತ್ತಮಸ್ವಾಮಿ, ಶ್ರೀ ವೇಣುಗೋಪಾಲಕೃಷ್ಣ ಸೇರಿದಂತೆ ಮೂಲ ವಿಗ್ರಹಗಳಿಗೆ ವಿಶೇಷಲಂಕಾರ ಕೈಗೊಳ್ಳುವ ಮೂಲಕ ವಿಶೇಷ ಪೂಜೆಯೊಂದಿಗೆ ಒಳಪ್ರಾಕಾರದಲ್ಲಿ ಚಂಡೆ, ಮಂಗಳವಾದ್ಯ ಸಹಿತ ಉತ್ಸವ ನಡೆಸಲಾಯಿತು. ೬ ಗಂಟೆಯಿಂದ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಸೇರಿದಂತೆ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು.  
     ಸಹಾಯಕ ಅರ್ಚಕ ಶ್ರೀನಿವಾಸ್, ನಾರಾಯಣಚಾರ್, ನರಸಿಂಹಚಾರ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಉಪಾಧ್ಯಕ್ಷ ರಮಾಕಾಂತ್, ಇಂದ್ರಸೇನ, ಕೃಷ್ಣಪ್ಪ, ಸರೂ, ವೇದ ಪಾಠಶಾಲೆಯ ರವಿ, ಶ್ರೀನಿಧಿ, ಶ್ರೀಹರಿ, ಅಭಿರಾಮ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಪೂಜಾಕೈಂಕರ್ಯಗಳನ್ನು ನೆರವೇರಿಸಿತು.


ಭದ್ರಾವತಿ ಅಪ್ಪರ್ ಹುತ್ತಾ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತೀವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಲಾಯಿತು. ಮೂಲ ವಿಗ್ರಹಕ್ಕೆ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು.
        ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ :
    ನಗರದ ಅಪ್ಪರ್ ಹುತ್ತಾ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತೀವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಲಾಯಿತು. ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತಾಧಿಗಳಿಗೆ ತೀರ್ಥಪ್ರಸಾದ, ಲಾಡು, ಬಾದಮಿ ಹಾಲು ವಿತರಣೆ ನಡೆಯಿತು. ಕೋವಿಡ್-೧೯ರ ನಡುವೆಯೂ ಹೆಚ್ಚಿನ ಭಕ್ತಾಧಿಗಳು ಪಾಲ್ಗೊಂಡಿದ್ದರು. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಆದರೆ ಮಾಸ್ಕ್, ಸಾಮಾಜಿಕ ಅಂತರ ಕಂಡು ಬರಲಿಲ್ಲ.


ಭದ್ರಾವತಿ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಪೊಲೀಸ್ ಮೈದಾನದಲ್ಲಿರುವ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಆಕರ್ಷಕ ಅಲಂಕಾರ ಕೈಗೊಳ್ಳಲಾಗಿತ್ತು.     
        ಮಿಲ್ಟ್ರಿಕ್ಯಾಂಪ್ ಶ್ರೀನಿವಾಸಸ್ವಾಮಿ ದೇವಾಲಯ :
    ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಪೊಲೀಸ್ ಮೈದಾನದಲ್ಲಿರುವ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಆಕರ್ಷಕ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತಾದಿಗಳಿಗೆ ತೀರ್ಥಪ್ರಸಾದ, ಲಾಡು ವಿತರಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು.


ಭದ್ರಾವತಿ ಹಳೇ ಭಂಡಾರಹಳ್ಳಿ ಗ್ರಾಮದ ಶ್ರೀ ಮೂಲ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಬಾರಿ ವೈಕುಂಠ ಏಕಾದಶಿ ಅದ್ದೂರಿಯಾಗಿ ಜರುಗಿತು. ಕಾಗದನಗರದ ಸಂತೋಷ್ ಶಾಮಿಯಾನ ವತಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಲಂಕಾರ ಭಕ್ತಾಧಿಗಳ ಗಮನ ಸೆಳೆಯಿತು.
           ಮೂಲ ರಂಗನಾಥಸ್ವಾಮಿ ದೇವಾಲಯ:
      ಹಳೇ ಭಂಡಾರಹಳ್ಳಿ ಗ್ರಾಮದ ಶ್ರೀ ಮೂಲ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಬಾರಿ ವೈಕುಂಠ ಏಕಾದಶಿ ಅದ್ದೂರಿಯಾಗಿ ಜರುಗಿತು. ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಅಲಂಕಾರ ಕೈಗೊಳ್ಳಲಾಗಿತ್ತು. ಅಲ್ಲದೆ ಕಾಗದನಗರದ ಸಂತೋಷ್ ಶಾಮಿಯಾನ ವತಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಲಂಕಾರ ಭಕ್ತಾಧಿಗಳ ಗಮನ ಸೆಳೆಯಿತು. ದೇವಸ್ಥಾನದ ಕಿಟ್ಟಣ್ಣ ಸ್ವಾಮೀಜಿ(ಕೃಷ್ಣಮೂರ್ತಿ)ಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ತೀರ್ಥಪ್ರಸಾದ, ಅನ್ನಸಂತರ್ಪಣೆ ನೆರವೇರಿತು.


ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿರುವ ತಿರುಮಲ ಸ್ವಾಮಿ ವಿಗ್ರಹಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಈ ಬಾರಿ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು.
     ದೊಣಬಘಟ್ಟ ತಿರುಮಲ ಸ್ವಾಮಿ ವಿಗ್ರಹಕ್ಕೆ ವಿಶೇಷ ಅಲಂಕಾರ :
    ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿರುವ ತಿರುಮಲ ಸ್ವಾಮಿ ವಿಗ್ರಹಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಈ ಬಾರಿ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು. ಇದು ಅತಿ ಪ್ರಾಚೀನ ವಿಗ್ರಹವಾಗಿದ್ದು, ಆದರೆ ದೇವಸ್ಥಾನ ನಿರ್ಮಾಣಗೊಂಡಿಲ್ಲ. ಇದೀಗ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೇವಸ್ಥಾನ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಆರ್ಚಕರಾದ ನಾಗರಾಜ್, ಆರ್. ರವಿ, ಐತಾಳ್, ಇಮ್ರಾನ್, ಜಯರಾಮ್, ನಿರಂಜನ್, ಅಹಮದ್ ಆಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ವೈಕುಂಠ ಏಕಾದಶಿ ಆಚರಿಸಲಾಯಿತು.
       ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ :
    ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ವೈಕುಂಠ ಏಕಾದಶಿ ಆಚರಿಸಲಾಯಿತು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ, ಶ್ರೀ ಸ್ವಾಮಿಯ ವೈಕುಂಠ ದರ್ಶನ ಭಕ್ತರ ಗಮನ ಸೆಳೆಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ವಂದೇ ಮಾತರಂ ಟ್ರಸ್ಟ್, ದೇವಸ್ಥಾನ ಸೇವಾ ಸಮಿತಿ ಹಾಗು ಅಯ್ಯಪ್ಪ ಭಕ್ತ ವೃಂದ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಬಾರಂದೂರು ಹಾಗು ಸುತ್ತಮುತ್ತಲ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ಕೃಷಿ ಸನ್ಮಾನ್ ಯೋಜನೆ ರೈತರ ಶ್ರಮಕ್ಕೆ ಸಲ್ಲುವ ಗೌರವ : ಸಂಸದ ಬಿ.ವೈ ರಾಘವೇಂದ್ರ

ಮಾಜಿ ಪ್ರಧಾನಿ, ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
     ಭದ್ರಾವತಿ, ಡಿ. ೨೫: ಕೃಷಿ ಸನ್ಮಾನ್ ಯೋಜನೆ ರೈತರಿಗೆ ಲಂಚ ಕೊಡುವ ಯೋಜನೆಯಲ್ಲ ಬದಲಾಗಿ ರೈತರ ಶ್ರಮ ಗೌರವಿಸುವುದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ರೈತರ ಶ್ರಮವಿಲ್ಲದೆ ನಾವುಗಳು ಬದಕಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನಾವುಗಳು ರೈತರನ್ನು ಪ್ರತಿ ಕ್ಷಣ ನೆನಪು ಮಾಡಿಕೊಳ್ಳಬೇಕಾಗಿದೆ. ರೈತರು ಪ್ರಕೃತಿ ವಿಕೋಪ, ಬೆಲೆ ಕುಸಿತ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆಯೂ ಕೃಷಿ ನಂಬಿ ಬದುಕುತ್ತಿರುವ ರೈತರ ಬದುಕು ಅಭಿನಂದನಾರ್ಹವಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಅಭಿನಂದಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
    ಪ್ರಸ್ತುತ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಸಹ ಎಲ್ಲರೂ ಜೀವನ ಪರ್ಯಂತ ನೆನಪು ಮಾಡಿಕೊಳ್ಳುವಂತಹ ಯೋಜನೆಗಳಾಗಿವೆ ಎಂಬುದನ್ನು ಯಾರು ಸಹ ಮರೆಯಬಾರದು. ೨೦೧೮ರಲ್ಲಿ ಕೃಷಿ ಸನ್ಮಾನ್ ಯೋಜನೆ ಜಾರಿಗೆ ತಂದ ಆರಂಭದಲ್ಲಿ ಜಿಲ್ಲೆಯಲ್ಲಿ ೧೩,೫೦೦ ಮಂದಿ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದರು. ಪ್ರಸ್ತುತ ಈ ಯೋಜನೆಯಡಿ ಜಿಲ್ಲೆಯಲ್ಲಿ ೧,೫೦,೫೦೭ ಮಂದಿ ರೈತರು ಫಲಾನುಭವಿಗಳಾಗಿದ್ದು, ಜಿಲ್ಲೆಗೆ ೩೦.೫೦ ಕೋ. ರು. ಹಣ ಬಿಡುಗಡೆಯಾಗಿ ತಲಾ ೨,೦೦೦ ರು. ಇಂದು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ. ಇದೆ ರೀತಿ ಭದ್ರಾವತಿ ತಾಲೂಕಿನಲ್ಲಿ ೨೨,೮೬೩ ರೈತರು ಫಲಾನುಭವಿಗಳಾಗಿದ್ದು, ಒಟ್ಟು ೪.೭೦ ಕೋ. ರು. ಬಿಡುಗಡೆಯಾಗಿ ರೈತರ ಖಾತೆಗೆ ಹಣ ಜಮಾ ಆಗಿದೆ ಎಂದರು.
    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಬಿಜೆಪಿ ಪಕ್ಷ ಸಾಮಾನ್ಯರ ಪಕ್ಷವಾಗಿದೆ. ಇದು ಹಣ, ಜಾತಿ ಆಧಾರದ ಮೇಲೆ ಸಂಘಟಿತಗೊಂಡಿಲ್ಲ ಬದಲಾಗಿ ಪಕ್ಷದ ಹಿರಿಯರ ವೈಚಾರಿಕ ಚಿಂತನೆಗಳು, ಆದರ್ಶ ಗುಣಗಳು, ಭವಿಷ್ಯದ ಆಲೋಚನೆಗಳು ಹಾಗು ಕಾರ್ಯಕರ್ತರ ಶ್ರಮದಿಂದ ಬೆಳೆದು ಬಂದಿದೆ. ಈ ಹಿನ್ನಲೆಯಲ್ಲಿ ಮುಂದಿನ ಎಲ್ಲಾ ಅವಧಿಗೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆಂಬ ವಿಶ್ವಾಸವಿದೆ ಎಂದರು.
    ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪಕ್ಷದ ತತ್ವ, ಸಿದ್ದಾಂತಗಳು ಮುಖ್ಯ. ಯಾವುದೇ ಅಧಿಕಾರದ ಆಸೆಗಾಗಿ ದುಡಿಯದೆ ಪಕ್ಷ ಸಂಘಟನೆಗಾಗಿ ದುಡಿಯಬೇಕು. ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತ ಹಾಗು ಕಾರ್ಯಕರ್ತರ ಶ್ರಮದಿಂದಾಗಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಚಿತ್ರಣ ಸಹ ಬದಲಾಗಲಿದೆ. ಕಾರ್ಯಕರ್ತರು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುನ್ನಡೆಯಬೇಕೆಂದು ಕರೆ ನೀಡಿದರು.  
    ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಎಂ.ಬಿ ಭಾನುಪ್ರಕಾಶ್, ಆರ್.ಕೆ ಸಿದ್ದರಾಮಯ್ಯ, ಗಿರೀಶ್‌ಪಟೇಲ್, ಡಿ.ಎಸ್ ಅರುಣ್, ಸುವರ್ಣಶಂಕರ್, ಪವಿತ್ರ ರಾಮಯ್ಯ, ಚನ್ನಬಸಪ್ಪ, ಜ್ಞಾನೇಶ್ವರ್, ಎಸ್.ಎಸ್ ಜ್ಯೋತಿಪ್ರಕಾಶ್, ಗುರುಮೂರ್ತಿ, ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಎಂ. ಪ್ರಭಾಕರ್ ಸ್ವಾಗತಿಸಿದರು.


ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರ ಗಣ್ಯರು ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೈತ ಸಂವಾದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದರು.