ಭದ್ರಾವತಿ ಹಳೇನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಗುರುವಾರ ತುರ್ತು ಪರಿಸ್ಥಿತಿ ಕರಾಳ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಜೂ. ೩೦: ಸಂವಿಧಾನಕ್ಕೆ ವಿರೋಧವಾಗಿ ಇಂದಿರಾಗಾಂಧಿಯವರು ೧೯೭೦ರಲ್ಲಿ ಜಾರಿಗೆ ತಂದ ತುರ್ತುಪರಿಸ್ಥಿತಿ ನಿಜಕ್ಕೂ ಭಾರತದ ಇತಿಹಾಸದಲ್ಲಿ ಒಂದು ಕರಾಳಕಾಲಮಾನ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
ಅವರು ಗುರುವಾರ ಸಂಜೆ ಹಳೇನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಪರಿಸ್ಥಿತಿ ಕರಾಳ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರ ದಾಹದಿಂದ ಕಾಂಗ್ರೆಸ್ ಪಕ್ಷದ ನಾಯಕಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಜಾರಿಗೆ ತಂದ ತುರ್ತುಪರಿಸ್ಥಿತಿಯಿಂದಾಗಿ ದೇಶದ ಸಾಮಾನ್ಯ ನಾಗರೀಕರ ಸ್ವಾತಂತ್ರ್ಯ ಹಾಗು ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿ ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ಇಡೀ ದೇಶ ತೊಂದರೆ ಅನುಭವಿಸುವಂತಾಯಿತು. ಇದರ ವಿರುದ್ಧವಾಗಿ ಅಂದು ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗು ರಾಜ್ಯನಾಯಕರು ಹೋರಾಟ ನಡೆಸಿ ಸೆರೆವಾಸ ಅನುಭವಿಸಿದರು. ನಿರಂತರ ಹೋರಾಟದ ಪರಿಣಾಮ ನಂತರದ ದಿನಗಳಲ್ಲಿ ತುರ್ತುಪರಿಸ್ಥಿತಿಯನ್ನು ಹಿಂಪಡೆಯಲಾಯಿತು ಎಂದರು.
ಪಕ್ಷದ ಹಿರಿಯರಾದ ಮಧುಕಾನಿಟ್ಕರ್ ಮಾತನಾಡಿ, ತುರ್ತುಪರಿಸ್ಥಿತಿ ವಿರೋಧಿಸಿ ಸ್ಥಳೀಯವಾಗಿ ನಡೆದ ಹೋರಾಟ ಹಾಗೂ ಅದಕ್ಕಾಗಿ ಹೋರಾಟನಡೆಸಿದವರ ಸ್ಮರಣೆ ಹಾಗೂ ಅಂದಿನ ದಿನಗಳ ಅನುಭವವನ್ನು ಮೆಲಕುಹಾಕಿದರು.
ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಕಾರ್ಯದರ್ಶಿ ಚನ್ನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್ ಸಿದ್ದಾರ್ಥ್, ಪ್ರಮುಖರಾದ ಟಿ. ವೆಂಕಟೇಶ್, ರುದ್ರಪ್ಪ, ಎಸ್.ಎನ್ ಬಾಲಕೃಷ್ಣ, ವಿಶ್ವನಾಥ್ ಕೋಠಿ, ವಿಶ್ವನಾಥರಾವ್, ರಾಮಲಿಂಗಯ್ಯ, ನರಸಿಂಹಾಚಾರ್, ವಿ. ಕದಿರೇಶ್, ಬಿ.ಎಸ್ ನಾರಾಯಣಪ್ಪ, ಬಸವರಾಜ್, ಶಕುಂತಲ, ಅನ್ನಪೂರ್ಣ, ಮಂಜುಳಾ, ರೇಖಾ ಪದ್ಮಾವತಿ, ಜೆ. ಮೂರ್ತಿ, ರವಿಚಂದ್ರ, ಮಂಜುನಾಥ್, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.