ಸೋಮವಾರ, ಆಗಸ್ಟ್ 4, 2025

ವಿವಿಧ ಬೇಡಿಕೆ ಈಡೇರಿಸಲು ಕಾರ್ಮಿಕ ಸಚಿವರಿಗೆ ಮನವಿ


    ಭದ್ರಾವತಿ: ಕಾರ್ಮಿಕರಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್‌ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಸೋಮವಾರ ಕಾರ್ಮಿಕರ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಮನವಿಯಲ್ಲಿ ವಿಧಾನಸಭಾ ಕ್ಷೇತ್ರವು ರಾಜ್ಯದಲ್ಲಿಯೇ ವಿಶೇಷವಾಗಿರುವ ಕಾರ್ಮಿಕ ನಗರವಾಗಿದೆ. ಇಲ್ಲಿ ವಿ.ಐ.ಎಸ್.ಎಲ್. ಮತ್ತು ಎಂ.ಪಿ.ಎಂ. ಕಾರ್ಖಾನೆಗಳು ಉತ್ತುಂಗದಲ್ಲಿ ನಡೆಯುತ್ತಿದ್ದು, ಆದರೆ ಕಾರಣಾಂತರದಿಂದ ಈಗಾಗಲೇ ಕಾರ್ಖಾನೆ ಸ್ಥಗಿತಗೊಂಡಿದೆ. ವಿಐಎಸ್‌ಎಲ್ ಕಾರ್ಖಾನೆ ಮುಚ್ಚು ಬೀತಿ ಎದುರಾಗಿದೆ. ಆನೇಕ ಕಾರ್ಮಿಕರು, ಯುವಕರು, ಮಹಿಳೆಯರು ಕ್ಷೇತ್ರದಲ್ಲಿ ಉದ್ಯೋಗವಿಲ್ಲದೇ ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾರ್ಮಿಕರ, ಮಹಿಳೆಯರ ಮತ್ತು ಯುವಕರ ಜೀವನವು ದುಸ್ಥರವಾಗಿದೆ. ಇವರುಗಳ ಜೀವನ ಉತ್ತಮವಾಗಿ ಸಾಗಿಸಲು ಮತ್ತು ವಲಸೆ ಹೋಗುವುದುನ್ನು ತಡೆಗಟ್ಟಲು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ. 
    ನಗರದ ವಿಮಾ ಚಿಕಿತ್ಸಾಲಯದ ವೈದ್ಯಕೀಯ ವಿಭಾಗದಲ್ಲಿ ೪ ವೈದ್ಯರ ಅವಶ್ಯಕತೆ ಇದ್ದು, ಇದರಲ್ಲಿ ೨ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ೪ ವೈದ್ಯರನ್ನು ನಿಯೋಜಿಸುವುದು. ಸ್ಟಾಫ್ ನರ್ಸ್ ೨, ಕಂಪ್ಯೂಟರ್ ಆಪರೇಟರ್ ೨, ಫಾರ್ಮಸಿ ಅಧಿಕಾರಿ ೨ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ನಿಯೋಜಿಸುವುದು. ಯು.ಪಿ.ಎಸ್ ದುಸ್ಥಿತಿಯಲ್ಲಿದ್ದು ಹೊಸ ಯು.ಪಿ.ಎಸ್. ಮಂಜೂರು ಮಾಡುವುದು. ತಾಲೂಕಿನಲ್ಲಿ ಸವಿತಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಕುಶಲತೆಯ ಸಾಮಾಗ್ರಿ ಕಿಟ್ ನೀಡುವುದು. ಕಾರ್ಮಿಕರಿಗೆ ಆಸ್ಪತ್ರೆಯಲ್ಲಿಯೇ ವೈದ್ಯಕೀಯ ವೆಚ್ಚ ನೀಡುವುದು. ಬೇರೆ ಕಾರ್ಮಿಕರಿಗೆ ನೀಡುವಂತೆ ಕಟ್ಟಡ ಕಾರ್ಮಿಕರಿಗೂ ಇ.ಎಸ್.ಐ. ಸೌಲಭ್ಯ ನೀಡುವಂತೆ ಕೋರಲಾಗಿದೆ.
    ಕೌಶಲ್ಯ ಕಿಟ್‌ಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ಉತ್ತಮ ಗುಣಮಟ್ಟದ ಉಪಕರಣಗಳನ್ನು ನೀಡುವುದು. ಅಪಘಾತ ವಿಮೆ, ವಿದ್ಯಾರ್ಥಿ ವೇತನ ಶೀಘ್ರದಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಹೊಸ ನಿವೇಶನ ನೀಡುವುದು. ಕಟ್ಟಡ ಕಾರ್ಮಿಕರ ವಸತಿ ದುರಸ್ಥಿಗೆ ರು. ೩ ಲಕ್ಷ ಸಹಾಯಧನ ನೀಡುವುದು. ಕಾರ್ಮಿಕರ ಶವಸಂಸ್ಕಾರ ಸಹಾಯ ಧನ ರು. ೧ ಲಕ್ಷಕ್ಕೆ ಹೆಚ್ಚಿಸುವುದು. ಕರ್ನಾಟಕ ರಾಜ್ಯದಲ್ಲಿಯೇ ಪ್ರತಿಷ್ಠಿತ ಐ.ಟಿ.ಐ. ಮತ್ತು ಡಿಪ್ಲೋಮಾ ಕಾಲೋಜು  ಕ್ಷೇತ್ರದಲ್ಲಿದ್ದು ಇಲ್ಲಿಯ ಸಂಪನ್ಮೂಲ ಕಟ್ಟಡ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು. ಕಟ್ಟಡ ಕಾರ್ಮಿಕರಿಗೆ ತರಬೇತಿ ಸಮಯದಲ್ಲಿ ಅವರಿಗೆ ನೀಡುವ ಗೌರವಧನ ಹೆಚ್ಚಿಸುವುದು. ಬೀದಿಬದಿ ವ್ಯಾಪರಸ್ಥರಿಗೆ ತಳ್ಳುವ ಗಾಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಖರೀದಿಸಲು ಆರ್ಥಿಕ ಸಹಾಯಧನ ರು.೨ ಲಕ್ಷ ನೀಡುವುದು. ಕಟ್ಟದ ಕಾರ್ಮಿಕರಿಗೆ ದ್ವಿಚಕ್ರವಾಹನ ಖರೀದಿಸಲು ಸಹಾಯಧನ ನೀಡುವುದು ಹಾಗು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ. 

ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕಾರ್ಮಿಕರಿಗಾಗಿ ಹಲವು ಯೋಜನೆಗಳು ಜಾರಿಗೆ : ಸಚಿವ ಸಂತೋಷ್ ಎಸ್. ಲಾಡ್

ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಎಸ್‌ಸಿ/ಎಸ್‌ಟಿ ಕಾರ್ಮಿಕರಿಗಾಗಿ `ಆಶಾದೀಪ' 

ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಭದ್ರಾವತಿ: ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೇಶದಲ್ಲಿಯೇ ಮಹತ್ವಪೂರ್ಣವಾದ ೪ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲೂ ವಿಶೇಷವಾಗಿ ಗಿಗ್ ಕಾರ್ಮಿಕರಿಗೆ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಗಿಗ್ ಕಾರ್ಮಿಕರ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು. 
    ಕಾರ್ಮಿಕ ಇಲಾಖೆ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 
      ಸ್ವಿಗ್ಗಿ, ಝೊಮ್ಯಾಟೊ ಸಂಸ್ಥೆಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗು ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಫ್‌ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಝೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ೫ ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ರಾಜ್ಯದಲ್ಲಿದ್ದಾರೆ. ಸಾಗಾಣಿಕೆ ದರದ ಮೇಲೆ ಶೇ.೧ ರಿಂದ ೫ರಷ್ಟು ಹಣ ಮತ್ತು ಸರ್ಕಾರ ನೀಡುವ ಹಣದಿಂದ ಅವರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು. 
    ಎರಡನೆಯದು ಸಹನಟರು, ಟಿಕೆಟ್ ನೀಡುವವರು, ತಂತ್ರಜ್ಞರು, ಪೌರಾಣಿಕ ನಾಟಕ ನಟರು ಸೇರಿದಂತೆ ಹಿನ್ನೆಲೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ಸಿನಿ ಯೋಜನೆ ಜಾರಿಗೆ ತರಲಾಗಿದೆ. ಶೇ.೧ ರಿಂದ ೨ ಸೆಸ್ ಮತ್ತು ಸರ್ಕಾರದ ಹಣ ಸೇರಿಸಿ ಅನುಕೂಲ ಮಾಡಲಾಗಿದೆ. ಮೂರನೇಯದು ಕಮರ್ಷಿಯಲ್ ಡ್ರೈವರ್ ಕ್ಲೀನರ್, ಮೆಕ್ಯಾನಿಕ್ ಇತರೆ ಕಾರ್ಮಿಕರ ಸಾರಿಗೆ ಯೋಜನೆ ತರಲಾಗಿದ್ದು, ಅಪಘಾತ, ಮರಣ ಅಥವಾ ತೊಂದರೆಯಾದಲ್ಲಿ ರು. ೫ ಲಕ್ಷ ನೀಡುವ ಯೋಜನೆ ಇದಾಗಿದೆ. ಪ್ರತಿ ತಾಸಿಗೆ ೨೦ ಸಾವಿರ ಮರಣ ಸಂಭವಿಸುತ್ತಿದ್ದು, ಪ್ರತಿ ದಿನ ೪೮೦ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದುಡಿಯುವ ವರ್ಗವೇ ಇದಕ್ಕೆ ಹೆಚ್ಚು ಬಲಿಯಾಗುತ್ತಿರುವ ಕಾರಣ ದೇಶದ ಜಿಡಿಪಿಗೆ ಶೇ.೩ ನಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 
    ನಾಲ್ಕನೇಯದು ದೇಶದಲ್ಲೇ ಪ್ರಪ್ರಥಮ ಯೋಜನೆ `ಆಶಾದೀಪ' ಜಾರಿಗೆ ತರಲಾಗಿದ್ದು, ಎಸ್‌ಸಿ/ಎಸ್‌ಟಿ ಯವರಿಗೆ ಕೆಲಸ ನೀಡುವ ಖಾಸಗಿ ಸಂಸ್ಥೆ/ಕಂಪನಿಗೆ ಕಾರ್ಮಿಕ ಇಲಾಖೆಯಿಂದ ಅವರಿಗೆ ಪಾವತಿಸಲು ಶೇ.೫೦ ಹಣ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಕಾರ್ಮಿಕರ ಪಾಲಿಗೆ ನಿಜಕ್ಕೂ ಆಶಾದೀಪವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆಯು ೯೧ ಸಣ್ಣ ಸಣ್ಣ ಕೆಲಸ ಮಾಡುವ ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಅಸಂಘಟಿತ ವರ್ಗದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಡೀಸೆಲ್, ಪೆಟ್ರೋಲ್‌ನಿಂದ ೫೦ ಪೈಸೆಯಿಂದ ೧ ರು. ಸೆಸ್ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ರಾಜ್ಯದಲ್ಲಿಯೇ ಏಕೈಕ ಕಾರ್ಮಿಕರ ಸಮುದಾಯ ಭವನ ಇದಾಗಿದೆ. ಸಚಿವ ಸಂತೋಷ್ ಎಸ್ ಲಾಡ್‌ರವರು ದೂರದೃಷ್ಟಿ ಹಾಗು ಚಿಂತನಶೀಲ ವ್ಯಕ್ತಿಯಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕಾರ್ಮಿಕರ ಧ್ವನಿಯಾಗಿದ್ದು, ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಮಿಕರಿದ್ದು, ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದರು. 
    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಜೆ.ವಿ ಸುಪ್ರಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,  ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. 
    ಹಾಸನ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಎಚ್.ಎಲ್ ಗುರುಪ್ರಸಾದ್ ಸ್ವಾಗತಿಸಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಕಲ್ಯಾಣ ಆಯುಕ್ತ ಟಿ. ಆಂಜನೇಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಡಗೀತೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡದಿಂದ ಗಾಯನ ನಡೆಯಿತು. 

ಕಾರ್ಮಿಕ ಸಮುದಾಯ ಭವನ ಲೋಕಾರ್ಪಣೆ : ೯.೫ ಕೋ. ರು. ವೆಚ್ಚದ ಸುಸ್ಸಜಿತ ಕಟ್ಟಡ


ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ : ಕಾರ್ಮಿಕ ಇಲಾಖೆ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 
    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಜೆ.ವಿ ಸುಪ್ರಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,  ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. 


    ೯.೫ ಕೋ.ರು ವೆಚ್ಚದ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ : 
  ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ ನಿರ್ಮಿಸಲಾಗಿದೆ. ಮುಖ್ಯ ಆಡಳಿತಾಧಿಕಾರಿಗಳು, ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ ರವರು ತಾಲೂಕಿನಲ್ಲಿರುವ ಕಾರ್ಮಿಕರು ಮತ್ತು ಅವರ ಅವಲಂಬಿತರ ಉಪಯೋಗಕ್ಕೆ ಸರ್ವೇ ನಂ. ೨೦. ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮ, ಭದ್ರಾವತಿ ತಾಲ್ಲೂಕಿನಲ್ಲಿ ಕಾರ್ಖಾನೆಗೆ ಸೇರಿದ ೬೭ ಎಕರೆ ೧೨ ಗುಂಟೆ ಭೂ ಭಾಗದಲ್ಲಿ ೨ ಎಕರೆ ಜಮೀನನ್ನು ಸಮುದಾಯ ಭವನ ನಿರ್ಮಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ನೀಡಿರುತ್ತಾರೆ. 
    ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೧೮೭ ಸಂಸ್ಥೆಗಳಿಂದ ೩೯೯೬೯ ಕಾರ್ಮಿಕರು ಮಂಡಳಿಗೆ ರು..೨೪,೧೬,೩೪೯ ವಂತಿಕೆ ಪಾವತಿಸಿರುತ್ತಾರೆ.  ತಾಲೂಕಿನಲ್ಲಿ ೩೬ ಸಂಸ್ಥೆಗಳ ೩೫೨೧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಮಂಡಳಿಗೆ ರೂ. ೨,೧೨,೦೮೧ ಗಳನ್ನು ವಂತಿಕೆಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸಿರುತ್ತಾರೆ. ತಾಲೂಕಿನಲ್ಲಿ ಮಂಡಳಿಗೆ ವಂತಿಕೆ ಪಾವತಿಸುವ ಹಾಗು ಸುತ್ತಮುತ್ತಲಿನ ಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತರ ಉಪಯೋಗಕ್ಕೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನದ ಅವಶ್ಯಕತೆ ಇರುವುದನ್ನು ಮನಗಂಡು ೯.೫ ಕೋ. ರು. ಮೊತ್ತದಲ್ಲಿ ಸಮುದಾಯ ಭವನ ನಿರ್ಮಿಸಲು ದಿನಾಂಕ: ೦೪-೧೧-೨೦೨೨ ರಂದು ನಡೆದ ೯೪ನೇ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಟೆಂಡರ್ ಕರೆದು ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ಪಾಕೋಪಕರಣ ಹಾಗೂ ಪೀಠೋಪಕರಣಗಳ ಸೌಲಭ್ಯವನ್ನು ಒದಗಿಸಲು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೋರಲಾಗಿರುತ್ತದೆ, ಅದರಂತೆ ರು. ೯೪ ಲಕ್ಷ ಮೊತ್ತದಲ್ಲಿ ಖರೀದಿಸಿ ಪೂರೈಕೆ ಮಾಡಿರುತ್ತಾರೆ.