Thursday, June 23, 2022

ತಾಲೂಕು ಒಕ್ಕಲಿಗರ ಸಂಘ ಕೆಲವರ ವೈಯಕ್ತಿಕ ಹಿತಾಸಕ್ತಿಗೆ ಸೀಮಿತ : ಅಸಮಾಧಾನ

ಭದ್ರಾವತಿ ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಡೆಯಿತು. 

    ಭದ್ರಾವತಿ, ಜೂ. ೨೩:  ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಇನ್ನೂ ಸಂಘಟಿತರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ನಡೆಯಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಆಗ್ರಹಿಸಿದರು.
    ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ರಮೇಶ್, ನಾಗರಾಜ್ ದೊಡ್ಡಗೊಪ್ಪೇನಹಳ್ಳಿ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಒಕ್ಕಲಿಗರು ಸುಮಾರು ೩೫ ಸಾವಿರ ಜನಸಂಖ್ಯೆ ಹೊಂದಿದ್ದರೂ ಸಹ ಇದುವರೆಗೂ ಸರಿಯಾಗಿ ಸಂಘಟಿತರಾಗಲು ಸಾಧ್ಯವಾಗಿಲ್ಲ. ರಾಜ್ಯದೆಲ್ಲೆಡೆ ಒಕ್ಕಲಿಗರು ಪ್ರಬಲರಾಗಿದ್ದು, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಂಡಿದ್ದಾರೆ.  ಆದರೆ ಕ್ಷೇತ್ರದಲ್ಲಿ ಮಾತ್ರ ಒಕ್ಕಲಿಗರು ಸಂಘಟಿತರಾಗದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
    ತಾಲೂಕು ಒಕ್ಕಲಿಗರ ಸಂಘ ಕೆಲವರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿದ್ದು, ಕುಲ ಬಾಂಧವರ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಇದುವರೆಗೂ ಒಂದು ಸುಸಜ್ಜಿತವಾದ ಸಮುದಾಯ ಭವನ ಹೊಂದಲು ಸಾಧ್ಯವಾಗಿಲ್ಲ. ಅಲ್ಲದೆ ಕಡು ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅನುದಾನ, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ತಾಲೂಕು ಒಕ್ಕಲಿಗರ ಸಂಘ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಒಕ್ಕಲಿಗರು ಎಂದರೆ ಸಮಾಜದ ಎಲ್ಲರೊಂದಿಗೂ ಬೆರೆತು ಸಾಗುವವರು ಎಂಬುದನ್ನು ಅರಿತುಕೊಳ್ಳಬೇಕು. ಇತರೆ ಸಮುದಾಯವನ್ನು ತಿರಸ್ಕರಿಸಿ ಮುಂದೆ ಸಾಗುವುದು ಅಸಾಧ್ಯ. ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಸರ್ಕಾರದ ಅನುದಾನ, ಸೌಲಭ್ಯಗಳನ್ನು ತಿರಸ್ಕರಿಸುವುದು ಸರಿಯಲ್ಲ. ಒಕ್ಕಲಿಗ ಸಮುದಾಯದಲ್ಲೂ ಕಡು ಹಾಗು ಮಧ್ಯಮ ವರ್ಗದವರಿದ್ದಾರೆ. ಅವರನ್ನು ಸಹ ಅರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕುಲಬಾಂಧವರು ಎಚ್ಚೆತ್ತುಕೊಂಡು ಸಂಘಟಿತರಾಗಬೇಕೆಂದರು.
    ಸೋಮಶೇಖರ್ ಸಂಕ್ಲಿಪುರ, ಶಿವಣ್ಣ ಕಲ್ಲಹಳ್ಳಿ, ಸಂದೇಶ್‌ಗೌಡ, ಸುಹಾಸ್ ಗೌಡ, ಮುಳ್ಕೆರೆ ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಇತಿಹಾಸದ ವೈಭವ ಮರಳಿ ಪಡೆಯಲು ಸಹಕರಿಸಿ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ನೇಮಕಗೊಂಡ ಬಿ.ಎಲ್. ಚಂದ್ವಾನಿ ಅವರಿಗೆ ಸುರಜಿತ್ ಮಿಶ್ರ ಅಧಿಕಾರ ಹಸ್ತಾಂತರಿಸಿದರು.
    ಭದ್ರಾವತಿ, ಜೂ. ೨೩ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಇತಿಹಾಸದ ವೈಭವನ ಮರಳಿ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಶಕ್ತಿ ಮೀರಿ ಶ್ರಮಿಸುವ ಅಗತ್ಯವಿದ್ದು, ಎಲ್ಲರೂ ಸಹಕಾರ ನೀಡುವಂತೆ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮನವಿ ಮಾಡಿದರು.
    ಅವರು ಗುರುವಾರ ಕಾರ್ಖಾನೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪ್ರಾಯೋಗಿಕ ಮತ್ತು ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುವ ಆಶಾವಾದದ ವ್ಯಕ್ತಿಯಾಗಿದ್ದು, ಪ್ರಸ್ತುತ ಕಾರ್ಖಾನೆ ಎದುರಿಸುತ್ತಿರುವ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಹೊಂದಿದ್ದೇನೆ. ಕಾರ್ಖಾನೆಯ ಸಾಮರ್ಥ್ಯ, ಅದರ ಬೃಹತ್ ಉತ್ಪನ್ನ ಮಿಶ್ರಣ, ಸಮರ್ಥ ಮಾನವ ಸಂಪನ್ಮೂಲ, ಗುಣಮಟ್ಟದ ಉತ್ಪನ್ನಗಳನ್ನು ಬಳಸಿಕೊಂಡು ಪ್ರಗತಿ ಹೊಂದಬೇಕಾಗಿದೆ.  ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಕಾರ್ಖಾನೆಯನ್ನು ಅದರ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.  
. ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ  ಅವರಿಂದ ಅಧಿಕಾರ ಸ್ವೀಕರಿಸಿದರು. ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ 
    ಭದ್ರಾವತಿ, ಜೂ. ೨೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ ನೇಮಕಗೊಂಡಿದ್ದಾರೆ.
    ಬಿ.ಎಲ್ ಚಂದ್ವಾನಿಯವರು ಮಾ.೩೦, ೧೯೬೭ರಲ್ಲಿ ಭಿಲಾಯಿ ಸಮೀಪದ ಕುಟೇಲಭತದಲ್ಲಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣವನ್ನು ಕಮ್ಹಾರಿಯಾದ ಸರ್ಕಾರಿ ಶಾಲೆ ಮತ್ತು ದುರ್ಗಿನ ಸರ್ಕಾರಿ ವಿವಿಧೋದ್ದೇಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ೧೯೮೮ರಲ್ಲಿ ಭೋಪಾಲ್ ಮೌಲಾನಾ ಆಜಾದ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ. (ಮೆಕ್ಯಾನಿಕಲ್) ಪದವಿಪಡೆದುಕೊಂಡಿದ್ದಾರೆ.
    ಚಂದ್ವಾನಿಯವರು ಆರಂಭದಲ್ಲಿ ಭಿಲಾಯ್ ಸ್ಟೀಲ್ ಪ್ಲಾಂಟ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿ/ ಗ್ರಾಜ್ಯುಯೇಟ್ ಇಂಜಿನಿಯರ್ ಹುದ್ದೆಗೆ ೧೯೮೯ರಲ್ಲಿ ಸೇರಿದ್ದು, ೨೦೧೮ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಮುಂಬಡ್ತಿ ಹೊಂದಿದರು. ಇವರು ಭಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಕೋಕ್ ಓವನ್, ಸ್ಟೀಲ್ ಮೇಕಿಂಗ್ ಶಾಪ್, ಮೈನ್ಸ್, ಬ್ಲಾಸ್ಟ್ ಫರ್ನೇಸ್‌ನ (ಮೆಕ್ಯಾನಿಕಲ್) ವಿಭಾಗ ಮತ್ತು ಅದಿರು ನಿರ್ವಹಣೆ ಸ್ಥಾವರದಲ್ಲಿ ಕೆಲಸ ಮಾಡಿದ ಹೆಚ್ಚಿನ ಅನುಭವ ಹೊಂದಿದ್ದಾರೆ. ಅಲ್ಲದೆ ೨೦೦೫ರಲ್ಲಿ ಇಂಗ್ಲೆಂಡ್‌ನಲ್ಲಿ ವಿದೇಶಿ ತರಬೇತಿ ಪಡೆದುಕೊಂಡಿದ್ದಾರೆ.

ಕೋಟ್ಪಾ ಕಾಯ್ದೆಯಡಿ ದಾಳಿ : ೨,೧೦೦ ರು. ದಂಡ ವಸೂಲಾತಿ

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
    ಭದ್ರಾವತಿ, ಜೂ. ೨೩ : ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
  ಉಜ್ಜನಿಪುರ ಮತ್ತು ಕಾಗದನಗರದ ಹಲವೆಡೆ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು ೨,೧೦೦ ರೂ  ದಂಡ ವಿಧಿಸಲಾಯಿತು. ಅಲ್ಲದೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ವಿ ಅಶೋಕ್, ಎಚ್‌ಐಓ ಆನಂದಮೂರ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಶಿವಮೊಗ್ಗ ಜಿಲ್ಲಾ  ತಂಬಾಕು ನಿಯಂತ್ರಣ ಕೋಶದ ರವಿರಾಜ್, ಪೇಪರ್ ಟೌನ್  ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ್ ಹಾಗೂ ನಗರ ಆರೋಗ್ಯ ಕೇಂದ್ರದ ಮನೋಹರ್, ಚೇತನ್ ಪಾಲ್ಗೊಂಡಿದ್ದರು.



೭೦ರ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿ : ಹೋರಾಟಕ್ಕೆ ಸ್ಪಂದನೆ

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೃತಜ್ಞತೆ

೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ಭದ್ರಾವತಿ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ    
    ಭದ್ರಾವತಿ, ಜೂ. ೨೩ : ಅಂತರ್ಜಲ ಹೆಚ್ಚಿಸಿ ದನಗಾಹಿಗಳಿಗೆ, ಪ್ರಾಣಿಪಕ್ಷಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು ೭೦ ಕೆರೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಕ್ಕೆ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
    ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೇದಿಕೆ ವತಿಯಿಂದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹೋರಾಟಕ್ಕೆ ಇದೀಗ ಪ್ರತಿಫಲ ಲಭಿಸುತ್ತಿದೆ. ಸುಮಾರು ೭೦ ಕೆರೆಗಳ  ಬೌಂಡರಿ ನಿಗದಿಪಡಿಸಲು ಆದೇಶವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.  ೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ವೇದಿಕೆ ಅಧ್ಯಕ್ಷ ಆರ್. ವೇಣುಗೋಪಾಲ್ ಅವರನ್ನು ಅಭಿನಂದಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ಅನಿಲ್‌ರಾಜ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಎನ್. ದೇವೇಂದ್ರಪ್ಪ, ಪರ್ಯಾವೇಕ್ಷಕ ಎ.ಎಲ್ ನಟರಾಜ್, ಸರ್ವೇಯರ್ ಎಚ್.ಎಲ್ ಮಂಜಾನಾಯ್ಕ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗರಾಜಪುರೆ, ಕಂದಾಯ ಅಧಿಕಾರಿ ರಾಜ್‌ಕುಮಾರ್, ರಾಜ್ಯಸ್ವ ನಿರೀಕ್ಷಕ ಆರ್. ಚೇತನ್, ಸಿಬ್ಬಂದಿ ವರ್ಗದವರಾದ ದೊಡ್ಡಯ್ಯ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ದೇವರಾಜ್ ಹಾಗು ಸಿಬ್ಬಂದಿ ವರ್ಗದವರಿಗೆ ಆರ್. ವೇಣುಗೋಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.