ನಗರದ ರೈಲ್ವೆ ನಿಲ್ದಾಣ ಬಳಿ ಸರ್‌ಎಂವಿ ಪ್ರತಿಮೆ ಅನಾವರಣ
ಭದ್ರಾವತಿ, ಆ. ೬: ವೆಂಕಿಪುರ, ಬೆಂಕಿಪುರ ಎಂಬ ಹೆಸರಿನಿಂದ ಕರೆಲ್ಪಡುತ್ತಿದ್ದ ಭದ್ರಾವತಿ ಇಂದು ನಗರವಾಗಿ ಗುರುತಿಸಿಕೊಳ್ಳಲು ಭಾರತರತ್ನ, ಸರ್.ಎಂ ವಿಶ್ವೇಶ್ವರಯ್ಯ ಕಾರಣಕರ್ತರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಗುರುವಾರ ನಗರದ ರೈಲ್ವೆ ನಿಲ್ದಾಣದ ಬಿ.ಎಚ್ ರಸ್ತೆಗೆ ಹೊಂದಿ ಕೊಂಡಿರುವ ದ್ವಾರಬಾಗಿಲಿನಲ್ಲಿ ನಿರ್ಮಿಸಲಾಗಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ನಗರದಲ್ಲಿ ವಿಶ್ವೇಶ್ವರಯ್ಯನವರು ವಿಐಎಸ್‌ಎಲ್ ಮತ್ತು ಎಂಪಿಎಂ ಈ ಎರಡು ಕಾರ್ಖಾನೆಗಳನ್ನು ಸ್ಥಾಪಿಸದಿದ್ದಲ್ಲಿ ಭದ್ರಾವತಿ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿರಲಿಲ್ಲ. ಎರಡು ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಸಾವಿರಾರು ಕುಟುಂಬಗಳು ನೆಲೆಕಂಡುಕೊಳ್ಳಲು ಸಾಧ್ಯವಾಗಿದೆ. ನಗರದ ಅನ್ನದಾತರಾಗಿರುವ ವಿಶ್ವೇಶ್ವರಯ್ಯನವರ ಪ್ರತಿಮೆ ಉದ್ಘಾಟನೆಗೊಳಿಸಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ ಮಾತನಾಡಿ, ವಿಶ್ವೇಶ್ವರಯ್ಯನವರು ಕೇವಲ ಭಾರತಕ್ಕೆ ಮಾತ್ರವಲ್ಲ ಜಗತ್ತಿನಲ್ಲಿ ಅತಿಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರಲ್ಲಿನ ಬುದ್ಧಿಶಕ್ತಿ, ಕ್ರಿಯಾಶೀಲತೆ, ಪ್ರಾಮಾಣಿಕಗಳಿಗೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಯುವ ಮುಖಂಡ ಜಿ.ಆರ್ ಪ್ರವೀಣ್‌ಪಟೇಲ್ ಮಾತನಾಡಿ, ವಿಶ್ವೇಶ್ವರಯ್ಯನವರನ್ನು ನಗರದ ಅನ್ನದಾತ ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿಯೇ ಹಲವಾರು ಕಾರ್ಖಾನೆಗಳು, ಜಲಾಶಯಗಳನ್ನು ನಿರ್ಮಾಣಮಾಡುವ ಜೊತೆಗೆ ತಮ್ಮ ೧೦೨ ವರ್ಷದ ಬದುಕಿನಲ್ಲಿ ಸಾರ್ಥಕತೆ ಕಂಡು ಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿಯನ್ನು ಪ್ರತಿ ಕ್ಷಣ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ರೈಲ್ವೆ ನಿಲ್ದಾಣದ ಬಿ.ಎಚ್ ರಸ್ತೆಗೆ ಹೊಂದಿ ಕೊಂಡಿರುವ ದ್ವಾರಬಾಗಿಲಿನಲ್ಲಿ ನಿರ್ಮಿಸಲಾಗಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಅನಾವರಣಗೊಳಿಸಿ ಮಾತನಾಡಿದರು.
ಪ್ರತಿಮೆ ನಿರ್ಮಾಣದ ರೂವಾರಿ ಎನ್. ವಿಶ್ವನಾಥರಾವ್ ಮಾತನಾಡಿ, ಹಲವಾರು ಕಾರಣಗಳಿಂದಾಗಿ ಸುಮಾರು ೨ ವರ್ಷಗಳಿಂದ ಪ್ರತಿಮೆ ಉದ್ಘಾಟನೆಯಾಗಲಿಲ್ಲ. ಇದೀಗ ಉದ್ಘಾಟನೆಗೊಂಡಿರುವುದು ತುಂಬಾ ಸಂತಸವನ್ನುಂಟುಮಾಡಿದೆ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಪೌರಾಯುಕ್ತ ಮನೋಹರ್, ಶಿಲ್ಪಿ ಎಸ್.ಜಿ ಶಂಕರಮೂರ್ತಿ ಮುಖಂಡರಾದ ವಿ. ಕದಿರೇಶ್, ಬಾಲಕೃಷ್ಣ, ಸುಬ್ರಮಣಿ, ಗಣೇಶ್‌ರಾವ್, ಹೇಮಾವತಿ ವಿಶ್ವನಾಥ್, ಶೋಭಾ, ಅನ್ನಪೂರ್ಣಸಾವಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.