Sunday, November 28, 2021

ಈ ಬಾರಿ ಪರಿಷತ್ ಅಭ್ಯರ್ಥಿ ಡಿ.ಎಸ್ ಅರುಣ್ ಗೆಲುವು ಖಚಿತ : ಬಿ.ವೈ ರಾಘವೇಂದ್ರ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಶ್ರೀ ವರದರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ನ. ೨೮: ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದ್ದು, ಭದ್ರಾವತಿ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಶಾಸಕರುಗಳಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುಬಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ವರದರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಿಜೆಪಿ ಪಕ್ಷಕ್ಕೆ ಎಲ್ಲೆಡೆ ಜನಬೆಂಬಲವಿದ್ದು, ಕಳೆದ ವಿಧಾನಪರಿಷತ್ ಚುನಾವಣೆ ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ವಿಧಾನಸಭೆವರೆಗೂ ಪಕ್ಷ ಬಲಿಷ್ಠವಾಗಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಯಾಗಿರುವ ಡಿ.ಎಸ್ ಅರುಣ್‌ರವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
    ಅಭ್ಯರ್ಥಿ ಡಿ.ಎಸ್ ಅರುಣ್ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಎದುರಾಗಿರುವ ವಿಧಾನಪರಿಷತ್ ಚುನಾವಣೆಯಲ್ಲಿ ೨೫ ಸ್ಥಾನಗಳ ಪೈಕಿ ಈಗಾಗಲೇ ೧೫ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಘೋಷಿಸಿದ್ದಾರೆ. ಅಲ್ಲದೆ ನನ್ನ ಪರವಾಗಿ ನಾನೇ ಅಭ್ಯರ್ಥಿ ಎಂದು ಮತಯಾಚನೆ ನಡೆಸುತ್ತಿದ್ದಾರೆ. ಇದರಿಂದಾಗಿ ಈ ಚುನಾವಣೆ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದು ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಂದು ಕೇವಲ ಬಿಜೆಪಿ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಎಂಬ ಒಂದೇ ಆಲೋಚನೆಯೊಂದಿಗೆ ನನಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಪ್ರಮುಖರಾದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್,  ಪ್ರಮುಖರಾದ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪರಿಸರ ಶಿವರಾಮ್ ಆತ್ಮಕಥೆ ‘ಮುಖ ಮುಖಗಳು ಮುಖವಾಡಗಳಂತಿವೆ’ ಪುಸ್ತಕ ಬಿಡುಗಡೆ


ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ. ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿದರು.  
    ಭದ್ರಾವತಿ, ನ. ೨೮: ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ.
    ಪರಿಸರ ರಾಜ್ಯ ಪ್ರಶಸ್ತಿ ಮತ್ತು ಬಯಲಾಟ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪರಿಸರ ಶಿವರಾಮ್ ಉಕ್ಕಿನ ನಗರದ ಜನತೆಗೆ ಬಹುತೇಕ ಚಿರಪರಿಚಿತರಾಗಿದ್ದಾರೆ. ಇವರ ಆತ್ಮಕಥೆಯನ್ನು ಭದ್ರಾವತಿ ರಾಮಾಚಾರಿಯವರು ಅದ್ಭುತವಾಗಿ ಹೊರತಂದಿದ್ದು, ಪರಿಸರ ಶಿವರಾಮ್ ಅವರ ಜೀವನದ ನೈಜತೆಯನ್ನು ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
    ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಪುಸ್ತುಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿಗೆ ಮೊ: ೮೮೬೧೪೯೫೬೧೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.


ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿ.ಎಸ್ ನಾರಾಯಣಪ್ಪ

ಭದ್ರಾವತಿ ಭೂತನಗುಡಿ ಓ.ಎಸ್.ಎಂ ರಸ್ತೆಯಲ್ಲಿರುವ ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ಮತ್ತು ಉಪಾಧ್ಯಕ್ಷರಾಗಿ ಎನ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ನ. ೨೮: ನಗರದ ಭೂತನಗುಡಿ ಓ.ಎಸ್.ಎಂ ರಸ್ತೆಯಲ್ಲಿರುವ ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ಆಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಎನ್. ಮಂಜುನಾಥ್ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಡಿ. ಮಂಜಪ್ಪ ಕರ್ತವ್ಯ ನಿರ್ವಹಿಸಿದರು. ನಿರ್ದೇಶಕರಾದ ಕೆ.ಎಸ್ ಕೃಷ್ಣಪ್ಪ, ಕೆ. ಮಂಜಪ್ಪ, ಯು. ಸಂದಿಲ್‌ಕುಮಾರ್, ಕೃಷ್ಣಾನಂದ ರಾಯ್ಕರ್, ಆರ್.ಪಿ ವೆಂಕಟೇಶ್, ಜೆ.ಎಂ ರಾಜ, ಬಿ. ಮಂಜುಳಾ, ಕೆ. ವಸಂತಮ್ಮ, ಹೇಮಾವತಿ, ಶಾರದಬಾಯಿ ಮತ್ತು ಬಿ.ಎಚ್ ಮಂಜುನಾಥ್ ಉಪಸ್ಥಿತರಿದ್ದರು.