Tuesday, June 6, 2023

ಎರಡು ಪ್ರಕರಣಗಳಲ್ಲಿ ೩ ಆರೋಪಿಗಳ ಸೆರೆ : ಲಕ್ಷಾಂತರ ರು. ಮೌಲ್ಯದ ಬೆಳ್ಳಿ, ಚಿನ್ನಾಭರಣ ವಶ

    ಭದ್ರಾವತಿ, ಜೂ. ೬ : ನ್ಯೂಟೌನ್ ಠಾಣೆ ಪೊಲೀಸರು ೩ ಜನ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರು. ಮೌಲ್ಯದ ಬೆಳ್ಳಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
    ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಆರೋಪಿಗಳಾದ ಹೊಸದುರ್ಗ ತಾಲೂಕಿನ ಗಂಜಿಗೆರೆ ಗ್ರಾಮದ ಲೋಕೇಶ್(೫೦) ಮತ್ತು ರಂಗನಾಥ್(೪೫) ಮತ್ತು ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ ಗ್ರಾಮದ ವಿಜಯ್(೩೩) ಬಂಧಿಸಲಾಗಿದೆ. ಒಟ್ಟು ೩೯ ಗ್ರಾಂ. ತೂಕದ ಆಭರಣಗಳನ್ನು ಮತ್ತು ೧೭ ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಹಾಗು ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಶರಣಪ್ಪ ನೇತೃತ್ವದಲ್ಲಿ ಎಎಸ್‌ಐಗಳಾದ ಎಚ್. ವೆಂಕಟೇಶ್, ಟಿ.ಪಿ ಮಂಜಪ್ಪ, ಎಎಸ್‌ಐ ಠಾಣಾ ಸಿಬ್ಬಂದಿಗಳಾದ ರಂಗನಾಥ್, ತೀರ್ಥಲಿಂಗಪ್ಪ, ಪ್ರವೀಣಕುಮಾರ್, ನಗರ ವೃತ್ತ ಕಛೇರಿ ಸಿಬ್ಬಂದಿಗಳಾದ ಸುನೀಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ

ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯತಿ ಅಮೃತ ಸರೋವರ ಕಾಮಗಾರಿ ಬಳಸೋಕೆರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
    ಭದ್ರಾವತಿ, ಜೂ. ೬ : ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯತಿ ಅಮೃತ ಸರೋವರ ಕಾಮಗಾರಿ ಬಳಸೋಕೆರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಮತ್ತು ಇ-ಶ್ರಮ್ ನೋಂದಾವಣಿ ಅಭಿಯಾನ ಹಾಗು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಸಸಿಗಳನ್ನು ನೆಡುವ ಜೊತೆಗೆ ಉದ್ಯೋಗ ಖಾತ್ರಿ ಚೀಟಿಗಳನ್ನು ಪ್ರದರ್ಶಿಸಿ ಕೂಲಿ ಕಾರ್ಮಿಕರು ಸಂಭ್ರಮಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಯೋಜನಾ ನಿರ್ದೇಶಕಿ ನಂದಿನಿ, ಉಪೇಂದ್ರ ಬಾಬು, ಚೇತನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಪ್ರಾರಂಭ ಕುರಿತು ಚರ್ಚಿಸಲು ಸಭೆ ನಿಗದಿಗೆ ಮುಖ್ಯಮಂತ್ರಿಗೆ ಮನವಿ

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೬: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರದ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.  
    ಖಾಸಗಿ ಉದ್ಯಮಿಗಳು ಕಾರ್ಖಾನೆಯನ್ನು ಮುನ್ನಡೆಸಲು ಇಚ್ಚಿಸಿರುವುದರಿಂದ ಹಾಗೂ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದರಿಂದ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.