ಸೆ.೨೬ರಂದು ನಗರಸಭೆ ಆವರಣದಲ್ಲಿ ಚಾಲನೆ
ಡಿ.ಸಿ ಮಾಯಣ್ಣ
* ಅನಂತಕುಮಾರ್
ಭದ್ರಾವತಿ, ಸೆ. ೨೫: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಅವರಿಗೆ ಒಲಿದು ಬಂದಿದೆ.
ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದ ೮೮ರ ಹರೆಯದ ಡಿ.ಸಿ ಮಾಯಣ್ಣ ಅವರು ಸೆ.೨೬ರಂದು ನಗರಸಭೆ ಆವರಣದಲ್ಲಿ ನಾಡಹಬ್ಬ ದಸರಾ ಆಚರಣೆಗೆ ಚಾಲನೆ ನೀಡಲಿದ್ದಾರೆ.
ವಿಐಎಸ್‌ಎಲ್ ಕಾರ್ಮಿಕನಾಗಿ ಹೋರಾಟದ ಬದುಕು:
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಚಿಕ್ಕಣ್ಣ ಮತ್ತು ನಂಜಮ್ಮ ದಂಪತಿಯ ಹಿರಿಯ ಮಗನಾಗಿ ೨೦ ಜೂನ್ ೧೯೩೪ರಲ್ಲಿ ಜನಿಸಿದ ಮಾಯಣ್ಣ ಅವರು ತಮ್ಮ ಪ್ರಾಥಮಿಕ ಹಾಗು ಪ್ರೌಢಶಿಕ್ಷಣವನ್ನು ತಿಪಟೂರಿನಲ್ಲಿ ಪೂರೈಸಿದರು. ಕಡುಬಡತನದ ಹಿನ್ನಲೆಯಲ್ಲಿ ತಮ್ಮ ಪದವಿ ಶಿಕ್ಷಣ ಮೊಟಕುಗೊಳಿಸಿ ಭದ್ರಾವತಿಗೆ ಆಗಮಿಸಿ ೧೯೫೭ರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರಾಗಿ ಸೇರ್ಪಡೆಗೊಳ್ಳುವ ಮೂಲಕ ಕಾರ್ಮಿಕರಾಗಿ ವೃತ್ತಿ ಜೀವನ ಆರಂಭಿಸಿದರು.
ಮಾಯಣ್ಣನವರು ಪ್ರೌಢ ಶಿಕ್ಷಣ ವ್ಯಾಸಂಗ ನಡೆಸುತ್ತಿದ್ದ ಸಂದರ್ಭದಲ್ಲಿ ಟಿ.ಎಚ್ ವೆಂಕಟಪ್ಪರವರು ಬೋಧಿಸುತ್ತಿದ್ದ ಚರಿತ್ರೆಯ ಪಾಠಗಳಿಂದ ಪ್ರಭಾವಿತರಾಗಿ ಕಮ್ಯೂನಿಸಂ ಸಿದ್ದಾಂತದ ಜನಕರಾದ ಕಾರ್ಲ್ ಮಾಕ್ಸ್, ಫ್ರೆಢರಿಕ್, ಏಂಗೆಲ್ಸ್, ಲೆನಿನ್, ಸ್ಟಾಲಿನ್‌ರವರ ಬರವಣಿಗೆಗಳಿಂದ ಪ್ರೇರೇಪಿತರಾಗಿದ್ದರು. ಈ ನಡುವೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಮ್ಯೂನಿಸಂ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿದ್ದ ಕಾರ್ಮಿಕ ಹೋರಾಟಗಾರರಾದ ಎಚ್.ಎನ್ ಚಂದ್ರಶೇಖರ್, ವೆಂಕಟಪ್ಪ, ಹನುಮಂತರಾವ್ ಸಲಗರ್, ಅಂಕಪ್ಪ, ಬಿ.ಎನ್ ಚಂದ್ರಶೇಖರ್, ಮುನಿಸ್ವಾಮಿ ಹಾಗು ನಾಗರಾಜ್ ಸೇರಿದಂತೆ ಇನ್ನಿತರರ ಒಡನಾಟದಿಂದ ಕಮ್ಯೂನಿಸ್ಟ್ ಸಿದ್ದಾಂತಗಳು ಸಾಕಾರಗೊಳ್ಳಲು ಕಾರಣವಾದವು.
ಹೋರಾಟ ಎಂದರೆ ಡಿ.ಸಿ ಮಾಯಣ್ಣ :
ಆರಂಭದಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಜೊತೆಸೇರಿ ಕಾರ್ಮಿಕರ ಹೋರಾಟಗಳಿಗೆ ಧ್ವನಿಯಾದವರು ಮಾಯಣ್ಣ ಎಂದರೆ ತಪ್ಪಾಗಲಾರದು. ಕಾರ್ಮಿಕರ ತುಟಿಭತ್ಯೆಗಾಗಿ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಿ ಈ ಪ್ರಕರಣ ೧೯೬೫ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಸುಮಾರು ೬ ವರ್ಷಗಳ ವಿಚಾರಣೆ ನಡೆದು ಅಂತಿಮವಾಗಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಈ ನಡುವೆ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ೧೯೭೨ರಲ್ಲಿ ಕಾರ್ಖಾನೆ ಲಾಕ್‌ಔಟ್‌ಗೊಳಿಸಲು ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಮಾಯಣ್ಣನವರು ವಾರಗಟ್ಟಲೆ ಪೊಲೀಸರ ವಶದಲ್ಲಿರಬೇಕಾಯಿತು.
ಮಾಯಣ್ಣನವರು ಕಾರ್ಮಿಕ ಸಂಘದಿಂದ ಹೊರಬಂದು ೧೯೭೮ರಲ್ಲಿ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಸಂಘಟಿಸುವ ಮೂಲಕ ಅದರ ಅಧ್ಯಕ್ಷರಾಗಿ ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು.
ಮಾಯಣ್ಣನವರು ಕೇವಲ ವಿಐಎಸ್‌ಎಲ್ ಕಾರ್ಮಿಕರ ಪರವಾದ ಹೋರಾಟಗಳಲ್ಲದೆ ಕುವೆಂಪು ವಿಶ್ವ ವಿದ್ಯಾನಿಲಯದ ಗುತ್ತಿಗೆ ಕಾರ್ಮಿಕರು, ಅಕ್ಷರ ದಾಸೋಹ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಹಮಾಲಿ ಮತ್ತು ಬೀಡಿ ಕಾರ್ಮಿಕರನ್ನು ಸಂಘಟಿಸಿ ಅವರ ಬೇಡಿಕೆಗಳು ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದಾರೆ. ಎಂಪಿಎಂ ನಾನ್ ಪಿಎಫ್ ಗುತ್ತಿಗೆ ಕಾರ್ಮಿಕರ ವೇತನ ತಾರತಮ್ಯ ನಿವಾರಿಸಲು ೨೦೦೮ರಲ್ಲಿ ಕಾರ್ಖಾನೆ ಮುಂಭಾಗ ಸುಮಾರು ೧ ತಿಂಗಳ ನಿರಂತರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದರು. ೨೦೧೩ರಲ್ಲಿ ವಿಐಎಸ್‌ಎಲ್ ಖಾಸಗಿ ಸಹಭಾಗಿತ್ವದ ವಿರುದ್ಧ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಧರಣಿ ನಡೆಸಿದರು. ಸರ್ಕಾರಗಳ ಜನವಿರೋಧಿ ನೀತಿ, ಬೆಲೆ ಏರಿಕೆ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಮೂಲಕ ಪ್ರಗತಿಪರ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಸ್ಪರ್ಧೆ :
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದ ಖುದ್ದೂಸ್ ಅನ್ವರ್ ೨ ಬಾರಿ ಹಾಗು ಎಂ.ಜೆ ಅಪ್ಪಾಜಿ ೩ ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ಮಾಯಣ್ಣನವರು ಸಹ ೧೯೮೯ರಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಜಕೀಯದಿಂದ ದೂರ ಉಳಿದು ಹೋರಾಟಗಳಲ್ಲಿ ಮತ್ತಷ್ಟು ಸಕ್ರಿಯವಾಗ ತೊಡಗಿದರು. ಈಗಲೂ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗೌರವಾಧ್ಯಕ್ಷರಾಗಿದ್ದು, ಕಾರ್ಮಿಕರ ಪರವಾದ ಧ್ವನಿಯಾಗಿ ಉಳಿದುಕೊಂಡಿದ್ದಾರೆ.
ಮಾಯಣ್ಣನವರು ಇಬ್ಬರು ಹೆಣ್ಣು ಹಾಗು ಮೂವರು ಗಂಡು ಮಕ್ಕಳನ್ನು ಹೊಂದಿದ್ದಾರೆ. ೮೮ರ ಹರೆಯದಲ್ಲೂ ಲವಲವಿಕೆಯಿಂದ ಇದ್ದು, ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ.