Friday, January 5, 2024

ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಆಹ್ವಾನ

ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ, ಆಹ್ವಾನ ಪತ್ರಿಕೆ ನೀಡಿದ ಬಿಜೆಪಿ ಕಾರ್ಯಕರ್ತರು

ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಭದ್ರಾವತಿ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಭದ್ರಾವತಿ: ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿದ ಕಾರ್ಯಕರ್ತರು ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಹತ್ವ ವಿವರಿಸಿ ಆಯೋಧ್ಯಾಪತಿ ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ ಹಾಗು ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನ್ಯಾಯವಾದಿ ವಿನಾಯಕ್ ಅವರಿಗೂ ಸಹ ಆಹ್ವಾನ ಪತ್ರಿಕೆ ನೀಡಿ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
    ಬಿಜೆಪಿ ಕಾರ್ಯಕರ್ತರಾದ ರಾಜಶೇಖರ್ ಉಪ್ಪಾರ, ಸುಬ್ರಮಣ್ಯ ಸೇರಿದಂತೆ ಇನ್ನಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ : ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಹಿಂದೂಪರ ಸಂಘಟನೆಗಳಿಂದ ಬಿಡುಗಡೆಗೆ ಆಗ್ರಹ : ಮನವಿ

ಕರಸೇವಕರ ಬಂಧನ ಖಂಡಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ಭದ್ರಾವತಿ ಮಾಧವಚಾರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ನಂತರ ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ಕರಸೇವಕರ ಬಂಧನ ಖಂಡಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಮಾಧವಚಾರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
    ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ನಾನು ರಾಮಭಕ್ತ, ನಾನು ಕರಸೇವಕ ತಾಕತ್ತು ಇದ್ದರೆ ಬಂಧಿಸಿ ಎಂದು ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ `ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ, ರಾಮನ ಭಕ್ತರು ನಾವೆಲ್ಲ. ಟಿಪ್ಪು ಸಂತತಿ ಬೇಕಿಲ್ಲ. ಹನುಮನ ಸಂತತಿ ನಾವೆಲ್ಲ. ಬಾಬರ್ ಸಂತತಿ ಬೇಕಿಲ್ಲ' ಎಂಬ ಘೋಷಣೆಗಳನ್ನು ಹಾಕುವ ಮೂಲಕ ಬಂಧಿಸಲಾಗಿರುವ ಕರಸೇವಕರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ದತ್ತ ಮಾಲಾಧಾರಿಗಳ ಮೇಲೆ ಪೊಲೀಸ್ ತನಿಖೆ ಹಾಗು ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗಳನ್ನು ಖಂಡಿಸಿದರು. ನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಹಾ. ರಾಮಪ್ಪ, ಜಿ. ಶಿವರಾಜ್, ವಿ. ಕದಿರೇಶ್, ಎನ್. ವಿಶ್ವನಾಥರಾವ್, ಬಿ.ಕೆ ಶ್ರೀನಾಥ್, ಕೆ.ಎನ್ ಶ್ರೀಹರ್ಷ, ಎಂ.ಎಸ್ ಸುರೇಶಪ್ಪ, ಚನ್ನೇಶ್, ರಾಜಶೇಖರ ಉಪ್ಪಾರ, ಶಿವಕುಮಾರ್, ರಾಘವನ್ ವಡಿವೇಲು, ಚಂದ್ರಪ್ಪ, ರಾಮಲಿಂಗಯ್ಯ, ಎಂ. ಮಂಜುನಾಥ್, ಗೋಕುಲ್ ಕೃಷ್ಣ, ಎಂ. ಪ್ರಭಾಕರ್, ಕಾರಾನಾಗರಾಜ್, ಧನುಷ್ ಬೋಸ್ಲೆ, ಹೇಮಾವತಿ ವಿಶ್ವನಾಥ್, ಮಂಜುಳ, ಲತಾ, ಅನ್ನಪೂರ್ಣ, ರೇಖಾ ಪದ್ಮಾವತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜ.೬ರಂದು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಜ.೬ರಂದು ಬೆಳಿಗ್ಗೆ ೧೦ ಗಂಟೆಗೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ. ಬಸವರಾಜ್, ಜ್ಞಾನೇಶ್ವರಿ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷೆ ಟಿ.ಆರ್ ವಿನೋದಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಟ್ರಸ್ಟಿ ತಸ್ಮೈ ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.