ಶನಿವಾರ, ಸೆಪ್ಟೆಂಬರ್ 20, 2025

ಬಿಸಿಎಂ ಇಲಾಖೆ ನಿವೃತ್ತ ನೌಕರ ದುರ್ಗಾಭೋವಿ ನಿಧನ

ದುರ್ಗಾಭೋವಿ 
    ಭದ್ರಾವತಿ : ನಗರಸಭೆ ವ್ಯಾಪ್ತಿ ಹೊಸಮನೆ ಭೋವಿಕಾಲೋನಿ ನಿವಾಸಿ, ಬಿಸಿಎಂ ಇಲಾಖೆ ನಿವೃತ್ತ ನೌಕರ ದುರ್ಗಾಭೋವಿ(೬೪) ಶುಕ್ರವಾರ ರಾತ್ರಿ ನಿಧನರಾದರು. 
    ಇವರಿಗೆ ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಸಂಜೆ ಹೊಳೆಹೊನ್ನೂರು ರಸ್ತೆ, ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಭೋವಿ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ


ಭದ್ರಾವತಿ : ಸಿದ್ಧಾರೂಢ ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಸೆ.೨೧ರಿಂದ ಅ.೨ರವರೆಗೆ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 
ಸೆ.೨೨ರಂದು ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ ಹಾಗೂ ಸೆ.೩೦ರಿಂದ ಅ.೨ರವರೆಗೆ ಪ್ರತಿನಿತ್ಯ ಬೆಳಿಗ್ಗೆ ಶ್ರೀ ಚಂಡಿಕಾಹೋಮ, ಪ್ರತಿದಿನ ಸಂಜೆ ಅಮ್ಮನವರಿಗೆ ವಿಶೇಷ ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಶೃಂಗೇರಿ ಗುರುಗಳ ಆಶೀರ್ವಾದದೊಂದಿಗೆ ಏರ್ಪಡಿಸಲಾಗಿದೆ. 
ಭಕ್ತರು ಪ್ರತಿ ವರ್ಷದಂತೆ ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಧರ್ಮಾಧಿಕಾರಿ ಕೆ.ಆರ್. ಸುಬ್ಬರಾವ್ ವಿನಂತಿಸಿಕೊಂಡಿದ್ದಾರೆ.

ಎಚ್.ವಿ ಶಿವರುದ್ರಪ್ಪರಿಗೆ ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ

ಈ ಬಾರಿ ಭದ್ರಾವತಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿರುವ ನಗರದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅವರನ್ನು ನಾಡಹಬ್ಬ ದಸರಾ ಆಚರಣಾ ಸಮಿತಿ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ಭದ್ರಾವತಿ : ಈ ಬಾರಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿರುವ ನಗರದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅವರನ್ನು ನಾಡಹಬ್ಬ ದಸರಾ ಆಚರಣಾ ಸಮಿತಿ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ನಗರದ ಲೋಯರ್ ಹುತ್ತಾ ಸಹ್ಯಾದ್ರಿ ಬಡವಾವಣೆಯಲ್ಲಿರುವ ಎಚ್.ವಿ ಶಿವರುದ್ರಪ್ಪರವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸುವ ಮೂಲಕ ಆಹ್ವಾನ ಪತ್ರಿಕೆ ನೀಡಲಾಯಿತು. ಆಹ್ವಾನ ಸ್ವೀಕರಿಸಿದ ಶಿವರುದ್ರಪ್ಪ ಸಂತಸ ವ್ಯಕ್ತಪಡಿಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಾಡಹಬ್ಬ ದಸರಾ ಆಚರಣಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯೆ ಅನಿತಾ ಮಲ್ಲೇಶ್, ಲೆಕ್ಕಾಧಿಕಾರಿ ಗಿರಿರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರನ್ನು ಸಹ ನಾಡಹಬ್ಬ ದಸರಾ ಆಚರಣೆಗೆ ಆಹ್ವಾನಿಸಲಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. 

ರಾತ್ರಿ ವೇಳೆ ವೈದ್ಯರೊಬ್ಬರ ಮನೆಯ ಆವರಣಕ್ಕೆ ನುಗ್ಗಿದ್ದ ಮಂಕಿಕ್ಯಾಪ್ ಧರಿಸಿದ ಗುಂಪು

ಸಿದ್ದಾರೂಢನಗರದಲ್ಲಿ ಘಟನೆ, ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಸಿದ್ದರೂಢನಗರದ ಪ್ರಸಿದ್ದ ವೈದ್ಯ ಡಾ. ಅಶ್ವತ್ಥ್‌ನಾರಾಯಣರವರ ಕ್ಲಿನಿಕ್ ಒಳಗೊಂಡಿರುವ ನಿವಾಸದ ಕಾಂಪೌಂಡ್ ಒಳಗೆ ರಾತ್ರಿ ವೇಳೆ ಮಂಕಿಕ್ಯಾಪ್ ಧರಿಸಿರುವ ಗುಂಪು ನುಗ್ಗಿದ್ದು, ಕೆಲವು ಸಮಯಗಳ ನಂತರ ಹಿಂದಿರುಗಿದೆ. ಈ ವೇಳೆಗೆ ಈ ಮಾರ್ಗದಲ್ಲಿ ಬೀಟ್ ಪೊಲೀಸರು ಸಹ ಸಂಚರಿಸಿದ್ದು, ಆದರೆ ಈ ಗುಂಪಿನ ಬಗ್ಗೆ ಯಾವುದೇ ಮಾಹಿತಿ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ. 
    ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಮಾಹಿತಿ ತಿಳಿದ ಪೊಲೀಸರು ಡಾ. ಅಶ್ವಸ್ಥ್‌ನಾರಾಯಣರವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ೭-೮ ಜನರ ಗುಂಪು ಬಂದು ಹೋಗಿರುವುದು ತಿಳಿದು ಬಂದಿದೆ. ಆದರೆ ಈ ಗುಂಪಿನಿಂದ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಹಿನ್ನಲೆಯಲ್ಲಿ ಯಾರು ದೂರು ನೀಡಿಲ್ಲ. ಈ ಘಟನೆ ಕಳೆದ ೨ ದಿನಗಳ ಹಿಂದೆ ನಡೆದಿದೆ. ಆದರೆ ಈ ಘಟನೆ ಸಂಬಂಧ ಚೆಡ್ಡಿ ಗ್ಯಾಂಗ್ ಎಂದು ಸುಳ್ಳು ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಚಡ್ಡಿ ಗ್ಯಾಂಗ್ ಹಾಗು ಈ ಗುಂಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.  

ನಿವೃತ್ತ ಸರ್ಕಾರಿ ನೌಕರ ರಾಮು ನಿಧನ

ರಾಮು
    ಭದ್ರಾವತಿ : ನಗರದ ಹೊಸಮನೆ ನಿವಾಸಿ, ನಿವೃತ್ತ ಸರ್ಕಾರಿ ನೌಕರ, ಛಲವಾದಿ ಸಮಾಜದ ಹಿರಿಯರಾದ ರಾಮು(೮೬) ಶುಕ್ರವಾರ ರಾತ್ರಿ ನಿಧನ ಹೊಂದಿದರು.  
    ಪತ್ನಿ ದಮಯಂತಿ, ಬಿಜೆಪಿ ಮಂಡಲ ನಗರ ಉಪಾಧ್ಯಕ್ಷ, ಪುತ್ರ ಕೃಷ್ಣ ಛಲವಾದಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಶನಿವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು. 
ಇವರ ನಿಧನಕ್ಕೆ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ನಾಡಹಬ್ಬ ದಸರಾ ಆಚರಣೆಗೆ ಸೆ.೨೨ರಂದು ಹಿರಿಯ ಸಮಾಜ ಸೇವಕ ಎಚ್.ವಿ ಶಿವರುದ್ರಪ್ಪರವರಿಂದ ಚಾಲನೆ

ಎಚ್.ವಿ ಶಿವರುದ್ರಪ್ಪ 
    ಭದ್ರಾವತಿ : ಈ ಬಾರಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ನಗರದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಸೆ.೨೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. 
    ಜಿಲ್ಲೆಯಲ್ಲಿಯೇ ನಗರಸಭೆಯಿಂದ ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ವಿಶಿಷ್ಟವಾಗಿ, ವೈಭವಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಸಾಹಿತಿಗಳು, ಹೋರಾಟಗಾರರು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವವರನ್ನು ಗುರುತಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿದೆ.  ನಿವೃತ್ತ ಉಪನ್ಯಾಸಕ ದಿವಂಗತ ಕೆ.ಎಸ್ ಕುಮಾರಸ್ವಾಮಿ, ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್, ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಸೇರಿದಂತೆ ಸಮಾಜಕ್ಕೆ ತಮದೇ ಆದ ಕೊಡುಗೆಗಳನ್ನು ನೀಡಿರುವ ಇನ್ನೂ ಮುಂತಾದವರು ಇಲ್ಲಿನ ದಸರಾ ಆಚರಣೆಗೆ ಚಾಲನೆ ನೀಡಿರುವುದು ವಿಶೇಷವಾಗಿದೆ. ಈ ಬಾರಿ ನಗರದ ಲೋಯರ್ ಹುತ್ತಾ ಬಿ.ಎಚ್ ರಸ್ತೆ, ಸಹ್ಯಾದ್ರಿ ಬಡಾವಣೆ ನಿವಾಸಿ, ಸಮಾಜ ಸೇವಕ ಎಚ್.ವಿ ಶಿವರುದ್ರಪ್ಪರವರು ದಸರಾ ಆಚರಣೆಗೆ ಚಾಲನೆಗೆ ನೀಡುತ್ತಿದ್ದಾರೆ. 
    ಎಚ್.ವಿ ಶಿವರುದ್ರಪ್ಪ ಪರಿಚಯ: 
    ೦೧.೦೨.೧೯೩೮ರಲ್ಲಿ ಭದ್ರಾವತಿ ಕ್ಷೇತ್ರದಲ್ಲಿಯೇ ಜನಿಸಿರುವ ಶಿವರುದ್ರಪ್ಪರವರು ಮೂಲತಃ ಕೃಷಿಕರು ಹಾಗು ವ್ಯಾಪಾರಸ್ಥರಾಗಿದ್ದು, ೧೯೭೦ರಿಂದ ಸುಮಾರು ೫೫ ವರ್ಷಗಳಿಂದ ನಗರದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿಕೊಂಡು ಬರುವ ಮೂಲಕ  ಅಜೀವ ಸದಸ್ಯರಾಗಿ ಇಂದಿಗೂ ತಮ್ಮ ಸೇವೆ ಮುಂದುವರೆಸಿದ್ದಾರೆ. ಇವರಿಗೆ ಇಬ್ಬರು ಪುತ್ರರರು, ಇಬ್ಬರು ಪುತ್ರಿಯರು ಇದ್ದಾರೆ.  ಎಸ್‌ಎಸ್‌ಎಲ್‌ಸಿ ಓದಿರುವ ಶಿವರುದ್ರಪ್ಪ, ತಮ್ಮ ಕುಟುಂಬದ ಪೂರ್ವಿಕರು ನಡೆಸಿಕೊಂಡು ಬರುತ್ತಿದ್ದ ವ್ಯಾಪಾರ ವೃತ್ತಿಯನ್ನು ಮುಂದುವರೆಸುವ ಜೊತೆಗೆ ಕೃಷಿಕರಾಗಿ ಹಂತ ಹಂತವಾಗಿ ಬೆಳದವರು. ಆರಂಭದಲ್ಲಿ ಕಡದಕಟ್ಟೆ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ೩ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ಸಹಕಾರ ಸಂಘದ ಬೆಳವಣಿಗೆಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಅಲ್ಲದೆ ಈ ಅವಧಿಯಲ್ಲಿ ಉತ್ತಮ ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 
    ಕಡದಕಟ್ಟೆ ಶ್ರೀ ವಿನಾಯಕ ದೇವಸ್ಥಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತಾಲೂಕು ಕಛೇರಿ ರಸ್ತೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಜೊತೆಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಜನ್ನಾಪುರ ದೇವಾಲಯಗಳ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೆ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. 
    ಜನ್ನಾಪುರ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆ ಅಜೀವ ಸದಸ್ಯರಾಗಿರುವ ಇವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿ ಹಲವಾರು ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ. ೧೯೮೯ರಲ್ಲಿ ಅಮೇರಿಕದಲ್ಲಿ ಜರುಗಿದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವುದು ಇವರ ಹೆಗ್ಗಳಿಕೆಯಾಗಿದೆ.    
ದಸರಾ ಉದ್ಘಾಟನೆಗೆ ಆಹ್ವಾನ ಸಂತಸ ತಂದಿದೆ : 
    ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಗೆ ನಮ್ಮನ್ನು ಆಹ್ವಾನಿಸಿರುವುದು ನನಗೆ ಹಾಗು ಕುಟುಂಬ ವರ್ಗಕ್ಕೆ ಸಂತಸವನ್ನುಂಟು ಮಾಡಿದೆ. ನಾನು ಸಲ್ಲಿಸಿರುವ ಸೇವೆ ಹಾಗು ಹಿರಿತನ ಪರಿಗಣಿಸಿ ಉದ್ಘಾಟನೆಗೆ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕ್ಷೇತ್ರದ ಶಾಸಕರಾದ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಮತ್ತು ಕ್ಷೇತ್ರದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಶಿವರುದ್ರಪ್ಪ ತಿಳಿಸಿದ್ದಾರೆ.