![](https://blogger.googleusercontent.com/img/b/R29vZ2xl/AVvXsEhNtMZP27pxyYPPn0cAi6tvps_-73EzsKnN4CfmWv7e0fiLuaucCTdykaTgF28OKw1bQf8dd-laqGzUntLRBUGS3EeFVPEhKMVFCXTUOFrCuGoHQDbh0oO3MpoqWhvOeIRkRAqAa6EXrUdi/w400-h226-rw/D21-BDVT-744287.jpg)
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚಾಲನೆ ನೀಡಿದರು.
ಭದ್ರಾವತಿ, ಡಿ. ೨೧: ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಮತದಾನದ ಬಗ್ಗೆ ಅರಿವು ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ ನೀಡಿದರು.
ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
೧೮ ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಹೊಂದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ಕರೆ ನೀಡಿದರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು. ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ ಮೂಲಕ, ಸಿ.ಎನ್ ರಸ್ತೆ, ನಂತರ ಕನಕಮಂಟಪ ಮೈದಾನದವರೆಗೂ ಜಾಥಾ ಸಾಗಿತು.
'ಮತದಾರರು ತಮ್ಮ ಪವಿತ್ರ ಮತಗಳನ್ನು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳಬೇಡಿ', 'ಕಡ್ಡಾಯವಾಗಿ ಮತದಾನ ಮಾಡಿ' ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭದ್ರಾವತಿಯಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು.
ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಕ್ಷೇತ್ರ ಸಮನ್ವಯಾಧಿಕಾರಿ ವೈ. ಗಣೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪಂಚಾಲ್, ಕನಕ ವಿದ್ಯಾಸಂಸ್ಥೆ ಮಂಜುನಾಥ್, ಸಹ್ಯಾದ್ರಿ ಪ್ರೌಢಶಾಲೆ ಸಂಪನ್ಮೂಲ ಶಿಕ್ಷಕ ಬಿ. ಮಂಜಪ್ಪ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರುಗಳು, ಶಾಲಾ ಹಂತದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ೩೦೦ ವಿದ್ಯಾರ್ಥಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ) ತಾಲೂಕು ನೋಡಲ್ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಆಹ್ಮದ್ ಪರ್ವೀಜ್ ಸ್ವಾಗತಿಸಿದರು. ಇಸಿಓ ಶ್ಯಾಮಲಾ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಎಂ.ಜಿ ನವೀನ್ ವಂದಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನ ವ್ಯವಸ್ಥೆ ಮತ್ತು ಮತದಾರರು ಪರಿಕಲ್ಪನೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಫರ್ಧೆ, ಭಿತ್ತಿಚಿತ್ರ ಮತ್ತು ಕೊಲೇಜ್ ಮೇಕಿಂಗ್ ಹಾಗೂ ರಸಪ್ರಶ್ನೆ ಒಟ್ಟು ೪ ರೀತಿಯ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
ಪ್ರಬಂಧ ಸ್ಪರ್ಧೆ(ಕನ್ನಡ ಭಾಷೆ)ಯಲ್ಲಿ ಅನುಷ ಎಸ್. (ನ್ಯಾಷನಲ್ ಪ್ರೌಢಶಾಲೆ, ಬಿ.ಆರ್.ಪ್ರಾಜೆಕ್ಟ್), ಅಕ್ಷತ ಎಂ ಶೇಟ್ (ಸೇಂಟ್ ಮೇರಿಸ್ ಶಾಲೆ, ಹೊಳೆಹೊನ್ನೂರು) ಪ್ರಿಯಾಂಕ ವಿ. ಕರ್ನಾಟಕ ಪಬ್ಲಿಕ್ ಶಾಲೆ, ಅಂತರಗಂಗೆ ಮತ್ತು ಭಿತ್ತಿ ಪತ್ರ ಹಾಗು ಕೊಲೇಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿನಾಯಕ ಎಂ.ಎಸ್. (ಸೇಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆ, ನ್ಯೂಟೌನ್), ಹರ್ಷಿತ ಎಸ್ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಇಂಪನ ಜಿ.ಎಂ. (ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನ್ಯೂಟೌನ್) ಹಾಗು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಚಂದ್ರ & ತನುಶ್ರೀ ಎ (ಸಹ್ಯಾದ್ರಿ ಇಂಗ್ಲಿಷ್ ಪ್ರೌಢಶಾಲೆ, ಹುತ್ತಾ ಕಾಲೋನಿ), ಮೇಘನ ಆರ್. & ಭೂಮಿಕ ಐ. (ಸರ್ಕಾರಿ ಪ್ರೌಢಶಾಲೆ, ಬಾಳೆಮಾರನಹಳ್ಳಿ), ತುಳಸಿ ಬಿ ಕೆ. & ನಚಿಕೇತನ್ ಎಂ (ಶ್ರೀ ಆದಿಚುಂಚನಗಿರಿ ಆಂಗ್ಲಪ್ರೌಢಶಾಲೆ, ಕಾರೆಹಳ್ಳಿ) ಮತ್ತು ಪ್ರಬಂಧ ಸ್ಪರ್ಧೆ(ಆಂಗ್ಲ ಭಾಷೆ)ಯಲ್ಲಿ ನಿಫಾ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಭೂಮಿಕ ಜಿ (ಪೇಪರ್ ಟೌನ್ ಆಂಗ್ಲ ಪ್ರೌಢಶಾಲೆ) ಹಾಗು ಹಿತೇಶ ಎಲ್. (ಸರ್ಕಾರಿ ಪ್ರೌಢಶಾಲೆ, ಹೊಸ ಸಿದ್ಧಾಪುರ).