ಭದ್ರಾವತಿಯಲ್ಲಿ ನ.4, 5ರಂದು ಆಯೋಜಿಸಲಾಗಿರುವ ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭವಿಷ್ಯದ ಪೀಳಿಗೆಗೆ ಉಳಿಸಿಕೊಂಡಬೇಕೆಂಬ ಏಕೈಕ ಉದ್ದೇಶದೊಂದಿಗೆ ಶತಮಾನೋತ್ಸವ ಸಂಭ್ರಮ ನ.4 ಮತ್ತು 5 ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾರ್ಖಾನೆಯ ನಿವೃತ್ತ ಉದ್ಯೋಗಿ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಬಾಬಬುಡನ್‌ಗಿರಿ ಹಾಗೂ ಕೆಮ್ಮಣ್ಣು ಗುಂಡಿಗಳಲ್ಲಿ ಇದ್ದ ಅಪಾರ ಖನಿಜ ನಿಕ್ಷೇಪಗಳನ್ನು ಬಳಸಿಕೊಳ್ಳುವುದು ಮತ್ತು ಕಬ್ಬಿಣ, ಉಕ್ಕು ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಕ್ಸ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಗೆ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು ಎಂದರು.
1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಅಮಿಟೆಡ್ (VISL) ಎಂಬುದಾಗಿ ಮರುನಾಮಕರಣವಾಯಿತು. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು 1989ರಲ್ಲಿ ಕಾರ್ಖಾನೆಯನ್ನು ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಕ್ಷೇತ್ರದ ಜೀವನಾಡಿಯಾಗಿ ಉಳಿದು ಲಕ್ಷಾಂತರ
ಜನರಿಗೆ ಬದುಕು ನಿರ್ಮಿಸಿಕೊಟ್ಟ ನಾಡಿನ ಹೆಮ್ಮೆಯ ಈ ಕಾರ್ಖಾನೆ ಇದೀಗ 100 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದರು.
ಈ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ವರ್ಗ, ಕಾರ್ಮಿಕ ವರ್ಗ - ಗುತ್ತಿಗೆದಾರರು ಮತ್ತು ಇವರೆಲ್ಲರ ಕುಟುಂಬಗಳು ಒಂದೆಡೆ ಸೇರಿ ನ. 4 ಮತ್ತು 5 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರು ಸೇರಿದಂತೆ ಪ್ರತಿಯೊಬ್ಬರು ಸಂತೋಷದಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಸಂತ ಶ್ರೇಷ್ಠರ ಸಾನ್ನಿಧ್ಯದಲ್ಲಿ ಮೈಸೂರು ಸಂಸ್ಥಾನದ ಇಂದಿನ ಮಹಾರಾಜರನ್ನು ಗೌರವದಿಂದ ಆಹ್ವಾನಿಸಿ ಅವರ ವಂಶಸ್ಥರ ಕೊಡುಗೆಯನ್ನು ಸ್ಮರಿಸೋಣ ಎಂದರು.
ದೇಶದ ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತರು ಮತ್ತು ಜಿಲ್ಲೆಯ ಪುರಜನರು ಒಂದೆಡೆ ಆಚರಿಸುವ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಕಲಾವಿದರಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಮಾದರಿಯ ಮೆರವಣಿಗೆ ಹಾಗೂ ಕಾರ್ಖಾನೆಯ ಗತವೈಭವ ಸಾರುವ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇದು ಬಹುವೆಚ್ಚದ ಸಮಾರಂಭವಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಬೆಕೆಂದರು.
ಪತ್ರಿಕಾಗೋಷ್ಠಿಯಲ್ಲಿ ವಿಐಎಸ್ಎಲ್ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ರೇವಣ್ಣ ಸಿದ್ದಯ್ಯ, ಕಾರ್ಯದರ್ಶಿ ಜಿ. ಅಮೃತ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ರಘುರಾಂ, ಎನ್.ಟಿ ಸತ್ಯನಾರಾಯಣ, ಎಸ್. ಅಡವೀಶಯ್ಯ, ಬಿ.ಜಿ ರಾಮಲಿಂಗಯ್ಯ, ಬಿ. ಮಂಜುನಾಥ್, ಎಸ್. ನರಸಿಂಹಚಾರ್, ಜೆ. ಜಗದೀಶ್, ಯು.ಎ ಬಸಂತ್ ಕುಮಾರ್, ಬಿ.ಸಿ ಶೈಲಶ್ರೀ, ಡಿ. ಕುಮಾರ್, ಎಚ್.ಜಿ. ಸುರೇಶ್, ಕುಮಾರಸ್ವಾಮಿ, ಪಿ. ರಾಕೇಶ್, ಡಿ. ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.