Thursday, May 19, 2022

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

ಶಾಲು ಹೊದಿಸಿ, ಹಾರ ಹಾಕಿ ಸಿಹಿ ತಿನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ


ಭದ್ರಾವತಿ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
    ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಬಿ. ಪ್ರೇರಣಾ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿರುವ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿದ್ಯಾರ್ಥಿನಿಗೆ ಶಾಲು ಹೊದಿಸಿ, ಹಾರ ಹಾಕುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪೋಷಕರು, ವಿದ್ಯಾ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ತುಂಬಾ ಸಂತೋಷದ ವಿಚಾರವೆಂದರೆ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಅದರಲ್ಲೂ ಅತಿಹೆಚ್ಚು ಅಂಕ ಪಡೆದ ಹೆಚ್ಚಿನವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಈ ಹಿನ್ನಲೆಯಲ್ಲಿ ಸಾಧನೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
    ಸಾಧನೆ ಹಿಂದೆ ಕುಟುಂಬ ವರ್ಗದವರ ಪರಿಶ್ರಮ ಹೆಚ್ಚು :
    ಉಪನ್ಯಾಸಕಿ ಶಿಲ್ಪ ಹಾಗು ಬಾಲಕೃಷ್ಣ ದಂಪತಿ ಪುತ್ರಿ, ೬೨೫ಕ್ಕೆ ೬೨೫ ಅಂಕ ಪಡೆದುಕೊಂಡಿರುವ ಪ್ರೇರಣಾ .ಬಿ ಮಾತನಾಡಿ, ನನ್ನ ಸಾಧನೆ ಹಿಂದೆ ತಾಯಿ-ತಂದೆ ಹಾಗು ಕುಟುಂಬ ವರ್ಗದವರ ಪರಿಶ್ರಮ ಹೆಚ್ಚಿನದ್ದಾಗಿದೆ. ವಿದ್ಯಾಸಂಸ್ಥೆ ಸಹ ನನ್ನ ಓದಿಗೆ ಬೆನ್ನೆಲುಬಾಗಿದೆ. ಕಲಿಕೆಯಲ್ಲಿ ಯಾವುದೇ ರೀತಿ ಸಮಸ್ಯೆ ಉಂಟಾದರೂ ಸಹ ಶಿಕ್ಷಕರು ತಕ್ಷಣ ಸ್ಪಂದಿಸುವ ಮೂಲಕ ಬಗೆಹರಿಸುತ್ತಿದ್ದರು. ಹೆಚ್ಚಿನ ಅಂಕ ಪಡೆದಿರುವುದು ನನಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ಅಲ್ಲದೆ ನನ್ನ ಪೋಷಕರು ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಸಹ ಸಂತೋಷದಿಂದ ಕಾಣುವಂತಾಗಿರುವುದು ನನಗೆ ಹೆಮ್ಮೆ ಪಡುವಂತಾಗಿದೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಇದೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸಂಭ್ರಮ ಹಂಚಿಕೊಂಡರು.
    ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಜಗದೀಶ್, ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ಮುಖ್ಯ ಶಿಕ್ಷಕ ಗಿರೀಶ್, ಶಿಕ್ಷಣ ಸಂಯೋಜಕ ರವಿಕುಮಾರ್ ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಧಾರಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿ : ತಹಸೀಲ್ದಾರ್


ಭದ್ರಾವತಿ ತಾಲೂಕಿನಾದ್ಯಂತ ಕಳೆದ ೨ ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡಿರುವುದು.
    ಭದ್ರಾವತಿ, ಮೇ. ೧೯: ಕಳೆದ ೨ ದಿನಗಳಿಂದ ತಾಲೂಕಿನಾದ್ಯಂತ ಧಾರಕಾರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಬಹುತೇಕ ಕಡೆ ಮನೆಗಳಿಗೆ ಹಾಗು ಜಮೀನು ಮತ್ತು ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿರುವ ಘಟನೆಗಳು ನಡೆದಿವೆ.
    ಮಳೆ ಹಾನಿ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಆರ್. ಪ್ರದೀಪ್, ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ತರೀಕೆರೆ ರಸ್ತೆ ಮೂಲಕ ನಗರ ಪ್ರವೇಶಿಸುವ ವಾಹನಗಳಿಗೆ ಬೈಪಾಸ್ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
    ಕಾರೇಹಳ್ಳಿ, ಮೈದೊಳಲು, ಆನವೇರಿ, ಆದ್ರಿಹಳ್ಳಿ, ಇಟ್ಟಿಗೆಹಳ್ಳಿ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಎಡೇಹಳ್ಳಿ ಭಾಗದಲ್ಲಿ ಭತ್ತ ಹಾಗು ಕಬ್ಬಿನ ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿವೆ. ಇಟ್ಟಿಗೆಹಳ್ಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಗೆ ಅಡ್ಡಲಾಗಿ ಮಣ್ಣನ್ನು ಸುರಿದಿದ್ದು, ಇದರಿಂದಾಗಿ ರಸ್ತೆ ಯುದ್ದಕ್ಕೂ ನೀರು ನಿಂತುಕೊಂಡು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಬೀಡುಬಿಟ್ಟು ಜೆಸಿಬಿ ಮೂಲಕ ನೀರು ಸರಾಗವಾಗಿ ಹೋಗಲು ಕಾಲುವೆ ನಿರ್ಮಿಸಲಾಗಿದೆ. ಇದರಿಂದಾಗಿ ಸಮಸ್ಯೆ ಸ್ವಲ್ಪಮಟ್ಟಿಗೆ ಸಮಸ್ಯೆ ಬಗೆಹರಿದಿದೆ ಎಂದರು.
    ಉಳಿದಂತೆ ಬಿಆರ್‌ಪಿ ಭಾಗದಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿ ಉಂಟಾಗಿರುವ ಘಟನೆ ಹೊರತುಪಡಿಸಿ ಚಿಕ್ಕಪುಟ್ಟ ಘಟನೆ ನಡೆದಿವೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ತಂಡ ರಚಿಸಿ ನಿಗಾವಹಿಸಲು ಸೂಚಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಸ್ವಲ್ಪ ಬೆಳೆ ಹಾನಿ ಉಂಟಾಗಿದೆ. ಹಾನಿ ಕುರಿತ ಸಂಪೂರ್ಣ ಮಾಹಿತಿ ಶುಕ್ರವಾರ ಲಭ್ಯವಾಗಲಿದೆ ಎಂದರು.

ಎಸ್‌ಎಸ್‌ಎಲ್‌ಸಿ ಶೇ.೮೩.೫೪ ಫಲಿತಾಂಶ : ೬ ಸರ್ಕಾರಿ, ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮೇ. ೧೯: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಶೇ.೮೩.೫೪ ಫಲಿತಾಂಶ ಲಭಿಸಿದ್ದು, ೬ ಸರ್ಕಾರಿ ಹಾಗು ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ ೩,೪೯೭ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ೧೮೬೨, ಅನುದಾನಿತ ಶಾಲೆಗಳ ೭೩೭ ಹಾಗು ಖಾಸಗಿ ಶಾಲೆಗಳ ೧೫೮೭ ಸೇರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೪೮೪ ಸರ್ಕಾರಿ, ೫೪೭ ಅನುದಾನಿತ ಹಾಗು ೧೪೬೬ ಖಾಸಗಿ ಶಾಲೆಗಳ ಒಟ್ಟು ೩,೪೯೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸರ್ಕಾರಿ ಶಾಲೆಗಳು ಶೇ.೭೯.೭೦ರಷ್ಟು, ಅನುದಾನಿತ ಶಾಲೆಗಳು  ಶೇ. ೭೪.೨೨ರಷ್ಟು  ಹಾಗು ಖಾಸಗಿ ಶಾಲೆಗಳು ಶೇ.೯೨.೩೮ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು.
    ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ ೨,೧೭೩ ಬಾಲಕಿಯರಲ್ಲಿ ಶೇ.೮೭.೯೦ರಷ್ಟು ಒಟ್ಟು ೧೯೧೦ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ೨೦೧೩ ಬಾಲಕರಲ್ಲಿ ಶೇ.೭೮.೮೪ರಷ್ಟು ಒಟ್ಟು ೧೫೮೭ ಬಾಲಕರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೮೩.೬೫ರಷ್ಟು ಹಾಗು ನಗರ ಭಾಗದಲ್ಲಿ ಶೇ.೮೩.೪೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
    ಈ ಬಾರಿ ಇಬ್ಬರು ವಿದ್ಯಾರ್ಥಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಿ ಅಭಿನಂದಿಸಲಾಗಿದೆ. ಈ ಬಾರಿ ೬ ಸರ್ಕಾರಿ ಮತ್ತು ೧೨ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೮ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿವೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಇಬ್ಬರು ವಿದ್ಯಾರ್ಥಿಗಳು ೬೨೫ಕ್ಕೆ ೬೨೫

ಮಾವಿನಕೆರೆ ಸರ್ಕಾರಿ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿರುವ ಭದ್ರಾವತಿ ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ.
    ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದು, ಈ ನಡುವೆ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಪ್ರತೀಕ್ಷಾ ದಯಾನಂದ (೬೨೫/೬೨೫)
    ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಉಳಿದಂತೆ ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆಯ ರಿತಿಕ್ ೬೨೪, ಹೊಸಮನೆ ಸೇಂಟ್ ಮೇರಿಸ್ ಶಾಲೆಯ ಆರ್. ಚೇತನ್ ೬೨೧, ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳಾದ ಯಶಸ್ವಿನಿ .ಕೆ ೬೨೨ ಮತ್ತು ಪೂರ್ವಿಕ ೬೨೧ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.


ಪ್ರೇರಣಾ ಬಿ (೬೨೫/೬೨೫)
    ಒಟ್ಟಾರೆ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ ತಿಳಿಸಿದ್ದಾರೆ.


 ತನುಶ್ರೀ ೬೦೧/೬೨೫
    ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಈ ಬಾರಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ೧೮ ವಿದ್ಯಾರ್ಥಿಗಳು ಸಹ ತೇರ್ಗಡೆಗೊಂಡಿದ್ದು, ಈ ಪೈಕಿ ತನುಶ್ರೀ ವಿದ್ಯಾರ್ಥಿನಿ ೬೨೫ಕ್ಕೆ ೬೦೧ ಅತಿ ಹೆಚ್ಚು ಅಂಕ ಪಡೆದಕೊಂಡಿದ್ದಾರೆ.