Saturday, July 23, 2022

ಕುರುಬರ ಸಂಘಕ್ಕೆ ನೂತನ ನಿರ್ದೇಶಕರು ಆಯ್ಕೆ

ಭದ್ರಾವತಿ ತಾಲೂಕು ಕುರುಬರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ವಿವಿಧ ಗಣ್ಯರು ನಿರ್ದೇಶಕರನ್ನು ಅಭಿನಂದಿಸಿದರು.
    ಭದ್ರಾವತಿ, ಜು. ೨೩: ತಾಲೂಕು ಕುರುಬರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ವಿವಿಧ ಗಣ್ಯರು ನಿರ್ದೇಶಕರನ್ನು ಅಭಿನಂದಿಸಿದರು.
    ಜೆ. ಕುಮಾರ್, ಕೆ. ಕೇಶವ, ಕೆ.ಎನ್ ನಾಗರಾಜು, ಎಲ್. ಪ್ರವೀಣ್, ಬಿ.ಎಸ್ ಮಂಜುನಾಥ್, ಬಿ.ಎ ರಾಜೇಶ್, ಕೆ. ಲೋಕೇಶ್, ಬಿ.ಎಚ್ ವಸಂತ, ಜಿ. ವಿನೋದ್‌ಕುಮಾರ್, ಸಣ್ಣಯ್ಯ, ಎನ್. ಸತೀಶ್, ಬಿ.ಎಂ ಸಂತೋಷ್, ಬಿ.ಎಸ್ ನಾರಾಯಣಪ್ಪ, ಹೇಮಾವತಿ ಶಿವಾನಂದ್ ಮತ್ತು ಜೆ. ಮಂಜುನಾಥ್ ಒಟ್ಟು ೧೫ ನಿರ್ದೇಶಕರು ಆಯ್ಕೆಯಾಗಿದ್ದಾರೆ.
    ನೂತನ ನಿರ್ದೇಶಕರನ್ನು ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.

ವಿಜೃಂಭಣೆಯಿಂದ ಜರುಗಿದ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ

ಗಮನ ಸೆಳೆದ ಕಾವಡಿ ಹರಕೆ ಹೊತ್ತ ಭಕ್ತರು

ಭದ್ರಾವತಿ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಕಾವಡಿ ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ಹರಕೆ ಸಮರ್ಪಿಸಿದರು. 
    ಭದ್ರಾವತಿ, ಜು. ೨೫: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
ಜು.೧೭ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವ ಶನಿವಾರ ಅಂತ್ಯಗೊಂಡಿತು. ಬೆಳಿಗ್ಗೆ ವಿಶ್ವರೂಪ ದರ್ಶನ, ಅಭಿಷೇಕ, ಉತ್ಸವ ಪೂಜೆ ಹಾಗು ಮಧ್ಯಾಹ್ನ ಕಾವಡಿ ಹರಕೆ ಸಮರ್ಪಣೆ, ಮಹಾಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
ಮೂಲ ವಿಗ್ರಹ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ಸೇರಿದಂತೆ ದೇವಸ್ಥಾನದಲ್ಲಿರುವ ಎಲ್ಲಾ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾವಡಿ ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಹರೋ ಹರ ಘೋಷಣೆಗಳೊಂದಿಗೆ ಆಗಮಿಸಿ ಹರಕೆ ತೀರಿಸುವ ಮೂಲಕ ಭಕ್ತಿ ಮೆರದರು. 
ರಾಜ್ಯದ ವಿವಿಧೆಡೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಶ್ರೀ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸಮಿತಿಯ ಪ್ರಮುಖರು,  ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ಸೇವಾಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕಾಲ್ನಡಿಗೆ : 
ನಗರದ ನ್ಯೂಟೌನ್ ಆಂಜನೇಯ ಅಗ್ರಹಾರದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಶುಕ್ರವಾರ ಸಂಜೆ ಕಾಲ್ನಡಿಗೆ ಸಾಗಿದರು. ಶನಿವಾರ ಬೆಳಿಗ್ಗೆ ಹರಕೆ ಸಮರ್ಪಿಸಿದರು. ಪ್ರತಿವರ್ಷ ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಸಾಗುವುದು ವಾಡಿಕೆಯಾಗಿದೆ. 


ಭದ್ರಾವತಿ ನ್ಯೂಟೌನ್ ಆಂಜನೇಯ ಅಗ್ರಹಾರದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಶುಕ್ರವಾರ ಸಂಜೆ ಕಾಲ್ನಡಿಗೆ ಸಾಗಿದರು

ಶಿಕ್ಷಕ, ಜಾನಪದ ಕಲಾವಿದ ರೇವಣಪ್ಪರಿಗೆ ಗೌರವ ಡಾಕ್ಟರೇಟ್

ಜು.೨೪ರಂದು ಊಟಿಯಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ

ಎಂ.ಆರ್ ರೇವಣಪ್ಪ 
    ಭದ್ರಾವತಿ, ಜು. ೨೩:  ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಇಂಟರ್‌ನ್ಯಾಷನಲ್ ಪೀಸ್ ಯೂನಿವರ್ಸಿಟಿ(ಐಪಿಯು) ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.
    ರೇವಣಪ್ಪ ಅವರು ಶಿಕ್ಷಕ ವೃತ್ತಿಯೊಂದಿಗೆ ಜಾನಪದ ಸಾಹಿತ್ಯ, ರಂಗಭೂಮಿ ಕಲೆಯನ್ನು ಸಹ ಮೈಗೂಡಿಸಿಕೊಂಡಿದ್ದು, ರಾಷ್ಟ್ರ ಹಾಗು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಜೀವಮಾನ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.


    ಜು.೨೪ರಂದು ಊಟಿಯಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರೇವಣಪ್ಪ ಅವರು ಪದವಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಹಾಗು ಶಿವಮೊಗ್ಗ ಜಿಲ್ಲಾ ಜಾನಪದ ಕಲೆ ಹಾಗು ಸಾಹಿತ್ಯ ವೇದಿಕೆ, ಶಿಕ್ಷಕ ವೃಂದ ಮತ್ತು ಅಭಿಮಾನಿಗಳು ರೇವಣಪ್ಪ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜು.26ರಂದು ಮುಂಗಾರು ಜಾನಪದ ಸಂಭ್ರಮ


ಭದ್ರಾವತಿ, ಜು. 23:  ಕರ್ನಾಟಕ ಜಾನಪದ ಪರಿಷತ್ ವತಿಯಿಂದ  ಜು.26ರಂದು, ಮಧ್ಯಾಹ್ನ 3-30 ಕ್ಕೆ, ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದಲ್ಲಿ  ಜಾನಪದ ಗೀತೆಗಳ ವೃಂದಗಾನ ( ಕನಿಷ್ಠ 5ಜನರ ತಂಡ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
     ಆಷಾಢ ಮಾಸ, ಮುಂಗಾರು ಹಾಗೂ ಕೃಷಿ ಚಟವಟಿಕೆಗಳಿಗೆ ಸಂಬಂಧಿತ ಜಾನಪದ ಗೀತೆಗಳನ್ನು ಆಯ್ದು ಕೊಳ್ಳ ಬೇಕಾಗಿರುತ್ತದೆ. 
    ಭಾಗವಹಿಸುವಂತಹ ಆಸಕ್ತರು ಜು.25 ರೊಳಗಾಗಿ ಮೋಹನ್. ಬಿ.ಎಲ್ ಮೊ: 9986241232, ಲತಾ ಎಲ್.ಕೆ, ಮೊ: 9449401402 ಮತ್ತು  ಹೇಮಾವತಿ ವಿಶ್ವನಾಥ್ ಮೊ: 9886859993 ಕರೆ ಮಾಡಿ ಹೆಸರು ನೊಂದಾಯಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದ್ದಾರೆ. 

‎ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ : ಮುಖ್ಯಮಂತ್ರಿ ಭರವಸೆ

ಭದ್ರಾವತಿ, ಜು. 23: ಕೇಂದ್ರ ಉಕ್ಕುಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಪ್ರಾಧಿಕಾರದ ಮೂಲಕ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
 ಕಾರ್ಖಾನೆಯ ಕಾರ್ಮಿಕ ಸಂಘದ ನಿಯೋಗ ದೆಹಲಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ರವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
 ಮುಖ್ಯಮಂತ್ರಿಗಳು ಮನವಿಗೆ ಪೂರಕವಾಗಿ ಸ್ಪಂದಿಸಿ  ಭರವಸೆ ನೀಡಿದರು.  ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್, ಕಾರ್ಯದರ್ಶಿ ಮನು, ಖಜಾಂಚಿ ಮೋಹನ್ ಉಪಸ್ಥಿತರಿದ್ದರು.