ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರರಿಗೆ ಮನವಿ
![](https://blogger.googleusercontent.com/img/a/AVvXsEgEOaS4LEBau9b4-UL9g60dWOdHMF2yrKycA9dvtP099qwbEPz-D6B1taO8PlP2jURrp2nQ3hZci2ZjKiDMojGbgl9hJ4RrDcAjqQTT92g08OJ80D8Sq6X8bEBMVB2hRnHWTfVwBuhAZdH-jgm61wLoTRWYMa-XHUpIDUYg2_7rfF0pZCYZGwGfTK9KLg=w363-h400-rw)
ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ , ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಭದ್ರಾವತಿ, ಸೆ. ೧೨: ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ , ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡು ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಿವಮೊಗ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತ ನೈರ್ಮಲ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ೨೦೨೩ರ ಜನವರಿ ತಿಂಗಳಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಹಾಗು ರಾಜ್ಯ ನಾಯಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸುಮಾರು ೪೮ ಕೋ. ರು. ವೆಚ್ಚದ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಉಂಬ್ಳೆಬೈಲು, ಕಲ್ಲಹಳ್ಳಿ ಮತ್ತು ೨೮ ಗ್ರಾಮಗಳ ೮.೨೪ ಕೋ. ರು. ವೆಚ್ಚದ ದೊಣಬಘಟ್ಟ, ೪.೯೮ ಕೋ. ರು. ವೆಚ್ಚದ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ, ೩ ಕೋ. ರು. ವೆಚ್ಚದ ಕಂಬದಾಳ್ ಹೊಸೂರು ಮತ್ತು ೨೧ ಹಳ್ಳಿಗಳಲ್ಲಿ, ೨೬.೯೩ ಕೋ. ರು. ವೆಚ್ಚದ ಮಾರಶೆಟ್ಟಿ ಹಳ್ಳಿ ಮತ್ತು ೨೩ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಕೋರಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನರ ಸಂಕಷ್ಟಗಳಿಗೆ ತುರ್ತಾಗಿ ಸ್ಪಂದಿಸುತ್ತಿದ್ದು, ಇಲಾಖೆಯಲ್ಲಿನ ಕಡತಗಳು ವೇಗ ಪಡೆದುಕೊಂಡಿವೆ. ಈ ಹಿನ್ನಲೆಯಲ್ಲಿ ತುರ್ತಾಗಿ ಕಾಮಗಾರಿ ಆರಂಭಿಸುವಂತೆ ವೇದಿಕೆ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.