Thursday, August 10, 2023

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಅರ್ಜಿ ಶುಲ್ಕ ಉಚಿತ ಮಾಡಿ

ಸರ್ಕಾರಕ್ಕೆ ಮನವಿ ಮಾಡಿದ ನಾಗರಾಜ್ ಕೊಣನೂರ್

ಭದ್ರಾವತಿ ನ್ಯೂಟೌನ್  ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ   ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ದತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ಭದ್ರಾವತಿ, ಆ. ೧೦:  ಕೆಲಸಕ್ಕಾಗಿ ಅಲೆದಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಪರೀಕ್ಷೆಗಳು ನಡೆಸುವ ಪರೀಕ್ಷಾ ಪ್ರಾಧಿಕಾರಗಳು ಉಚಿತವಾಗಿ ಅರ್ಜಿಶುಲ್ಕವಿಲ್ಲದೇ ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷಾ ಮನೋಭಾವ ಹೆಚ್ಚುತ್ತದೆ ಎಂದು ನಾಗರಾಜ್‌ಕೋಣನೂರ್ ಹೇಳಿದರು.
    ಅವರು ನ್ಯೂಟೌನ್  ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ  ಏರ್ಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ದತಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಅರ್ಜಿ ಶುಲ್ಕ ರಹಿತ ಪರೀಕ್ಷೆ ನಡೆಸಿದರೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುತ್ತಾರೆ. ಅಲ್ಲದೆ ಪ್ರತಿಭಾನ್ವಿತರು ಆಯ್ಕೆಯಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು. ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದರು.
    ಒಂದಿಷ್ಟು ವಿದ್ಯಾರ್ಥಿಗಳಿಗೆ ಎಷ್ಟೇ ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವ ಕೊರಗು ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ಏಕಾಗ್ರತೆ ಎನ್ನಬಹುದು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಸಹಜವಾಗಿಯೇ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಸರಳ ವಿಧಾನ ಅನುಸರಿಸಬೇಕು.
    ದೀರ್ಘಕಾಲ ಕೊಂಚವೂ ವಿಶ್ರಾಂತಿ ಇಲ್ಲದೇ ಗಂಟೆಗಳ ಕಾಲ ಅಧ್ಯಯನ ಮಾಡುವುದು ಅಷ್ಟು ಒಳ್ಳೆಯದಲ್ಲ. ಇದು ಏಕಾಗ್ರತೆಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ನೆನಪಿನ ಶಕ್ತಿ ಕುಂದುತ್ತದೆ. ಹೀಗಾಗಿ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳಿ. ಅಲ್ಲದೇ ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ, ಹಾಗೆಯೇ ದಿನಕ್ಕೆ ಕನಿಷ್ಠ ೧೫-೨೦ ನಿಮಿಷಗಳ ಕಾಲ ವ್ಯಾಯಾಮ ಮಾಡಿ.  ಕನಿಷ್ಠ ೬-೮ ಗಂಟೆ ನಿದ್ರೆ ಮಾಡಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಿ ನಡೆಸುವಾಗ ಆತ್ಮವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ ಎಂದರು.
    ಎಲ್ಲಾ ಓದುವ ಬದಲು ವಿಷಯಕ್ಕೆ ತಕ್ಕ ಹಾಗೆ ಸಮಾಯಾವಕಾಶ ಕೊಡಿ. ಹೆಚ್ಚು ಹೆಚ್ಚು ಪುನಾರಾವರ್ತನೆ ಮಾಡಿಕೊಳ್ಳಿ. ಬಹಳ ಮುಖ್ಯವಾಗಿ ಪದೇ ಪದೇ ಬರುವ ಮೊಬೈಲ್ ಮೆಸೇಜ್‌ಗಳ ಸದ್ದು, ಆಗಾಗ ಬರುವ ಫೋನ್ ಕಾಲ್ ಗಳನ್ನು ನಿಮ್ಮ ಏಕಾಗ್ರತೆಯನ್ನು ಹಾಳುಮಾಡಬಹುದು. ಹೀಗಾಗಿ ಓದುವ ಸಮಯದಲ್ಲಿ ಮೊಬೈಲ್ ಬಳಕೆಯಿಂದ ದೂರವಿದ್ದರೆ ಒಳಿತು. ಇಂಟರ್ ನೆಟ್ ಸಹಾಯಬೇಕಾದಾಗ ಮಾತ್ರ ಮೊಬೈಲ್ ಬಳಸಿ. ಹಿಂದಿನ ವರ್ಷಗಳ ಹಳೆಯ ಪ್ರಶ್ನೆಗಳನ್ನು ತಪ್ಪದೇ ಓದುವುದನ್ನು ರೂಡಿಮಾಡಿಕೊಳ್ಳಿ. ಇದರಿಂದ ಪರೀಕ್ಷೆಗಳಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಸಂಪೂರ್ಣ ಕಲ್ಪನೆ ನಿಮ್ಮ ಅರಿವಿಗೆ ಬರುತ್ತದೆ. ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯಲ್ಲಿರಿ. ನಿಮ್ಮ ಮೇಲೆ ನಿಮಗೆ ಮೊದಲು ನಂಬಿಕೆ ಇರಲಿ. ಪ್ರಶ್ನೆಗಳಿಗೆ ಉತ್ತರಿಸಲು ಅತಿಯಾಗಿ ಯೋಚಿಸದಿರಲು ಪ್ರಯತ್ನಿಸಿ. ನೀವು ಓದಿರುವ ಪಾಠದಲ್ಲಿ ಕೆಲವೊಂದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. ಒಂದು ಅಧ್ಯಾಯ ಮುಗಿದೆ ಮೇಲೆ ಒಂದು ಅಣುಕು ಪರೀಕ್ಷೆಯನ್ನು ಬರೆಯಿರಿ. ಹೀಗೆ ಅಣುಕು ಪರೀಕ್ಷೆಯನ್ನು ಬರೆಯುವುದರಿಂದ ನಿಮಗೆ ಪರೀಕ್ಷೆ ಮೇಲಿನ ಭಯ ಹೋಗುತ್ತದೆ. ಈ ರೀತಿಯಾಗಿ ನೀವು ಮಾಡಿದರೆ ಖಂಡಿತವಾಗಿ  ಯು.ಪಿ.ಎಸ್.ಸಿ. ಅಂತಹ ಪರೀಕ್ಷೆಗಳನ್ನು ಅತ್ಯಂತ ಸುಲಭವಾಗಿ ಎದುರಿಸಿ ಉತ್ತೀರ್ಣರಾಗಬಹುದಾಗಿದೆ ಎಂದರು.  
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಹೊಸಳ್ಳೆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಪಕಾರಾದ ಐಕ್ಯೂಎಸಿ ಕೋ-ಆರ್ಡಿನೇಟರ್ ಮಹಮದ್ ನಜ಼ಿಬ್,  ಅಕ್ರಮ್ ಪಾಷ, ಪ್ಲೇಸ್ ಮೆಂಟ್ ಕೋಅರ್ಡಿನೇಟರ್ ವಿ.ಬಿ ಚಿರಂಜೀವಿ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಟಿ.ಜಿ ಉಮಾ, ಬಿ. ಗುರುಪ್ರಸಾದ್ ಹಾಗು  ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿವರ್ಗದವರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಂಬೇಡ್ಕರ್‌ ಭವನ ನಿರ್ಲಕ್ಷ್ಯ, ಶಾಲಾ-ಕಾಲೇಜುಗಳ ಅವ್ಯವಸ್ಥೆಗಳ ವಿರುದ್ದ ಆ.೧೪ರಂದು ಪ್ರತಿಭಟನಾ ಧರಣಿ

ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ  ಅಧ್ಯಕ್ಷ ಬಿ.ಎನ್‌ ರಾಜು ಮಾತನಾಡಿದರು.
    ಭದ್ರಾವತಿ, ಆ. ೧೦: ನಗರದ ಡಾ. ಬಿ.ಆರ್‌ ಅಂಬೇಡ್ಕರ್‌ ಭವನ ನಿರ್ಲಕ್ಷ್ಯ ಹಾಗು ಸರ್ಕಾರಿ ಶಾಲಾ-ಕಾಲೇಜುಗಳ ಅವ್ಯವಸ್ಥೆಗಳ ವಿರುದ್ಧ ಆ.೧೪ರಂದು ಪ್ರತಿಭಟನಾ ಧರಣಿ ಸತ್ಯಾಗ್ರಹ ಹಾಗು  ಆ.೧೫ರಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ  ಅಧ್ಯಕ್ಷ ಬಿ.ಎನ್‌ ರಾಜು ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ೧೯೪೭ರಲ್ಲಿ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂತು ಎಂಬುದು ನಿಜವಾಗಿದ್ದರು. ಸ್ವಾತಂತ್ರ್ಯ ಎಂದರೇ ಪ್ರತಿ ವ್ಯಕ್ತಿಗೂ ಸಮಾನತೆ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಸಮಭಾಗ ಇದ್ದಾಗ ಮಾತ್ರ ಬಹಳ ಮುಖ್ಯವಾಗಿ ಶಿಕ್ಷಣ, ಸೂರು, ಆರೋಗ್ಯ ಮತ್ತು ರಕ್ಷಣೆಯು ಮೂಲಭೂತ ಹಕ್ಕುಗಳಾಗಿದ್ದು, ಸ್ವಾತಂತ್ರ್ಯ ಬಂದು ಸುಮಾರು ೭೬ ವರ್ಷಗಳಾದರೂ ತಾರತಮ್ಯದಿಂದ ಇಂದಿಗೂ ಸಹ ಉಚಿತ ಶಿಕ್ಷಣ, ಆರೋಗ್ಯ, ಜೀವಿಸಲು ಸೂರು ಕಲ್ಪಿಸದಾ ಅನೇಕ ಸರ್ಕಾರಗಳು ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಎಂಬ ಅರ್ಥವನ್ನು ಅನರ್ಥಗೊಳಿಸಿರುವುದು ಖಂಡನೀಯವಾಗಿದೆ ಎಂದರು.
    ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣವನ್ನು ಗುಣಮಟ್ಟದಿಂದ ನೀಡದೇ ಪ್ರತಿ ವಿಷಯವಾರು ಶಿಕ್ಷಕರಿಲ್ಲದೆ ಕಟ್ಟಡಗಳ ಶಿಥಿಲಾವಸ್ಥೆಗಳನ್ನು ಸರಿಪಡಿಸದೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಮತ್ತು ಪ್ರೌಷ್ಠಿಕಾಂಶಕ್ಕಾಗಿ ಬಡ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಪೌಷ್ಠಿಕಾಂಶವಿಲ್ಲದೆ ಅರ್ಧಂಬರ್ಧ ನೀಡುತ್ತಾ ಬಡ ಮಕ್ಕಳಿಗೆ ಮೋಸ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
    ದೇಶದ ಕೆಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದ್ದು, ರಾಜದಲ್ಲಿ ಇದುವರೆಗೂ ಈ ಬಗ್ಗೆ ಸರಿಯಾದ ಅಧ್ಯಯನ ನಡೆದಿರುವುದಿಲ್ಲ. ಸರ್ಕಾರಿ ಶಿಕ್ಷಕರು ತಮ್ಮ ವೇತನಕ್ಕಾಗಿ ಶಾಲೆಗಳನ್ನು ಉಳಿಸಿಕೊಂಡಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುವುದಾದರೆ ಇವರ ಸೇವೆ ಸರ್ಕಾರಿ ಶಾಲೆಗೆ ಅಗತ್ಯವಿದೆಯೇ  ಎಂದು ಪ್ರಶ್ನಿಸಿದರು.
    ಇನ್ನೂ ದುರಂತ ಎಂದರೆ ಸರ್ಕಾರಿ ನೌಕರರ ಸಂಘದಲ್ಲಿ ಇರುವ ಕೆಲ ಶಿಕ್ಷಕರು ತರಗತಿಯಲ್ಲಿ ಪಾಠ ಪ್ರವಚನ ಕೈಗೊಳ್ಳದೆ ಮನಸೋ ಇಚ್ಛೆ ನಡೆದುಕೊಂಡು ಪ್ರತಿ ತಿಂಗಳು ವೇತನ ಪಡೆಯುತ್ತಿದ್ದು, ಕನಿಷ್ಠ ಕಾಳಜಿಯಿಂದ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡದೆ ಮೋಸ ಮಾಡುತ್ತಿರುವುದು ಯಾವುದೇ ಸರ್ಕಾರ ಜವಾಬ್ದಾರಿಯಿಂದ ಇವನ್ನು ಕೇಳದೇ ಇರುವುದು ಬಡ ಮಕ್ಕಳಿಗೆ ಮಾಡಿದ ಮೋಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ತಕ್ಷಣ ಎಲ್ಲಾ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಮತ್ತು ಸಿ.ಸಿ ಟಿವಿ ಅಳವಡಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗುವಂತೆ ಮುಖ್ಯಮಂತ್ರಿಗಳಿಗೆ ಹಾಗು ಶಿಕ್ಷಣ ಸಚಿವರಿಗೆ ಈ ಮೂಲಕ ಆಗ್ರಹಿಸುತ್ತೇನೆ ಎಂದರು.
    ನಗರದ ಹೃದಯ ಭಾಗದಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ೨೦೧೭ರಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ಭವನ ಕಾಮಗಾರಿ ಆರಂಭಗೊಂಡಿದ್ದು, ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಸಲಾಗಿದೆ. ಇದನ್ನು ಸಮಿತಿ ಖಂಡಿಸುವ ಜೊತೆಗೆ ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ  ಹಾಗು ಈ ಭವನದ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸುಂತೆ ಆಗ್ರಹಿಸುತ್ತೇನೆ ಎಂದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್‌ ಅರುಣ್‌ಕುಮಾರ್‌, ಪ್ರಧಾನ  ಕಾರ್ಯದರ್ಶಿ ಅಕ್ರಮ್‌ ಖಾನ್‌, ಬ್ರಹಲಿಂಗಯ್ಯ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.