Tuesday, September 15, 2020

ಕಾಮಕೇಳಿ ಅಧಿಕಾರಿಯಿಂದ ನಾಗರೀಕ ಸಮಾಜಕ್ಕೆ ಅವಮಾನ

ಬಡತನ ಬಂಡವಾಳ ಮಾಡಿಕೊಂಡ ತಹಸೀಲ್ದಾರ್ ಅಮಾನತ್ತು ಯಾವಾಗ...?

ಎಚ್.ಸಿ ಶಿವಕುಮಾರ್
ಭದ್ರಾವತಿ, ಸೆ. ೧೫: ತಾಲೂಕು ದಂಡಾಧಿಕಾರಿಯಾಗಿ ಮೇ.೮ರಂದು ಅಧಿಕಾರ ವಹಿಸಿಕೊಂಡಿದ್ದ ಎಚ್.ಸಿ ಶಿವಕುಮಾರ್ ಸುಮಾರು ೬ ತಿಂಗಳ ಕರ್ತವ್ಯದ ಅವಧಿಯಲ್ಲಿ ಕಾಮಕೇಳಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದೆ.
       ತಾಲೂಕು ಕಛೇರಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು, ಈ ಪೈಕಿ ಅರ್ಧದಷ್ಟು ಮಹಿಳಾ ಸಿಬ್ಬಂದಿಗಳಿದ್ದಾರೆ. ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು ೧ ತಿಂಗಳ ಹಿಂದೆ ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೧೦ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗುಲಿತ್ತು. ಈ ಪೈಕಿ ಸೋಂಕಿಗೆ ತುತ್ತಾದವರು ಬಹುತೇಕ ಮಹಿಳೆಯರಾಗಿದ್ದರು. ಎಲ್ಲಾ ಸಿಬ್ಬಂದಿಗಳು ಗುಣಮುಖರಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ಪುನಃ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದಾಗಿದೆ.
        ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡ ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳಿಂದಾಗಿ ಶ್ರೀ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಯಾವುದೇ ವ್ಯಾಪಾರ ವಹಿವಾಟು, ಉದ್ಯೋಗವಿಲ್ಲದೆ ದಿನದ ಬದುಕು ಸಾಗಿಸಲು ಹೆಣಗಾಡುತ್ತಿದ್ದಾರೆ. ಅಧಿಕಾರಿಯೊಬ್ಬರು ಬಡತನವನ್ನು ಬಂಡವಾಳ ಮಾಡಿಕೊಂಡು ಕಾಮಕೇಳಿಗೆ ಇಳಿಯುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
     ಈ ರೀತಿಯ ಅಧಿಕಾರಿಗಳಿಂದ ಉನ್ನತ ಹುದ್ದೆಯಲ್ಲಿರುವ ಇತರೆ ಅಧಿಕಾರಿಗಳನ್ನು ಜನರು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ತಾಲೂಕು ಕಛೇರಿಯಲ್ಲಿ ಇಲ್ಲಿಯವರೆಗೆ ಭ್ರಷ್ಟಾಚಾರದ ಪ್ರಕರಣಗಳು ಬಯಲಿಗೆ ಬರುತ್ತಿದ್ದವು. ಆದರೆ ಇದೀಗ ಕಾಮಕೇಳಿ ಪ್ರಕರಣವೊಂದು ಬಯಲಿಗೆ ಬಂದಿದೆ.
     ಶಿವಕುಮಾರ್ ೨೦೦೦ ಇಸವಿಯಲ್ಲಿ ಗ್ರೇಡ್-೧ ಅಧಿಕಾರಿಯಾಗಿ ತಹಸೀಲ್ದಾರ್ ಹುದ್ದೆಯಲ್ಲಿ ನೇಮಕಗೊಂಡಿದ್ದು, ಸುಮಾರು ೧೯ ವರ್ಷ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹಾವೇರಿ ತಾಲೂಕು ದಂಡಾಧಿಕಾರಿಯಾಗಿ ಸುಮಾರು ೨ ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು ೨೧ ವರ್ಷಗಳ ಸೇವಾ ಅವಧಿಯಲ್ಲಿ ಈ ರೀತಿಯ ಘಟನೆಗಳು ಎಷ್ಟು ನಡೆದಿರಬಹುದೆಂಬ ಅನುಮಾನಗಳು ಇದೀಗ ವ್ಯಕ್ತವಾಗುತ್ತಿವೆ.  
    ಇವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗುತ್ತಿದ್ದಂತೆ ಇವರನ್ನು ಹುದ್ದೆಯಿಂದ ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯ ಮಾನ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಪ್ಪಿತಸ್ಥ ಅಧಿಕಾರಿಯಾಗಿರುವ ಶಿವಕುಮಾರ್ ವಿರುದ್ಧ ತನಿಖೆ ನಡೆಯುವುದು ಯಾವಾಗ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಅಧಿಕಾರದಲ್ಲಿರುವಾಗ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವೇ ಎಂಬ ಮತ್ತೊಂದು ಪ್ರಶ್ನೆ ಎದುರಾಗಿದೆ.  ಈ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿವೆ.

ಪ್ರಭಾರ ತಹಸೀಲ್ದಾರ್ ಡಿ.ಜೆ ನಾಗರಾಜ್

ಭದ್ರಾವತಿ, ಸೆ. ೧೫: ತಾಲೂಕು ಪ್ರಭಾರ ದಂಡಾಧಿಕಾರಿಯಾಗಿ ತಹಸೀಲ್ದಾರ್ ಡಿ.ಜೆ ನಾಗರಾಜ್ ಮಂಗಳವಾರ ಅಧಿಕಾರ ವಹಿಸಿಕೊಂಡರು.
       ಡಿ.ಜೆ ನಾಗರಾಜ್‌ರವರು ಪ್ರಸ್ತುತ ಶಿವಮೊಗ್ಗ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದಿನ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ದಿಢೀರನೆ ಜಿಲ್ಲಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಹಿನ್ನಲೆಯಲ್ಲಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ.
         ಎಚ್.ಸಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು:
    ಸಚಿವಾಲಯದಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಸಿ ಶಿವಕುಮಾರ್ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಎಂ. ನಾಗರಾಜ್

ಭದ್ರಾವತಿ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಕಲ್ಲಿಹಾಳು ಕ್ಷೇತ್ರದ ಸದಸ್ಯ ಎಂ. ನಾಗರಾಜ್ ಆಯ್ಕೆಯಾಗಿದ್ದು, ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರನ್ನು ಅಭಿನಂದಿಸಲಾಯಿತು.  
ಭದ್ರಾವತಿ, ಸೆ. ೧೫: ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಕಲ್ಲಿಹಾಳು ಕ್ಷೇತ್ರದ ಸದಸ್ಯ ಎಂ. ನಾಗರಾಜ್ ಆಯ್ಕೆಯಾದರು.
       ತಾಲೂಕು ಪಂಚಾಯಿತಿಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರ ಅಧಿಕಾರ ಅವಧಿ ಸುಮಾರು ೮ ತಿಂಗಳು ಬಾಕಿ ಉಳಿದಿದ್ದು, ಈ ಅವಧಿಗೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಎಂ. ನಾಗರಾಜ್‌ರವರು ಆಯ್ಕೆಯಾಗಿರುವುದನ್ನು ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಘೋಷಿಸಿದರು.
      ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ಹಂಚಿಕೊಂಡಿದ್ದು, ಪ್ರಸ್ತುತ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ೨ ಸ್ಥಾನಗಳು ಜೆಡಿಎಸ್ ಸದಸ್ಯರ ಪಾಲಾಗಿವೆ. ಸ್ಥಾಯಿ ಸಮಿತಿ ಸ್ಥಾನ ಮಾತ್ರ ಈ ಹಿಂದೆ ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿ ಮತ್ತು ಕರಿಯಣ್ಣರವರು ಮಾಡಿಕೊಂಡಿದ್ದ ಹಂಚಿಕೆ ಸೂತ್ರದಂತೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ.
      ಉಪಾಧ್ಯಕ್ಷೆ ನೇತ್ರಾಬಾಯಿ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಾ. ಜಿ. ಮಂಜುನಾಥ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ, ಸದಸ್ಯರಾದ ಧರ್ಮೇಗೌಡ, ಆರ್. ತಿಪ್ಪೇಶ್‌ರಾವ್, ಅಣ್ಣಾಮಲೈ, ಗೀತಾ ಜಗದೀಶ್, ಎಚ್.ಎಂ. ಪ್ರೇಮ್‌ಕುಮಾರ್, ಯಶೋದಮ್ಮ, ಎಂ.ಜಿ ದಿನೇಶ್, ಕೆ.ವಿ ರುದ್ರಪ್ಪ ಮತ್ತು ಆಶಾ ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧೆಡೆ ನಗರದ ನಿರ್ಮಾತೃ, ಅನ್ನದಾತ ಸರ್‌ಎಂವಿ ದಿನಾಚರಣೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿ ಮುಂಭಾಗದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಲಾಯಿತು.
ಭದ್ರಾವತಿ, ಸೆ. ೧೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಭಾರತರತ್ನ, ನಗರದ ನಿರ್ಮಾತೃ, ಅನ್ನದಾತ  ಸರ್.ಎಂ. ವಿಶ್ವೇಶ್ವರಾಯ ಜನ್ಮದಿನ ಆಚರಿಸಲಾಯಿತು.
      ಕಾರ್ಖಾನೆ ಆಡಳಿತ ಕಛೇರಿ ಮುಂಭಾಗದಲ್ಲಿರುವ ಸರ್.ಎಂ.ವಿ ಪ್ರತಿಮೆಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್ ಮಾಲಾರ್ಪಣೆ ನೆರವೇರಿಸಿ ಗೌರವ ಸಲ್ಲಿಸಿದರು.
        ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಸುರಜೀತ್ ಮಿಶ್ರ,  ಮಹಾಪ್ರಬಂಧಕರು ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ,  ಕಾರ್ಮಿಕ ಸಂಘದ ಅಧ್ಯಕ್ಷ  ಜೆ. ಜಗದೀಶ್, ಅಧ್ಯಕ್ಷರು,  ಅಧಿಕಾರಿಗಳ ಸಂಘದ ಅಧ್ಯಕ್ಷ ಏ.ಆರ್ ವೀರಣ್ಣ ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.  


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅತಿಥಿ ಗೃಹದ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಿದರು.  
       ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಜನ್ಮ ದಿನಾಚರಣೆ:
    ನ್ಯೂಟೌನ್ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅತಿಥಿ ಗೃಹದ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಿದರು.  
ಕಾರ್ಯಕ್ರಮವನ್ನು ಮಹಾಪ್ರಬಂಧಕರು ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜನಾಥ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಅತಿಥಿಗೃಹದ ಅಧಿಕಾರಿಗಳಾದ ಚಂದ್ರಕಾಂತ, ಉಮೇಶ್ ಹುಕ್ಕೆ, ಸಿಬ್ಬಂದಿಗಳಾದ ಮೋಹನ್, ಪ್ರಭಾಕರ್, ಅಸ್ಲಾಂ, ಆದಿನಾರಾಯಣ, ಅಖಿಲ, ಪ್ರತಾಪ್, ರವಿ, ವಿಲ್ಸನ್, ಸೋಮಶೇಖರ್, ಪದ್ಮಮ್ಮ, ಸುಜಾತಮ್ಮ, ಸಾವಿತ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಸರ್.ಎಂ. ವಿಶ್ವೇಶ್ವರಾಯ ಅಭಿಮಾನ ಬಳಗದಿಂದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಲಾಯಿತು.
        ರೈಲ್ವೆ ನಿಲ್ದಾಣದ ಬಳಿ ಸರ್.ಎಂ.ವಿ ದಿನಾಚರಣೆ:
    ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಸರ್.ಎಂ. ವಿಶ್ವೇಶ್ವರಾಯ ಅಭಿಮಾನ ಬಳಗದಿಂದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಲಾಯಿತು.
       ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿ ಸಿಹಿ ಹಂಚಲಾಯಿತು. ಅಭಿಮಾನಿ ಬಳಗದ ಪ್ರಮುಖರಾದ ಎನ್. ಕೃಷ್ಣಮೂರ್ತಿ, ಎಂ.ಎಸ್ ಮುರುಳಿ, ಆರ್.ಜಿ ಶ್ರೀನಿವಾಸಶೆಟ್ಟಿ, ಬಿ.ಎಂ ಮಹಾದೇವಯ್ಯ, ರಮೇಶ್, ತಿಮ್ಮಯ್ಯ, ಮಹಾದೇವ, ನಾರಾಯಣ, ಬಿ.ಎಸ್ ಮಂಜುನಾಥ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬೊಮ್ಮನಕಟ್ಟೆ ಸರ್.ಎಂ ವಿಶ್ವೇಶ್ವರಯ್ಯ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಆಚರಿಸಲಾಯಿತು.
       ವಿಜ್ಞಾನ ಕಾಲೇಜಿನಲ್ಲಿ ಸರ್.ಎಂ.ವಿ ದಿನಾಚರಣೆ:
      ನಗರದ ಬೊಮ್ಮನಕಟ್ಟೆ ಸರ್.ಎಂ ವಿಶ್ವೇಶ್ವರಯ್ಯ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಆಚರಿಸಲಾಯಿತು.
    ಕಾಲೇಜಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎ ವಿಷ್ಣುಮೂರ್ತಿ, ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್), ಎನ್‌ಎಸ್‌ಎಸ್ ಅಧಿಕಾರಿ ಸೋಮಶೇಖರ್, ರೇಂಜರ‍್ಸ್ ಅಂಡ್ ರೋವರ‍್ಸ್ ಅಧಿಕಾರಿಗಳಾದ ವಿ. ಅನಿತಾ, ಕೆ.ಎಸ್ ಗಂಧರ್ವ, ಟಿ.ಎಸ್. ರಶ್ಮಿ, ವಸಂತಕುಮಾರ್ ಹಾಗು ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಭದ್ರಾವತಿ ಎಂಪಿಎಂ ಕಾರ್ಖಾನೆಯಲ್ಲಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಆಚರಿಸಲಾಯಿತು.
          ಎಂಪಿಎಂ ಕಾರ್ಖಾನೆಯಲ್ಲಿ ಸರ್‌ಎಂವಿ ದಿನಾಚರಣೆ:
      ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಆಚರಿಸಲಾಯಿತು.
      ಕಾರ್ಖಾನೆಯಲ್ಲಿರುವ ಸರ್‌ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ್, ಆಡಳಿತಾಧಿಕಾರಿ ಶ್ರೀನಿವಾಸ್, ಕಾರ್ಖಾನೆಯ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಆರ್. ರಘುನಾಥ್, ನಗರಾಡಳಿತಾಧಿಕಾರಿ ಸತೀಶ್,  ಕಾರ್ಮಿಕ ಸಂಘದ ಅಧ್ಯಕ್ಷ ಧರ್ಮಲಿಂಗ ಸ್ವಾಮಿ, ಕಾರ್ಯದರ್ಶಿ ದಿನೇಶ್, ಕಾರ್ಮಿಕ ಮುಖಂಡ ಎಸ್. ಚಂದ್ರಶೇಖರ್ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.