Friday, June 19, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ದತೆ : ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ವಿದ್ಯಾರ್ಥಿಗಳಿಗೆ ಕರೆ 

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ
ಭದ್ರಾವತಿ, ಜೂ. ೧೯: ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ,  ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಜೂ.೨೫ ರಿಂದ ಜು.೩ರವರೆಗೆ ತಾಲೂಕಿನ ನಗರ ವ್ಯಾಪ್ತಿಯ ೮ ಹಾಗೂ ಗ್ರಾಮಾಂತರ ವ್ಯಾಪ್ತಿಯ ೭ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಯಲ್ಲಿ ಒಂದು ಬೆಂಚಿನಲ್ಲಿ ತಲಾ ಇಬ್ಬರಂತೆ ಕನಿಷ್ಠ ೧೮ ರಿಂದ ೨೦ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು  ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಲ್ಲಿ ಪರಿಸ್ಥಿತಿ ಎದುರಿಸಲು ಮೂರು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದರು.
ತಾಲ್ಲ್ಲೂಕಿನ ವಿವಿಧ ಭಾಗದ ಒಟ್ಟು ೨೫೯ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಖಾಸಗಿ ಶಾಲೆಗಳ ೧೫ ಬಸ್ಸುಗಳನ್ನು ಸಾರಿಗೆ ಸಂಪರ್ಕಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ಜೊತೆ ಮಾಸ್ಕ್ ಉಚಿತವಾಗಿ ವಿತರಿಸಲಾಗುತ್ತಿದ್ದು, ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ನಡೆಸುವ ತಪಾಸಣೆಯಲ್ಲಿ ಕೆಮ್ಮು, ಶೀತ, ನೆಗಡಿ, ಜ್ವರ ಸೇರಿದಂತೆ ಯಾವುದೇ ರೀತಿಯ ಲಕ್ಷಣಗಳು  ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಪ್ರತಿಯೊಂದು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೊರ ಜಿಲ್ಲೆಗಳ ೭೭ ವಿದ್ಯಾರ್ಥಿಗಳು ತಾಲೂಕಿನಲ್ಲಿ  ಹಾಗೂ ತಾಲೂಕಿನ ೧೨೦ ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಟೈಪಿಂಗ್, ಜೆರಾಕ್ಸ್ ಅಂಗಡಿಗಳು ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರರು ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ೨೦೦ ಮೀ ವ್ಯಾಪ್ತಿಯೊಳಗೆ ೪ ಜನರಿಗಿಂತ ಹೆಚ್ಚಿನ ಜನರು ಸೇರದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ ಎಂದರು.
ಉಳಿದಂತೆ ಒಟ್ಟಾರೆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯುವ ನಿಟ್ಟಿನಲ್ಲಿ ಸಹಕಾರಿಯಾಗುವಂತೆ ಆತ್ಮವಿಶ್ವಾಸ ತುಂಬುವ, ಗೊಂದಲಗಳನ್ನು ನಿವಾರಿಸುವ, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಎಲ್ಲಾ ಕ್ರಮಗಳನ್ನು ಇಲಾಖೆವತಿಯಿಂದ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವ ವಿಶ್ವಾಸವಿದೆ ಎಂದರು. ಕಚೇರಿ ವ್ಯವಸ್ಥಾಪಕ ಕಾಂತ್‌ರಾಜ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್ ಉಪಸ್ಥಿತರಿದ್ದರು.

ಎಪಿಎಂಸಿ ಅಧ್ಯಕ್ಷರಾಗಿ ಲವೇಶ್‌ಗೌಡ ಪುನರ್ ಆಯ್ಕೆ, ಉಪಾಧ್ಯಕ್ಷರಾಗಿ ರಾಜಾನಾಯ್ಕ

ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಲವೇಶ್‌ಗೌಡ ಶುಕ್ರವಾರ ನಡೆದ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ರಾಜಾನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಭದ್ರಾವತಿ, ಜೂ. ೧೯: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಲವೇಶ್‌ಗೌಡ ಶುಕ್ರವಾರ ನಡೆದ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗಿದ್ದಾರೆ. 
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲವೇಶ್‌ಗೌಡ ಪುನರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷೆಯಾಗಿದ್ದ  ರತ್ನಮ್ಮರವರ ಸ್ಥಾನಕ್ಕೆ ಗೋಣಿಬೀಡಿನ ಜೆಡಿಎಸ್ ಪಕ್ಷದ ರಾಜಾನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಪಿಎಂಸಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದಿದ್ದು, ಸರದಿಯಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಿರ್ದೇಶಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದಲ್ಲಿ ಮುಂದು ವರೆದಿದ್ದಾರೆ. ಆದರೆ ಈ ಬಾರಿ ಉಪಾಧ್ಯಕ್ಷ ಸ್ಥಾನದಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ತಹಸೀಲ್ದಾರ್ ಶಿವಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಡಾ. ಎನ್.ಟಿ.ಸಿ ನಾಗೇಶ್, ಜಯರಾಮ್, ಸತೀಶ್, ರತ್ನಮ್ಮ ಮುಖಂಡ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಹಕ್ಕುಪತ್ರ ವಿತರಣೆ, ಖಾತೆ ಮಾಡುವಲ್ಲಿ ಅವ್ಯವಹಾರ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕರಾವೇ ಆಗ್ರಹ

ವಸತಿ ಯೋಜನೆ ಹಾಗೂ ೯೪ಸಿ ಯೋಜನೆಯಡಿ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಹಕ್ಕುಪತ್ರ  ವಿತರಣೆ ಹಾಗೂ ಖಾತೆ ಮಾಡುವಲ್ಲಿ ಅವ್ಯವಹಾರ ನಡೆದಿದ್ದು,  ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೧೯: ವಸತಿ ಯೋಜನೆ ಹಾಗೂ ೯೪ಸಿ ಯೋಜನೆಯಡಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಹಕ್ಕುಪತ್ರ  ವಿತರಣೆ ಹಾಗೂ ಖಾತೆ ಮಾಡುವಲ್ಲಿ ಅವ್ಯವಹಾರ ನಡೆದಿದ್ದು,  ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಕೂಡ್ಲಿಗೆರೆ ಹೋಬಳಿ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೫-೧೬ನೇ ಸಾಲಿನಿಂದ ೨೦೧೯-೨೦ರ ವರೆಗೆ ೯೪ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರ ಸ್ಥಳ, ಜಾಗದ ಭಾವಚಿತ್ರ ಹಾಗೂ ಹಳೇಯ ಮನೆಗಳನ್ನು ಪರಿಶೀಲಿಸದೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಅಲ್ಲದೆ ಈ ಹಕ್ಕುಪತ್ರಗಳಿಗೆ ಪಂಚಾಯಿತಿಯಲ್ಲಿ ಬೇಕಾಬಿಟ್ಟಿಯಾಗಿ ಖಾತೆ ಮಾಡಿ ಕೊಡಲಾಗಿದೆ. ಮನೆಗಳನ್ನು ಮಂಜೂರು ಮಾಡಿಕೊಡುವ ಮೊದಲು ಅಡಮಾನ ಪತ್ರ  ನೋಂದಾಣಿ ಮಾಡಿಸಿರುವುದಿಲ್ಲ. ಅನುಭವದ ಆಧಾರದಲ್ಲಿ ನಿರ್ಗತಿಕರಿಗೆ ಜಾಗ ನೀಡುವ ಬದಲು ಉಳ್ಳವರಿಗೆ ನೀಡಲಾಗಿದೆ. ಬೇರೆಡೆ ಮನೆ ಮತ್ತು ಜಮೀನು ಇದ್ದರೂ ಸಹ ಹಕ್ಕುಪತ್ರ ನೀಡಿ, ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು. 
ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣದ ಮಂಜೂರಾತಿ ಪಡೆದಿರುವ ಫಲಾನುಭವಿಗಳು ಸುಮಾರು ೨೦ ರಿಂದ ೩೦ ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಈ ಮನೆಗಳ ಮುಂದೆ ಸರ್ಕಾರದ ಯೋಜನೆಯ ನಾಮಫಲಕ ಅಳವಡಿಸದೆ ಹಾಗೂ ಸರ್ಕಾರ ನಿಗದಿಪಡಿಸಿರುವ ೫ ಲಕ್ಷ ರು. ಒಳಗಿನ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ. ಆರ್ಥಿಕವಾಗಿ ಸದೃಢರಾಗಿರುವವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರದ ೧.೫ ಲಕ್ಷ ರು. ಆರ್ಥಿಕ ನೆರವಿನ ಅವಶ್ಯಕತೆ ಇರುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ ಅವ್ಯವಹಾರ ನಡೆದಿರುವುದು ಕಂಡು ಬರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಕರಾವೇ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಸಂದೇಶ್‌ಕುಮಾರ್, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಶಿವು, ಟೋನಿ, ರಮೇಶ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯುವ ನಾಯಕ ರಾಹುಲ್ ಗಾಂಧಿ ಜನ್ಮ ದಿನ : ಹಣ್ಣು, ದಿನಸಿ ಸಾಮಗ್ರಿ ವಿತರಣೆ

ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ರಾಹುಲ್‌ಗಾಂಧಿ ಜನ್ಮ ದಿನವನ್ನು ಶುಕ್ರವಾರ ಕಾಗದನಗರದ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ಸರಳವಾಗಿ ಆಚರಿಸಲಾಯಿತು. 
ಭದ್ರಾವತಿ, ಜೂ. ೧೯: ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ರಾಹುಲ್‌ಗಾಂಧಿ ಜನ್ಮ ದಿನವನ್ನು ಶುಕ್ರವಾರ ಕಾಗದನಗರದ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ಸರಳವಾಗಿ ಆಚರಿಸಲಾಯಿತು. 
ಕೊರೋನಾ ಮಹಾಮಾರಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರುವ ಮೂಲಕ ರಾಹುಲ್‌ಗಾಂಧಿ ಜನ್ಮ ದಿನವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷವಾಗಿ ಆಚರಿಸಿ ಹಿರಿಯ ನಾಗರಿಕರ ಆರೈಕೆ ಕೇಂದ್ರಕ್ಕೆ ಹಣ್ಣು ಹಾಗೂ ಅಗತ್ಯವಿರುವ ದಿನಸಿ ಸಾಮಗ್ರಿ ವಿತರಿಸಲಾಯಿತು. 
ಶಾಸಕ ಬಿ.ಕೆ ಸಂಗಮೇಶ್ವರ್ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷೆ ಮಂಜುಳ ರಾಮಚಂದ್ರ, ಎಸ್‌ಸಿ ವಿಭಾಗದ ರಾಜ್ಯ ಸಂಚಾಲಕ ಬಿ.ಪಿ ರಾಘವೇಂದ್ರ, ತಾಲೂಕು ಅಧ್ಯಕ್ಷ ಅಧ್ಯಕ್ಷ ಅರುಣ್, ಉಪಾಧ್ಯಕ್ಷ ಮಹೇಶ್, ಯುವ ಘಟಕದ ಅಧ್ಯಕ್ಷ ವಿನೋದ್‌ಕುಮಾರ್, ಮುಖಂಡರಾದ ಜಯರಾಜ್, ಬಿ.ಟಿ ನಾಗರಾಜ್, ಪ್ರಾನ್ಸಿಸ್, ಮುಕುಂದಪ್ಪ, ಪ್ರಕಾಶ್‌ರಾವ್, ವಿಲ್ಸನ್, ಅಣ್ಣೋಜಿರಾವ್, ರಘು, ರೂಪನಾರಾಯಣ್ ಹಾಗೂ ಆರೈಕೆ ಕೇಂದ್ರದ ಮೇಲ್ವಿಚಾರಕಿ ಸವಿತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

೫೦ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ಭದ್ರಾವತಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಸಂಸದರ ನಿಧಿಯಿಂದ ಮಂಜೂರಾದ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶಾಸಕ ಬಿ.ಕೆ.ಸಂಗಮೇಶ್ವರ ನೆರವೇರಿಸಿದರು.
ಭದ್ರಾವತಿ, ಜೂ. ೧೯:   ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಸಂಸದರ ನಿಧಿಯಿಂದ ಮಂಜೂರಾದ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶಾಸಕ ಬಿ.ಕೆ.ಸಂಗಮೇಶ್ವರ ನೆರವೇರಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಕಾರ್ಯದರ್ಶಿ ಶಿವಕುಮಾರ್, ಬಿ.ಕೆ. ಜಗನ್ನಾಥ್, ಸುರೇಶ್, ರುದ್ರಪ್ಪ, ಷಣ್ಮುಖಪ್ಪ, ಎಂ.ವಾಗೀಶ್ ಕೋಠಿ, ಚನ್ನೇಶ್ ಕುಮಾರ್, ಚನ್ನೇಶ್, ಸಿದ್ದಲಿಂಗಯ್ಯ, ಶಿವಯೋಗಿ ಮಠದ್, ಆಡವೀಶಯ್ಯ, ಡಾ.ಎಸ್.ಎಸ್ ವಿಜಯಾದೇವಿ, ನಾಗರತ್ನ, ಕಲ್ಪನ, ಸುಜಾತ, ನಾಗರತ್ನ, ಯಶೋಧ, ಪ್ರಭಾಕರ್, ಮಂಗೋಟೆ ರುದ್ರೇಶ್, ಮಂಜುನಾಥ್, ರಾಮನಾಥ್ ಬರ್ಗೆ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಮಹೇಶ್ವರಯ್ಯ, ವೇ.ಚಿನ್ನಯ್ಯ ಹಿರೇಮಠ್ ಮತ್ತು ಶಂಕರಯ್ಯ ಹಿರೇಮಠ್ ರವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.