Saturday, January 22, 2022

ತಮಿಳು ಸಮಾಜದ ಮುಖಂಡರಿಂದ ಸಂಸದರಿಗೆ ಅಭಿನಂದನೆ


ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ೨ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಗರದ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ತಮಿಳು ಸಮಾಜದ ಮುಖಂಡ ವಿ. ಕದಿರೇಶ್ ನೇತೃತ್ವದಲ್ಲಿ ತಮಿಳು ಸಮಾಜದ ಮುಖಂಡರು ಸಂಸದ ಬಿ.ವೈ ರಾಘವೇಂದ್ರರನ್ನು ಶುಕ್ರವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಜ. ೨೨: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ೨ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಗರದ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ತಮಿಳು ಸಮಾಜದ ಮುಖಂಡ ವಿ. ಕದಿರೇಶ್ ನೇತೃತ್ವದಲ್ಲಿ ತಮಿಳು ಸಮಾಜದ ಮುಖಂಡರು ಸಂಸದ ಬಿ.ವೈ ರಾಘವೇಂದ್ರರನ್ನು ಶುಕ್ರವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.
    ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ನಗರಸಭಾ ಸದಸ್ಯರಾದ ವಿ. ಕದಿರೇಶ್ ಈ ಹಿಂದಿನ ಅವಧಿಯಲ್ಲೂ ಸೂಡಾ ಸದಸ್ಯರಾಗಿ ನೇಮಕಗೊಂಡಿದ್ದರು. ಇದೀಗ ಪುನಃ ೨ನೇ ಬಾರಿ ಆಯ್ಕೆಯಾಗಿದ್ದು, ತಮಿಳು ಸಮಾಜದವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಸದ ಬಿ.ವೈ ರಾಘವೇಂದ್ರರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ತಮಿಳು ಸಮಾಜದ ಪ್ರಮುಖರಾದ ಎಂ. ರಾಜು, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಹಿರಿಯ ಪತ್ರಕರ್ತ ಕಣ್ಣಪ್ಪ, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಯುವ  ಮುಖಂಡ ಕೆ. ಮಂಜುನಾಥ್, ಬಿಎಸ್‌ಪಿ ಪಕ್ಷದ ತಾಲೂಕು ಅಧ್ಯಕ್ಷ ರಹಮತುಲ್ಲಾಖಾನ್(ಸರದಾರ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾವಿರದ ಗಡಿದಾಟಿದ ಕೊರೋನಾ : ಒಂದೇ ದಿನ ೧೬೧ ಸೋಂಕು

ಪರಿಣಾಮ ಕಡಿಮೆ, ಸಾವು ಶೂನ್ಯ


    ಭದ್ರಾವತಿ, ಜ. ೨೨: ಕೊರೋನಾ ೩ನೇ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ ೧೬೧ ಸೋಂಕು ದೃಢಪಟ್ಟಿವೆ. ಈ ಮೂಲಕ ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
    ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದುವರೆಗೂ ಸೋಂಕಿಗೆ ಒಳಗಾದವರ ಸಂಖ್ಯೆ ೧೧೧೧ಕ್ಕೆ ತಲುಪಿದೆ. ಆದರೆ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ. ತಾಲೂಕಿನಲ್ಲಿ ಒಟ್ಟು ೪ ಕಂಟೈನ್‌ಮೆಂಟ್ ಝೋನ್‌ಗಳಿದ್ದು,  ಈ ಹಿಂದೆ ಗರಿಷ್ಠ ೫ ಸೋಂಕುಗಳು ಕಂಡು ಬಂದಲ್ಲಿ ಆ ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ಝೋನ್ ಪ್ರದೇಶವಾಗಿ ಘೋಷಿಸಲಾಗುತ್ತಿತ್ತು. ಸೋಂಕಿನ ಪರಿಣಾಮ ಕಡಿಮೆ ಇರುವ ಹಿನ್ನಲೆಯಲ್ಲಿ ಇದೀಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡ ವ್ಯಾಪ್ತಿಯಲ್ಲಿ ಮಾತ್ರ ಕಂಟೈನ್‌ಮೆಂಟ್ ಝೋನ್ ಮಾಡಲಾಗುತ್ತಿದೆ.
    ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಲ್ಲಿ ಹಾಗು ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ, ಶಾಲಾ-ಕಾಲೇಜುಗಳ ಶಿಕ್ಷಕರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಹೆಚ್ಚಿನ ಆತಂಕ ಉಂಟಾಗಿದೆ. ಕೊರೋನ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಹಕಾರದೊಂದಿಗೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ಆಡಳಿತಗಳು  ಅಗತ್ಯ ಕ್ರಮ ಕೈಗೊಳ್ಳುತ್ತಿವೆ.

ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿ ಆರಂಭ

೩೫ ಕೋ. ರು. ವೆಚ್ಚ, ೬ ತಿಂಗಳು ಕಾಲಾವಕಾಶ


ಭದ್ರಾವತಿ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್‌ಓಬಿ) ಕಾಮಗಾರಿ ಆರಂಭಗೊಂಡಿದ್ದು, ಹೈದರಬಾದಿನ ಮೆ|| ಎಸ್‌ಆರ್‌ಸಿ ಕಂಪನಿ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದೆ.
    ಭದ್ರಾವತಿ, ಜ. ೧೭: ನಗರದ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್‌ಓಬಿ) ಕಾಮಗಾರಿ ಆರಂಭಗೊಂಡಿದ್ದು, ಹೈದರಬಾದಿನ ಮೆ|| ಎಸ್‌ಆರ್‌ಸಿ ಕಂಪನಿ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದೆ.
    ಈ ಹಿಂದೆ ತರೀಕೆರೆ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣದ ಆರಂಭದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಗೊಂಡರೂ ಸಹ ನಂತರ ದಿನಗಳಲ್ಲಿ ಮಂದಗತಿಯಲ್ಲಿ ಸಾಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಕಾಮಗಾರಿ ನಿರ್ವಹಣೆ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಸಹ ಅಧಿಕಗೊಂಡಿತ್ತು. ಜೊತೆಗೆ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.
    ಇದೀಗ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗ್ರೇಟ್ ನಂ.೩೪ರಲ್ಲಿ ಸುಮಾರು ೩೫ ಕೋ. ರು. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ೬ ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕಾಗಿದೆ. ಮುಂದಿನ ೩-೪ ತಿಂಗಳಲ್ಲಿ ಕಾಮಗಾರಿ ಶೇ.೭೦ರಷ್ಟು ಪ್ರಗತಿಸಾಧಿಸಬೇಕಾಗಿದೆ. ನಂತರ ಮಳೆಗಾಲ ಆರಂಭಗೊಳ್ಳುವುದರಿಂದ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.


ಭದ್ರಾವತಿ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್‌ಓಬಿ) ಕಾಮಗಾರಿ ಆರಂಭಗೊಂಡಿದ್ದು, ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅಳವಡಿಸಲಾಗಿರುವ ಫಲಕ.
    ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ  ಪ್ರಮುಖ ರಸ್ತೆ ಇದಾಗಿದೆ. ಈಗಾಗಲೇ ಬಿ.ಎಚ್ ರಸ್ತೆ ಅಗಲೀಕರಣ ಕಾರ್ಯ ಸಹ ನಡೆದಿದ್ದು, ರೈಲ್ವೆ ಮೇಲ್ಸೇತುವೆ ತ್ವರಿತಗತಿಯಲ್ಲಿ ಪೂರ್ಣಗೊಂಡಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ.
    ತಾತ್ಕಾಲಿಕ ಪರ್ಯಾಯ ಮಾರ್ಗ:
  ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಈಗಾಗಲೇ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
    ಜಿಲ್ಲಾಧಿಕಾರಿಗಳ ಆದೇಶದಂತೆ ದ್ವಿಚಕ್ರ ವಾಹನಗಳು ಹೊರತುಪಡಿಸಿ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಬಿಳಕಿ ಕ್ರಾಸ್, ಕೃಷ್ಣಪ್ಪ ವೃತ್ತದ ಮೂಲಕ ಭದ್ರಾವತಿ ತಲುಪುವುದು. ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಅಂಡರ್ ಬ್ರಿಡ್ಜ್, ಉಂಬ್ಳೆಬೈಲ್ ರಸ್ತೆ, ಕೃಷ್ಣಪ್ಪ ವೃತ್ತ, ರಾಷ್ಟ್ರೀಯ ಹೆದ್ದಾರಿ ೬೯ರ ಮೂಲಕ ಶಿವಮೊಗ್ಗ ತಲುಪುವುದು.
    ವೇಗ ಮಿತಿ ಕಡಿತಗೊಳಿಸಿ :
     ಪ್ರಸ್ತುತ ಕೃಷ್ಣಪ್ಪ ವೃತ್ತದಿಂದ ಅಂಡರ್‌ಬ್ರಿಡ್ಜ್‌ವರೆಗೂ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದ್ದು, ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಲಿದೆ. ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು, ಚರ್ಚ್‌ಗಳು, ಲಯನ್ಸ್, ರೋಟರಿ ಸೇರಿದಂತೆ ಸಂಘ-ಸಂಸ್ಥೆಗಳು, ಬ್ಯಾಂಕ್, ಮೆಸ್ಕಾಂ, ಎಲ್‌ಐಸಿ ಕಛೇರಿಗಳು ಇದ್ದು ಜನದಟ್ಟಣೆ ಸಹ ಅಧಿಕವಾಗಿದೆ.  ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ವೇಗ ಮಿತಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕಾಗಿದೆ. ಜೊತೆಗೆ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸರನ್ನು ಕಡ್ಡಾಯವಾಗಿ ನಿಯೋಜನೆಗೊಳಿಸುವ ಮೂಲಕ ವಾಹನ ದಟ್ಟಣೆ ನಿಯಂತ್ರಿಸಬೇಕಾಗಿದೆ. ಇಲ್ಲವಾದಲ್ಲಿ ಅಪಘಾತಗಳು ಹೆಚ್ಚಾಗುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.
    ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಿ:
    ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿರುವುದರಿಂದ ಸಮೀಪದಲ್ಲಿರುವ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸುವುದು ಸೂಕ್ತವಾಗಿದೆ. ಈಗಾಗಲೇ ಸಮೀಪದಲ್ಲಿರುವ ನಿವಾಸಿಗಳಿಂದ ಭೂ ಸ್ವಾಧೀನ ಪಡೆದುಕೊಳ್ಳಲಾಗಿದ್ದು, ಭೂ ಪರಿಹಾರ ನೀಡಲಾಗಿದೆ. ಅಲ್ಲದೆ ನಿವಾಸಿಗಳಿಗೆ ಪರ್ಯಾಯವಾಗಿ ವಸತಿ ನಿರ್ಮಾಣಕ್ಕೆ ನಿವೇಶನ ಸಹ ಕಲ್ಪಿಸಿಕೊಡಲಾಗಿದೆ. ಆದರೂ ಸಹ ನಿವಾಸಿಗಳು ಇನ್ನೂ ತೆರವುಗೊಂಡಿಲ್ಲ. ಒಂದು ವೇಳೆ ಅವಘಡಗಳು ಸಂಭವಿಸಿದ್ದಲ್ಲಿ ಗುತ್ತಿಗೆದಾರರು ಹೊಣೆಗಾರರಾಗಬೇಕಾಗುತ್ತದೆ.