Wednesday, May 7, 2025

ಮನೆಗಳ್ಳತನ ಪ್ರಕರಣ : ಓರ್ವನ ಸೆರೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ ಮನೆಯೊಂದರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನ್ಯೂಟೌನ್ ಠಾಣೆಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ ಮನೆಯೊಂದರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನ್ಯೂಟೌನ್ ಠಾಣೆಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಮೇ.೨ ರಂದು ರಾತ್ರಿ ಮನೆಯ ಸಿಮೆಂಟ್ ಮೇಲ್ಛಾವಣಿಯನ್ನು ಒಡೆದು ಹಾಕಿ ಒಳಗೆ ಪ್ರವೇಶಿಸಿ ಸುಮಾರು ೧.೧೨ ಲಕ್ಷ ರು. ಮೌಲ್ಯದ ಬಂಗಾರದ ಆಭರಣ, ವಾಚ್ ಮತ್ತು ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. 
    ಪ್ರಕರಣ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ. ಜಿ. ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ ಉಪ ವಿಭಾಗದ ಉಪ ಅಧೀಕ್ಷಕ ಕೆ ಆರ್. ನಾಗರಾಜುರವರ ಮಾಗದರ್ಶನದಲ್ಲಿ  ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ ರಮೇಶ್‌ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಟಿ.ಪಿ ಮಂಜಪ್ಪ, ನವೀನ್ ಮತ್ತು ನಾಗರಾಜ್ ರವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. 
    ತನಿಖಾ ತಂಡ ಆರೋಪಿ, ಮೀನುಗಾರರ ಬೀದಿಯ ನಿವಾಸಿ ಪಿ. ಜೈಕಾಂತ್(೨೧) ಈತನನ್ನು ಬಂಧಿಸಿ ಅಂದಾಜು ೧.೧೨ ಲಕ್ಷ ರು. ಮೌಲ್ಯದ ೧೧ ಗ್ರಾಂ ೩೦೦ ಮಿಲಿ ತೂಕದ ಬಂಗಾರದ ಅಭರಣ, ಒಂದು ವಾಚ್, ೨ ಸಾವಿರ ರು. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಪ್ಪೋ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. 

ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸಿ.ಎಂ ರಮೇಶ್ರಿಗೆ ಸನ್ಮಾನ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ (ಜಂಕ್ಷನ್) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಚಾರಕ ಸಿ.ಎಂ ರಮೇಶ್ ಅವರ ಅತ್ಯುತ್ತಮ ಸೇವೆ ಸ್ಮರಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ತಾಲೂಕಿನ ಹುಣಸೇಕಟ್ಟೆ (ಜಂಕ್ಷನ್) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಚಾರಕ ಸಿ.ಎಂ ರಮೇಶ್ ಅವರ ಅತ್ಯುತ್ತಮ ಸೇವೆ ಸ್ಮರಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ವಿದ್ಯಾರ್ಥಿ ನಿಲಯದ ಎಲ್ಲಾ ೮ ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ರಮೇಶ್‌ರವರು ಸಕಾಲದಲ್ಲಿ ಕೈಗೊಂಡ ಕ್ರಮ ಮತ್ತು ಶ್ರಮ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರ ಮತ್ತು ಅಡುಗೆ ಸಿಬ್ಬಂದಿಗಳ ಎರಡು ದಿನಗಳ ವಿಶೇಷ ಪುನಶ್ಚೇತನ ಕಾರ್ಯಾಗಾರದಲ್ಲಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಂಗಳೂರಿನ ಉಪ ನಿರ್ದೇಶಕಿ ಭವ್ಯ, ಜಿಲ್ಲಾ ಅಧಿಕಾರಿ ಶೋಭಾ, ಆಹಾರ ಇಲಾಖೆಯ ಉಪ ನಿರ್ದೇಶಕ ಹವೀನ್, ತಾಲೂಕು ಕಲ್ಯಾಣಾಧಿಕಾರಿ ಕೆ.ಎಸ್ ಶೈಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ವಿಜೃಂಭಣೆಯಿಂದ ಜರುಗಿದ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್‌ಕುಮಾರ್ ಅವರ ನೇತೃತ್ವದಲ್ಲಿ ಸ್ವಸ್ತೀಶ್ರೀ ವಿಜಯಾಭ್ಯುದಯ ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ವಸಂತಋತು ವೈಶಾಖ ಶುದ್ಧ ದಶಮಿಯಂದು ಬೆಳಿಗ್ಗೆ ೯ ಗಂಟೆಯಿಂದ ಕಲ್ಯಾಣೋತ್ಸವ ಆರಂಭಗೊಂಡಿತು. ಮಧ್ಯಾಹ್ನ ೧.೩೦ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. 
    ಕಲ್ಯಾಣೋತ್ಸವದ ಅಂಗವಾಗಿ ದೇವಸ್ಥಾನದ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮಿಲ್ಟ್ರಿಕ್ಯಾಂಪ್, ಹುಡ್ಕೋಕಾಲೋನಿ, ಬುಳ್ಳಾಪುರ, ಸಿದ್ದಾಪುರ, ನ್ಯೂಟೌನ್, ವಿದ್ಯಾಮಂದಿರ, ಜನ್ನಾಪುರ, ಆಂಜನೇಯ ಅಗ್ರಹಾರ, ಜೆಪಿಎಸ್ ಕಾಲೋನಿ, ಸುರಗಿತೋಪು, ಕಾಗದನಗರ, ಉಜ್ಜನಿಪುರ, ಆನೇಕೊಪ್ಪ, ಬೊಮ್ಮನಕಟ್ಟೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.