Saturday, August 26, 2023

ವೇಳಾಂಗಣಿ ಮಾತೆ ಪುಣ್ಯ ಕ್ಷೇತ್ರದಲ್ಲಿ ಆ.೨೯ರಿಂದ ಮಾತೆಯ ಮಹೋತ್ಸವ : ಫಾದರ್ ಸ್ಟೀವನ್ ಡೇಸಾ

ಭದ್ರಾವತಿ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ಮಾತೆಯ ಮಹೋತ್ಸವ ಆಚರಣೆ ಕುರಿತು ದೇವಾಲಯದ ಧರ್ಮ ಗುರು  ಫಾದರ್ ಸ್ಟೀವನ್ ಡೇಸಾ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ, ಆ. ೨೬:  ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ಮಾತೆಯ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಾಲಯದ ಧರ್ಮ ಗುರು  ಫಾದರ್ ಸ್ಟೀವನ್ ಡೇಸಾ ಹೇಳಿದರು.
    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಮಾತೆಯ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮಹೋತ್ಸವದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ವಾರ್ಷಿ ಮಹೋತ್ಸವ ನಡೆಯಲಿದೆ. ಈ ಸಂಬಂಧ ಪ್ರತಿ ದಿನ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
    ಆ.೨೯ರಂದು ಸಂಜೆ ೫.೩೦ಕ್ಕೆ ಧ್ವಜಾರೋಹಣ ನಡೆಯಲಿದ್ದು, ಮೇರಿ ಮಾತೆ : ಸ್ತ್ರೀಯರಲ್ಲೆಲ್ಲಾ ಧನ್ಯರು ನೀವು  ಮತ್ತು  ೩೦ರಂದು ಮೇರಿ ಮಾತೆ : ಧರ್ಮಸಭೆಯ ಶ್ರೀಮಾತೆ ಹಾಗು  ೩೧ರಂದು ಮೇರಿ ಮಾತೆ : ದಂಪತಿಗಳ ಮಾರ್ಗದರ್ಶಕಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.
    ಸೆ.೧ರಂದು ಮೇರಿ ಮಾತೆ: ಮಕ್ಕಳಿಗೆ ಆಶ್ರಯದಾತೆ, ೨ರಂದು ಮೇರಿ ಮಾತೆ : ಮಹಿಳೆ ಮತ್ತು ಹೆಣ್ಣು ಮಗುವಿನ ಚೇತನ, ೩ರಂದು ಮೇರಿ ಮಾತೆ : ಯುವ ಜನತೆಯ ಆಶಾಕಿರಣ, ೪ರಂದು ಮೇರಿ ಮಾತೆ : ವ್ಯಾದಿಷ್ಠರಿಗೆ ಸೌಖ್ಯದಾತೆ,  ೫ರಂದು ಮೇರಿಮಾತೆ: ಶಿಕ್ಷಕರ ಪ್ರೋತ್ಸಾಹ ದಾತೆ, ೬ರಂದು ಮೇರಿ ಮಾತೆ : ಧಾರ್ಮಿಕ ಸಂಗಾತಿ, ೭ರಂದು ಮೇರಿ ಮಾತೆ : ಯಾತ್ರಿಕರ ಆಶ್ರಯದಾತೆ ಹಾಗು ೮ರಂದು ಮೇರಿ ಮಾತೆ : ಸ್ತ್ರೀಯರಲ್ಲೆಲ್ಲಾ ಧನ್ಯರು ನೀವು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
    ಸೆ.೩ರಂದು ಬೆಳಿಗ್ಗೆ ೮.೩೦ ರಿಂದ ಸಂಜೆ ೭ ಗಂಟೆವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ ಮತ್ತು ನವೇನ, ಬಲಿಪೂಜೆ ನಡೆಯಲಿದ್ದು, ಶಿವಮೊಗ್ಗ ಧರ್ಮಕ್ಷೇತ್ರದ ವಂದನೀಯ ರೋಮನ್ ಪಿಂಟೊ ಪ್ರಬೋಧಕರಾಗಿ ಆಗಮಿಸಲಿದ್ದಾರೆ.  ೭ರಂದು ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ, ಸಂಜೆ ೬.೩೦ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾತೆಯ ಅಲಂಕೃತ ತೇರಿನ ಭಕ್ತಿಯುತ ಮೆರವಣಿಗೆ ನಡೆಯಲಿದೆ. ೮ರಂದು ಮಾತೆಯ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೭, ೮.೩೦, ೧೦ ಮತ್ತು ೧೧ ಗಂಟೆಗೆ ಪೂಜೆಗಳು, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹೋತ್ಸವ ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಮುಖರಾದ ಅಂತೋನಿ ವಿಲ್ಸನ್, ಎಲಿಜಾ ಲಾರೆನ್ಸ್, ಫಿಲೋಮಿನಾ ಫಿಲಿಪ್ಸ್, ಅನಿಲ್ ಡಿಸೋಜಾ, ಜೆಸ್ಸಿಗೋನ್ಸಾಲಿನ್ಸ್, ಪೌಲ್ ಡಿಸೋಜಾ ಮತ್ತು  ಜಾಕಬ್ ಒರಿಯನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಿಲ್ಲಿ ಇಸ್ರಾಯೆಲ್‌ನಿಧನ

ಪಿಲ್ಲಿ ಇಸ್ರಾಯೆಲ್‌
    ಭದ್ರಾವತಿ, ಆ. ೨೬: ನಗರದ ಉಜ್ಜನಿಪುರ ನಿವಾಸಿ, ಎಂಪಿಎಂ ನಿವೃತ್ತ ಗುತ್ತಿಗೆ ಕಾರ್ಮಿಕ ಪಿಲ್ಲಿ ಇಸ್ರಾಯೆಲ್‌(೬೦) ನಿಧನ ಹೊಂದಿದರು.
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದರು. ಹೃದಯಾಘಾತದಿಂದ ನಿಧನ ಹೊಂದಿದ್ದು, ನಗರದ ಬೈಪಾಸ್‌ರಸ್ತೆ ಮಿಲ್ಟ್ರಿಕ್ಯಾಂಪ್‌ಬಳಿ ಇರುವ ಪ್ರೊಟೆಸ್ಟೆಂಟ್‌ಕ್ರೈಸ್ತ ಸಮಾದಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಿತು.
 ಇಸ್ರಾಯೆಲ್‌ರವರು ಎಂಪಿಎಂ ಗುತ್ತಿಗೆ ಕಾರ್ಮಿಕ ಸಂಘದ ಸಮಿತಿ ಸದಸ್ಯರಾಗಿ ಹಾಗು ಸುಮಾರು ೧೦ ವರ್ಷಗಳಿಂದ ಬುಳ್ಳಾಪುರ ಸಿಎಸ್‌ಐ ತೆಲುಗು ಜೂಬ್ಲಿ ಚರ್ಚ್‌ಸಮಿತಿ ಸದಸ್ಯರಾಗಿ  ಸೇವೆ ಸಲ್ಲಿಸಿದ್ದರು.
    ಇತ್ತೀಚೆಗೆ ನ್ಯೂಟೌನ್‌ಸೈಂಟ್‌ಚಾರ್ಲ್ಸ್‌ಶಾಲೆಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಸಿಎಸ್‌ಐ ತೆಲುಗು ಜೂಬ್ಲಿ ಚರ್ಚ್‌ಸಭಾ ಪಾಲಕರಾದ ರೆವರೆಂಡ್‌ಬಾಬಿರಾಜ್‌, ಸಮಿತಿ ಸದಸ್ಯರಾದ ಸುವರ್ಣಮ್ಮ, ಇಟ್ಟೆ ಸಂತೋಷ್‌ಕುಮಾರ್‌, ಚಲ್ತುರಿ ಡ್ಯಾನಿಯೆಲ್‌ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೫ರಂದು ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ

    ಭದ್ರಾವತಿ, ಆ. ೨೬ : ಹಳೇನಗರದ ಶ್ರೀ ಬಸವೇ‍ಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ವತಿಯಿಂದ ಸೆ.೫ರಂದು ಬೆಳಿಗ್ಗೆ ೧೦.೩೦ಕ್ಕೆ ಮನ ಮನೆಗೆ ಮಾಚಿದೇವ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಹಾಗು ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿ‍ಧ್ಯವಹಿಸಲಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್‌ ನೂತನ ಸಮುದಾಯ ಭವನ ಉದ್ಘಾಟಿಸಲಿದ್ದಾರೆ. ೨೦೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
    ಸೆ.೨ರೊಳಗೆ ಮಾಹಿತಿ ಸಲ್ಲಿಸಿ:
    ಪ್ರತಿಭಾವಂತ ವಿದ್ಯಾರ್ಥಿಗಳು ಸೆ.೨ರ ಸಂಜೆ ೫ ಗಂಟೆಯೊಳಗೆ ಅಂಕಪಟ್ಟಿ, ಭಾವಚಿತ್ರ ಮತ್ತು ಆಧಾರ್‌ ಕಾರ್ಡ್‌ ಪ್ರತಿಯನ್ನು ಸಂಘದ ಕಛೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೯೬೯೩೯೩೬೯ ಅಥವಾ ೯೯೭೨೭೧೭೦೦೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ.