Thursday, March 18, 2021

ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವ, ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಸತ್ಯಾಗ್ರಹ

ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಭದ್ರಾವತಿ, ಮಾ. ೧೮: ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಹಳೇಜೇಡಿಕಟ್ಟೆ ಸರ್ವೆ ನಂ.೭೮ರಲ್ಲಿ ಸುಮಾರು ೪೦ ವರ್ಷದ ೪-೫ ತೆಂಗಿನ ಮರಗಳನ್ನು ಮಾ.೧೬ರಂದು ಜಮೀನಿನ ಪಕ್ಕದ ನಿವೇಶನದ ಮಾಲೀಕ, ಅಂತರಗಂಗೆ ಗ್ರಾಮದ ನಿವಾಸಿ ನಾಗರಾಜ್ ಎಂಬುವರು ಕಡಿದು ಹಾಕಿದ್ದು, ಅಲ್ಲದೆ ಕೆಲವು ರೌಡಿಗಳೊಂದಿಗೆ ನಮ್ಮ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ವೆಸಗಿಸಿ ಜಾತಿನಿಂದನೆ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಲಾಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ರಾಜಕೀಯ ಪ್ರಭಾವ ಬೀರುವ ಮೂಲಕ ದೂರು ದಾಖಲಾಗದಂತೆ ಪೊಲೀಸ್ ಠಾಣಾಧಿಕಾರಿಗಳಿಗೇ ಬೆದರಿಕೆ ಹಾಕಲಾಗುತ್ತಿದೆ ಎಂದು ಪೂರ್ಣಿಮಾ ಆರೋಪಿಸಿದರು.
  ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವವರ ಹಾಗು ಅಕ್ರಮವಾಗಿ ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬದವರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ : ರಾಬರ್ಟ್ ನಾಯಕಿ ಆಶಾಭಟ್

ಭದ್ರಾವತಿ ಸತ್ಯ ಚಿತ್ರಮಂದಿರಕ್ಕೆ ಗುರುವಾರ ಸಂಜೆ ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿದರು.
   ಭದ್ರಾವತಿ, ಮಾ. ೧೮: ಕಲಾವಿದೆಗೆ ಭಾಷೆಯ ಪರಿವಿಲ್ಲ, ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಹೇಳಿದರು.
ಅವರು ಗುರುವಾರ ಸಂಜೆ ನಗರದ ಸಿ.ಎನ್ ರಸ್ತೆಯಲ್ಲಿರುವ ಸತ್ಯ ಚಿತ್ರಮಂದಿರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ರಾಬರ್ಟ್ ಚಿತ್ರ ವೀಕ್ಷಿಸುವ ಮೂಲಕ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
   ನಾನು ಹುಟ್ಟಿಬೆಳೆದ ಊರು ಭದ್ರಾವತಿ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಸಹ ಭದ್ರಾವತಿ ಹೆಸರನ್ನು ಹೇಳಿಕೊಂಡಿದ್ದೇನೆ. ಭದ್ರಾವತಿ ಎಂದರೆ ಹೆಮ್ಮೆ ಈಗಲೂ ಸಹ ಎಲ್ಲೆಡೆ ನನ್ನೂರು ಭದ್ರಾವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದರು.
    ಕಲಾವಿದೆಗೆ ಭಾಷೆಯ ಪರಿವಿಲ್ಲ. ನನಗೆ ಕನ್ನಡ ಹಾಗು ಕನ್ನಡಿಗರ ಬಗ್ಗೆ ಅಭಿಮಾನವಿದೆ. ರಾಬರ್ಟ್ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಈ ಚಿತ್ರ ವೀಕ್ಷಿಸಿದವರಿಗೆ ಇದರ ಅರಿವಾಗುತ್ತದೆ. ಒಂದು ಚಿತ್ರ ನಿರ್ಮಾಣದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಎಲ್ಲರೂ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಈ ಚಿತ್ರದ ಮೂಲಕ ಉತ್ತಮ ಭವಿಷ್ಯವಿದೆ ಎಂದರು.
    ತಂದೆ-ತಾಯಿ ಕುಟುಂಬ ಸದಸ್ಯರೊಂದಿಗೆ ಚಿತ್ರ ವೀಕ್ಷಣೆ:
ಸತ್ಯ ಚಿತ್ರಮಂದಿರದಲ್ಲಿ ೬ ಗಂಟೆಗೆ ಆರಂಭಗೊಂಡ ರಾಬರ್ಟ್ ಚಿತ್ರ ಪ್ರದರ್ಶನವನ್ನು ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಹಾಗು ಕುಟುಂಬ ಸದಸ್ಯರ ಜೊತೆ ವೀಕ್ಷಿಸಿ ಸಂಭ್ರಮಿಸಿದರು.
     ಜನ್ಮದಿನ ಆಚರಣೆ:
    ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.



ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.

ಸೇವಾ ಕಾರ್ಯಗಳಲ್ಲಿ ಭದ್ರಾವತಿ ಲಯನ್ಸ್ ಕ್ಲಬ್ ಮೊದಲ ಸ್ಥಾನ : ನೀಲಕಂಠ ಎಂ. ಹೆಗ್ಡೆ

ಭದ್ರಾವತಿ ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ನಿರ್ಗತಿಕರಿಗೆ ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
   ಭದ್ರಾವತಿ, ಮಾ. ೧೮: ನಗರದ ಲಯನ್ಸ್ ಕ್ಲಬ್ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲೂ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಒಗ್ಗಟ್ಟಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಪ್ರಶಂಸೆ ವ್ಯಕ್ತಪಡಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಯನ್ಸ್ ಜಿಲ್ಲೆ ೩೧೭ಸಿ ಪ್ರದೇಶ ೯ರ ವಲಯ ೨ರ ವ್ಯಾಪ್ತಿಯಲ್ಲಿ ೫ ಸ್ಥಾನಗಳ ಪೈಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ.  
  ದೇಶದಲ್ಲಿ ಒಟ್ಟು ೭೫ ಲಯನ್ಸ್ ಜಿಲ್ಲೆಗಳಿದ್ದು ೨.೮೯ ಲಕ್ಷ ಲಯನ್ಸ್ ಸದಸ್ಯರನ್ನು ಹೊಂದಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೇಶ ಭಾರತ ಎಂಬುದು ವಿಶೇಷವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ೪೭ ಲಕ್ಷ ರೂ ಮೌಲ್ಯದ ಪಿಪಿ ಕಿಟ್, ೩ ಲಕ್ಷಕ್ಕೂ ಹೆಚ್ಚು ಮಾಸ್ಕ್ ವಿತರಣೆ ಮಾಡಲಾಗಿದ್ದು, ೮೦೦ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದರು. ಕುಡಿಯುವ ನೀರಿನ ಸೌಲಭ್ಯ, ವಸತಿ ಸೌಕರ್ಯ, ಸ್ವಚ್ಚತಾ ಆಂದೋಲನಾ, ವೈದ್ಯಕೀಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸ್ತುತ ೧೪೮ ಲಕ್ಷ ರು. ಮೊತ್ತದ ಜಾಗತೀಕ ಯೋಜನೆಗಳು ಜಾರಿಯಲ್ಲಿವೆ. ನಗರದ ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದೀಗ ಎರಡು ನಾಮಫಲಕಗಳ ಅನಾವರಣ, ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆರಾಕ್ಸ್ ಮತ್ತು ಪ್ರಿಂಟಿಂಗ್ ಮೆಷಿನ್ ವಿತರಣೆ, ಬಸ್ ತಂಗುದಾಣ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಹಾಗೂ ಬಟ್ಟೆ ಹೊಲಿಯುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.  
   ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ, ಪಿಡಿಜಿ ಬಿ. ದಿವಾಕರ ಶೆಟ್ಟಿ, ವಿಡಿಜಿ ಕೆ.ಸಿ ವೀರಭದ್ರಪ್ಪ, ಸಂಧ್ಯಾಹೆಗ್ಡೆ, ಜನಾರ್ಧನ ಅಯ್ಯಂಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಮಾ. ೧೮: ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
     ೫ ಎಕರೆ ೨೭ ಗುಂಟೆ ವಿಸ್ತೀರ್ಣವುಳ್ಳ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಈ ಹಿಂದೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಪೌರಾಯುಕ್ತ ಮನೋಹರ್ ಸ್ಥಳೀಯರು ಹಾಗು ರೈತರೊಂದಿಗೆ ಮಾತುಕತೆ ನಡೆಸಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಪುನಃ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಪತ್ರ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
   ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರಾದ ಮುರುಗನ್, ಪ್ರಸನ್ನ, ಯೋಗೇಶ್, ಜಾನಿ, ಸಿಂಗ್, ನಾರಾಯಣಪ್ಪ, ಉಮೇಶ್, ದಶರಥ, ಸುಬ್ಬು ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮತ್ತು ಕಾಗದನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರಾಜೇಶ್, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.