![](https://blogger.googleusercontent.com/img/a/AVvXsEg-Yp8yeoIhap8rxTbb8XP-L9_RaHPvXVavmSYyDyy3MMN5MKr7NHT8eAePxQmIHIReeYEuaw8SDfSmaif3AbO85saPej3pUX0D7xO_osRvEFy8cirfQQOwMMxObpH9yHghPEPiZx2EdGU4ji28brk96Wn6LbojxnvCpUyDH6tCmTKUpGJMukMXNs6DDQ=w400-h248-rw)
ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಮಂಗಳವಾರ ಸಚಿವರಾದ ಶಿವರಾಂ ಹೆಬ್ಬಾರ್, ಡಾ. ಕೆ.ಸಿ ನಾರಾಯಣಗೌಡ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಜೂ. ೨೮: ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಕ್ಷೇತ್ರ ಭದ್ರಾವತಿಯಾಗಿದ್ದು, ವಿಶೇಷವಾಗಿ ಕಾರ್ಮಿಕರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಆಶಯ ನನ್ನದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
ಅವರು ಮಂಗಳವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾರ್ಮಿಕ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಹುಮುಖ್ಯವಾಗಿ ಕಾರ್ಮಿಕರ ಮಕ್ಕಳು ಸಹ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಇಲಾಖೆ ವತಿಯಿಂದ ಭರಿಸಲಾಗುತ್ತಿದೆ ಎಂದರು.
ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅಲ್ಲದೆ ಎಲ್ಲಾ ರೀತಿಯ ಅಸಂಘಟಿತ ಕಾರ್ಮಿಕರ ನೆರವಿಗೆ ಮುಂದಾಗುವ ಉದ್ದೇಶದಿಂದ ಇ-ಶ್ರಮ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅಸಂಘಟಿತ ಕಾರ್ಮಿಕರು ಉಚಿತವಾಗಿ ನೋಂದಾಣಿ ಮಾಡಿಕೊಂಡು ಕಾರ್ಡ್ ಪಡೆಯುವ ಮೂಲಕ ಸರ್ಕಾರದ ಸೌಲರ್ಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ ಮಾತನಾಡಿ, ಒಬ್ಬ ಕಾರ್ಮಿಕನಾಗಿ ಕಾರ್ಮಿಕರ ನೋವು-ನಲಿವುಗಳನ್ನು ಅರಿತುಕೊಂಡಿರುವ ಸಚಿವ ಶಿವರಾಂ ಹೆಬ್ಬಾರ್‌ರವರು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಕಾರ್ಮಿಕ ಸಚಿವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜಿಲ್ಲೆಯಲ್ಲಿರುವ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧರಾಗಿದ್ದಾರೆ. ಅವರು ಕಾರ್ಮಿಕರ ಬಗ್ಗೆ ಹೊಂದಿರುವ ಕಾಳಜಿಗೆ ಶಿವಮೊಗ್ಗ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ಸಚಿವರು ಇನ್ನೂ ಹೆಚ್ಚಿನ ೧೫ ಕೋ. ರು. ಅನುದಾನ ನೀಡಬೇಕು. ಕ್ಷೇತ್ರದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ತೆರೆಯುವ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ ಪಾಷ, ಕಾರ್ಯನಿರ್ವಹಣಾಧಿಕಾರಿ ಎಂ.ಪಿ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಎಸ್. ದತ್ತಾತ್ರಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ಎಸ್. ಕುಮಾರ್, ಕೆ. ಮಂಜುನಾಥ್, ಮಂಗೋಟೆರುದ್ರೇಶ್, ಜಿ. ಆನಂದಕುಮಾರ್, ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಅನ್ನಪೂರ್ಣ, ರವಿಕುಮಾರ್, ಮಂಜುನಾಥ್, ಕರೀಗೌಡ, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಚಂದ್ರಶೇಖರ್, ವಿ.ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.