ಭದ್ರಾವತಿ ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಮಂಗಳವಾರ ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದರು.
ಭದ್ರಾವತಿ, ಜೂ. ೨೮: ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದ್ದಾರೆ.
ಕಾಲುವೆಗೆ ಅಡ್ಡಲಾಗಿ ಬಿಳಿಕಿ ಗ್ರಾಮಕ್ಕೆ ಸಂಪರ್ಕಗೊಂಡಿರುವ ಸೇತುವೆ ಶಿಥಿಲಗೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನಲೆಯಲ್ಲಿ ಶಾಸಕರು ನೀರಾವರಿ ನಿಗಮಕ್ಕೆ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದು, ಕರ್ನಾಟಕ ನೀರಾವರಿ ನಿಗಮ ಭದ್ರಾ ಪ್ರಾಜೆಕ್ಟ್ ವತಿಯಿಂದ ಸುಮಾರು ೩೪.೫೦ ಲಕ್ಷ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು ಒಂದು ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಕಳಪೆಯಿಂದ ನಿರ್ವಹಿಸುತ್ತಿದ್ದು, ಸೇತುವೆ ತಳಪಾಯಕ್ಕೆ ಕಡಿಮೆ ಸಾಮರ್ಥ್ಯದ ಕಬ್ಬಿಣದ ರಾಡ್ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೂ ಸಹ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರೆಸಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಮಂಗಳವಾರ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ. ಹಲವಾರು ಬಾರಿ ಗುತ್ತಿಗೆದಾರನಿಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ಸಹ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾಮಗಾರಿ ಆರಂಭಿಸುವ ಕುರಿತು ಯಾವುದೇ ಮುನ್ಸೂಚನೆ ಸಹ ನೀಡಿಲ್ಲ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಸಹ ಕೈಗೊಂಡಿಲ್ಲ. ಸೇತುವೆ ಎರಡು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಕಾಮಗಾರಿ ಕುರಿತು ಸಂಪೂರ್ಣ ವಿವರ ಪ್ರಕಟಿಸಬೇಕು. ಆದರೆ ಯಾವುದನ್ನು ಸಹ ಮಾಡಿಲ್ಲ. ಈಗಾಗಲೇ ಈ ಸ್ಥಳದಲ್ಲಿ ಅಪಘಾತ ಸಂಭವಿಸಿದ್ದು, ಆದರೂ ಸಹ ಎಚ್ಚೆತ್ತುಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಿರ್ವಹಿಸುತ್ತಿದ್ದ ಪ್ರಕಾಶ್ ವಠಾರೆ ಎಂಬುವರು ಮಾತನಾಡಿ, ಟೆಂಡರ್‌ನಲ್ಲಿ ನಮೂದಿಸಿರುವಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಆದರೆ ಕಳಪೆ ಕಾಮಗಾರಿ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ. ಈ ನಡುವೆ ಗ್ರಾಮಸ್ಥರು ಆಕ್ರೋಶಗೊಂಡ ಹಿನ್ನಲೆಯಲ್ಲಿ ಸ್ಥಳದಿಂದ ಕಾಲ್ಕಿತ್ತರು.
No comments:
Post a Comment