Tuesday, April 12, 2022

ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಗೊಂಡಿಲ್ಲ : ೪ ದಶಕಗಳ ಹೋರಾಟಕ್ಕೆ ಫಲ ಲಭಿಸಿಲ್ಲ

ಭವನ ಪೂರ್ಣಗೊಳ್ಳಲು ಬೇಕು ಇನ್ನೂ ರು. ೬೨.೬೩ ಲಕ್ಷ..!

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ.

* ಅನಂತಕುಮಾರ್
    ಭದ್ರಾವತಿ, ಏ. ೧೨: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇನ್ನೂ ಫಲ ಲಭಿಸಿಲ್ಲ. ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಈ ಬಾರಿ ಸಹ ಪೂರ್ಣಗೊಂಡಿಲ್ಲ.
    ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇಂದಿಗೂ ಕನಸಾಗಿ ಉಳಿದುಕೊಂಡಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇಂದಿಗೂ ಮುನ್ನಡೆಯುತ್ತಿದೆ. ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ.
    ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ  ಭವನ ಸುಮಾರು ೪-೫ ವರ್ಷಗಳ ವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
    ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
    ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
    ಪೂರ್ಣಗೊಳ್ಳಲು ಬೇಕು ಇನ್ನೂ ರು. ೬೨.೬೩ ಲಕ್ಷ..!
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಒಟ್ಟು ರು.೨.೫೦ ಕೋ. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಂಡಿಲ್ಲ. ಬಾಕಿ ಇರುವ ಎಲೆಕ್ಟ್ರಿಕಲ್ ವರ್ಕ್ಸ್, ಫ್ಲಂಬಿಂಗ್, ಸ್ಟೇಜ್ ಪ್ಲೋರಿಂಗ್ ಮತ್ತು ಪೇಟಿಂಗ್ ಕಾಮಗಾರಿಗಳಿಗಾಗಿ ಇನ್ನೂ ರು. ೬೨.೬೩ ಲಕ್ಷ ಅಗತ್ಯವಿದ್ದು, ಈ ಪೈಕಿ ಮಂಜೂರಾತಿಯಾಗಿರುವ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ರು. ೩೭.೩೭ ಲಕ್ಷ ಇನ್ನೂ ಬಿಡುಗಡೆಗೊಂಡಿಲ್ಲ. ಇದರಿಂದಾಗಿ ಸದ್ಯಕ್ಕೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭವನದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಿವಮೊಗ್ಗ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ.
    ಅನುದಾನ ಬಿಡುಗಡೆಗೆ ಒತ್ತಾಯ:
    ಕೆಲವು ತಿಂಗಳುಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ಭವನದ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಪ್ರಸ್ತಾಪಿಸಿ ತಕ್ಷಣ ಬಾಕಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತಪರ ಸಂಘಟನೆಗಳ ಪ್ರಮುಖರು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದು, ಈ ನಡುವೆ ಕಳೆದ ೩ ದಿನಗಳಿಂದ ಹೋರಾಟ ಸಹ ನಡೆಯುತ್ತಿದೆ.
    ಈ ಬಾರಿ ದಲಿತಪರ ಸಂಘಟನೆಗಳು ಏ.೧೪ರೊಳಗೆ ಭವನ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಭವನ ಪೂರ್ಣಗೊಳ್ಳುವವರೆಗೆ ಹೋರಾಟ ಮುಂದುವರೆಸುವುದು ಅನಿವಾರ್ಯವಾಗಿದೆ.

ಏ.೧೩ರಂದು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಭದ್ರಾವತಿ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ.
    ಭದ್ರಾವತಿ, ಏ. ೧೨: ತಾಲೂಕಿನ ನಾಗತಿಬೆಳಗಲು ಇತಿಹಾಸ ಪ್ರಸಿದ್ದ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಏ. ೧೩ರಂದು ನಡೆಯಲಿದೆ.
    ಬೆಳಿಗ್ಗೆ ೫ ಗಂಟೆಗೆ ಶ್ರೀ ಸ್ವಾಮಿಯ ರುದ್ರಾಭಿಷೇಕ, ಮಂಗಳಾರತಿ, ೧೦ ಗಂಟೆಗೆ ಕೆಂಡಾರ್ಚನೆ, ಸಂಜೆ ಶ್ರೀ ನಂಜುಂಡೇಶ್ವರ ಸ್ವಾಮಿಯ ರಥಾರೋಹಣ, ಏ.೧೪ರ ಬೆಳಿಗ್ಗೆ ೫ ಗಂಟೆಗೆ ರಥೋತ್ಸವ, ಮಧ್ಯಾಹ್ನ ಓಕಳಿ, ಏ.೧೫ರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ, ಸಿದ್ದರಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
    ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕುಮರಿನಾರಾಯಣಪುರದ ಮುಖಂಡ, ಶ್ರೀವಿನಾಯಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ. ಧರ್ಮೇಂದ್ರ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನ ಸೇವಾಸಮಿತಿ ಕಾರ್ಯದರ್ಶಿ, ಮೊ: ೮೧೦೫೨೬೪೩೫೭ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸಮಗಾರ ಶ್ರೀ ಹರಳಯ್ಯ ಸಮಾಜದ ರಾಜ್ಯಮಟ್ಟದ ವಧು-ವರರ ಸಮಾವೇಶ ಉದ್ಘಾಟನೆ

ಭದ್ರಾವತಿ ಸಮಗಾರ ಶ್ರೀ ಹರಳಯ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಏ. ೧೨:  ಸಮಗಾರ ಶ್ರೀ ಹರಳಯ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ತಾಲೂಕಿನಲ್ಲಿ ಸಮಗಾರ ಶ್ರೀ ಹರಳಯ್ಯ ಸಮಾಜ ಸುಮಾರು ೨೫೦೦ ಜನಸಂಖ್ಯೆಯನ್ನು ಹೊಂದಿದ್ದು, ಸಣ್ಣ ಸಮಾಜವಾಗಿದ್ದರೂ ಸಹ ಹೆಚ್ಚು ಸಂಘಟಿತವಾಗಿದೆ. ಮೊದಲ ಬಾರಿಗೆ ಹಳೇನಗರದ ಬಲಿಜ ಸಮಾಜದ ಎಂ.ಎಸ್ ರಾಮಯ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶ ೧೦೦ಕ್ಕೂ ಹೆಚ್ಚು ಸಮಾಜ ಬಾಂಧವರಿಗೆ ವೇದಿಕೆಯಾಗಿ ರೂಪುಗೊಂಡಿತ್ತು.  ಒಂದೆಡೆ ಸೇರುವ ಮೂಲಕ
    ಸಮಗಾರ ಸಮಾಜದ ರಾಜ್ಯಾಧ್ಯಕ್ಷ ಜಗದೀಶ್ ಬೆಟಗೇರಿ, ಪರಶುರಾಮ್ ಅರಕೇರಿ, ದೇವರಾವ್ ಭಾಮ್ನೆ, ಸಂಗಮೇಶ್, ಭರತ್ ಉಳ್ಳಿಕಾಶಿ, ಮಂಜುನಾಥ್ ಹಂಜಗಿ, ಹೇಮರಾಜ್ ಲಕ್ಕುಂಡಿ, ವಿನಾಯಕ ಕಾನಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಮಗಾರ ಸಮಾಜದ ಅಧ್ಯಕ್ಷ ಬಿ. ಪಿ. ರಾಘವೇಂದ್ರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.  ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿದ್ದರು.