Sunday, December 4, 2022

ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿದರು. 
    ಭದ್ರಾವತಿ, ಡಿ. ೪: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭಕ್ಕೆ ಶನಿವಾರ ಸಂಜೆ ಆಗಮಿಸಿದ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ ಕೋರಲಾಯಿತು.    
    ಶ್ರೀ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ ಆಗಮಿಸಿದ ಪ.ಪೂ ದತ್ತಾವಧೂತ ಮಹಾರಾಜರು ಹಾಗು ಆಶ್ರಮ ವಾಸಿಗಳನ್ನು ಮಂಗಳವಾದ್ಯ, ನಾದಸ್ವರ ಹಾಗು ಪುಷ್ಪವೃಷ್ಟಿಯೊಂದಿಗೆ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಆರತಿ ಮಂತ್ರಪುಷ್ಪ, ಪ್ರಸಾದ ವಿನಿಯೋಗ ಜರುಗಿತು.
    ಭಾನುವಾರ ಬೆಳಿಗ್ಗೆ  ಕಾಕಡಾರತಿ ಹಾಗು ಪಂಚಪದಿ ಭಜನೆ, ಪ್ರಾತಃಕಾಲ ಪೂಜೆ, ಸಾಮೂಹಿಕ ಜಪ ಮತ್ತು ಶ್ರೀ ಹನುಮಾನ್ ಚಾಲೀಸ ಪಾಠ ಹಾಗು ಮಧ್ಯಾಹ್ನ ಆಶೀರ್ವಚನ ಹಾಗು ಮಾಹಾನೈವೇದ್ಯ, ಮಹಾಮಂಗಳಾರತಿ ಹಾಗು ಮಹಾಪ್ರಸಾದ ವಿನಿಯೋಗ ಜರುಗಿತು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪ.ಪೂ ದತ್ತಾವಧೂತ ಮಹಾರಾಜರ ದರ್ಶನ ಪಡೆದರು.

ರೋಟರಿ ಸಮುದಾಯದಿಂದ ಯಶಸ್ವಿಯಾಗಿ ಜರುಗಿದ ‘ತುಂಗಾಭದ್ರಾ ಕ್ರೀಡೋಲ್ಲಾಸ’

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೪ : ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ರೋಟರಿ ಜೋನ್-೧೦ರ ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ನಾರ್ತ್, ಶಿವಮೊಗ್ಗ ಮಿಡ್-ಟೌನ್, ಶಿವಮೊಗ್ಗ ರಿವರ್‌ಸೈಡ್, ಶಿವಮೊಗ್ಗ ಜ್ಯೂಬ್ಲಿ, ಕದಂಬ(ಶಿಕಾರಿಪುರ) ಮತ್ತು ಶಿವಮೊಗ್ಗ ಮಲೆನಾಡು ಹಾಗೂ ಜೋನ್-೧೧ರ ಶಿವಮೊಗ್ಗ ಈಸ್ಟ್, ಶಿವಮೊಗ್ಗ ಸೆಂಟ್ರಲ್, ತೀರ್ಥಹಳ್ಳಿ, ಸಾಗರ, ಕೋಣಂದೂರು, ರಿಪ್ಪನ್‌ಪೇಟೆ ಮತ್ತು ಸೊರಬ ಒಟ್ಟು ೧೬ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.


    ಭದ್ರಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪ್ರಮುಖರಾದ ಡಾ. ಗುಡದಪ್ಪ ಕಸಬಿ, ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕ್ರಿಕೆಟ್ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಿ.ಎಲ್ ಚಾಂದ್ವಾನಿಯವರು ರೋಟರಿ ಸಮುದಾಯ ಒಂದೆಡೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯ ಬೆಳವಣಿಯಾಗಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಶುಭ ಹಾರೈಸಿದರು.

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಗೀತಾ ಜಯಂತಿ

ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೪ : ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಬಿ.ಕೆ ಮಾಲಕ್ಕ ನೇತೃತ್ವದಲ್ಲಿ ಬೆಳಿಗ್ಗೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಜಯಂತಿ ಮಹತ್ವ ವಿವರಿಸಲಾಯಿತು. ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಗೀತಾ ಜಯಂತಿ ಪುಸ್ತಕ ವಿತರಿಸಲಾಯಿತು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕೇಂದ್ರ ಮೀಸಲು ಪೊಲೀಸ್ ಪಡೆ, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ೯೭ ಬೆಟಾಲಿಯನ್ ಡೆಪ್ಯೂಟಿ ಕಮಾಂಡೆಂಟ್‌ಗಳಾದ ಬಿ.ಸಿ ರಾಯ್, ನಯನ್ ನಂದಿ ಮತ್ತು ಸಂತೋಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾಕರ್ತರು, ಗೃಹ ರಕ್ಷಕದಳ ಘಟಕಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು, ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು. ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಜಿ.ಎಂ ನಟರಾಜ್ ವಂದಿಸಿದರು.


ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.