Friday, June 18, 2021

ಕಸ ವಿಲೇವಾರಿ ವಾಹನ ಸೇವೆಗೆ ಸಮರ್ಪಣೆ


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸೇವೆಗೆ ಸಮರ್ಪಿಸಿದರು.
ಭದ್ರಾವತಿ, ಜೂ. ೧೮: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸೇವೆಗೆ ಸಮರ್ಪಿಸಿದರು.
ತಾಲೂಕಿನಲ್ಲಿ ಒಟ್ಟು ೪೧ ಗ್ರಾಮ ಪಂಚಾಯಿತಿಗಳಿದ್ದು, ಒಂದೊಂದು ಗ್ರಾಮ ಪಂಚಾಯಿತಿಗೂ ತಲಾ ಒಂದೊಂದು ವಾಹನ ಮೀಸಲಿಡಲಾಗಿದೆ. ಸದ್ಯಕ್ಕೆ ೭ ಗ್ರಾಮ ಪಂಚಾಯಿತಿಗಳಿಗೆ ವಾಹನಗಳು ಬಂದಿದ್ದು, ಉಳಿದ ವಾಹನಗಳು ಸಹ ಶೀಘ್ರದಲ್ಲಿಯೇ ಬರಲಿವೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಹಾಗು ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸ್ವತಃ ವಾಹನ ಚಾಲನೆಗೆ ಮುಂದಾಗಿ ಗಮನ ಸೆಳೆದರು.

ಸೋಂಕು ಇಳಿಕೆ : ಒಂದೇ ದಿನ ೬ ಬಲಿ

   ಭದ್ರಾವತಿ, ಜೂ. ೧೮: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಆದರೆ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ ೬ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೧೦೫೫ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೫೨ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೬೭೪೧ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೬೫೭೧ ಮಂದಿ ಗುಣಮುಖರಾಗಿದ್ದಾರೆ. ೧೭೦ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ಒಟ್ಟು ೧೮೯ ಮೃತಪಟ್ಟಿದ್ದಾರೆ.
    ಒಟ್ಟು ೧೫೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು ೩೬ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ. ಇದುವರೆಗೂ ೧೦೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ ೨೭ ಜೋನ್‌ಗಳು ಸಕ್ರಿಯವಾಗಿವೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವೈದ್ಯರಿಂದ ಪ್ರಧಾನಿಗೆ ಮನವಿ


ಕರ್ತವ್ಯ ನಿರತ ವೈದ್ಯರು ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ನೇತೃತ್ವದಲ್ಲಿ ಶುಕ್ರವಾರ  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಜೂ. ೧೮: ಕರ್ತವ್ಯ ನಿರತ ವೈದ್ಯರು ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
     ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು(ಹಿಂಸೆ ಮತ್ತು ಆಸ್ತಿಗೆ ಹಾನಿ ನಿಷೇಧ) ಮಸೂದೆ-೨೦೧೯ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಮಾಜ ವಿರೋಧಿ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಕೋವಿಡ್-೧೯ರ ಪರಿಣಾಮ ಮೃತಪಟ್ಟ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಗುರುತಿಸಬೇಕು. ಹುತಾತ್ಮ ಯೋಧರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಆರೋಗ್ಯ ಗುಪ್ತಚರ ಬ್ಯೂರೋ(ಸಿಬಿಎಚ್‌ಐ) ಮೂಲಕ ಪರಿಣಾಮ ವ್ಯವಸ್ಥೆಯನ್ನು ರೂಪಿಸಬೇಕು. ಹುತಾತ್ಮ ವೈದ್ಯರ ಕುಟುಂಬಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ.
     ಪ್ರಸ್ತುತ ಕೊರೋನಾ ಸೋಂಕು ಎದುರಿಸಲು ಲಸಿಕೆಯೊಂದೇ ಪರಿಣಾಮಕಾರಿ ವಿಧಾನ ಎಂಬುದು ಬಹುತೇಕ ಸಾಬೀತಾಗಿದ್ದು, ಹೆಚ್ಚಿನ ಪ್ರಾಣ ಹಾನಿ, ಸೋಂಕಿನ ತೀವ್ರತೆ ತಡೆಯಲು ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು. ಕೋವಿಡ್-೧೯ರ ನಂತರ ಎದುರಾಗಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿಯಲು ಅಧ್ಯಯನ ಮಾಡಲು ಮತ್ತು ಔಷಧದ ಎಲ್ಲಾ ವಿಭಾಗಗಳಲ್ಲಿ ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋಧನಾ ಕೋಶವನ್ನು ಸ್ಥಾಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
     ಐಎಂಎ ತಾಲೂಕು ಶಾಖೆ ಅಧ್ಯಕ್ಷೆ ಡಾ. ವೀಣಾ ಎಸ್. ಭಟ್, ಕಾರ್ಯದರ್ಶಿ ಡಾ. ಎಂ.ಸಿ ಸ್ವರ್ಣಲತಾ,  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ. ಡಾ. ಗ್ಲಾಡಿಸ್, ಡಾ. ನಿತೀನ್, ಡಾ. ಶಿವಪ್ರಕಾಶ್, ಡಾ. ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕರು, ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ


ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಮತ್ತು ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ವತಿಯಿಂದ ಶುಕ್ರವಾರ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ ಮತ್ತು ಶಾಲಾ ಶಿಕ್ಷಕರು ಹಾಗು ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.  
     ಭದ್ರಾವತಿ, ಜೂ. ೧೮: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಮತ್ತು ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ವತಿಯಿಂದ ಶುಕ್ರವಾರ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ ಮತ್ತು ಶಾಲಾ ಶಿಕ್ಷಕರು ಹಾಗು ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.  
   ಕೇಶವಪುರ ಬಡಾವಣೆಯ ತರುಣ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ಕಾನಿಟ್ಕರ್ ಮಾತನಾಡಿ, ಹಿಂದೂ ಸಾಮ್ರಾಜ್ಯೋತ್ಸವ ಹಾಗು ಶಿವಾಜಿ ಮಹಾರಾಜರು ನಡೆಸಿದ ಹೋರಾಟಗಳನ್ನು ವಿವರಿಸಿದರು.  ಅವರ ಸಾಹಸವನ್ನು ತಿಳಿಸಿದರು.
      ತರುಣ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಭೂಷಣ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಹಾಗು ತರುಣ ಭಾರತಿ  ವಿದ್ಯಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಯೋಗದ ಮಹತ್ವ ವಿವರಿಸಿದರು. ಸಹ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.  
     ಸವಿತಾ ನಿರೂಪಿಸಿದರು. ಸುಜಾತ ಸ್ವಾಗತಿಸಿದರು. ಪೂರ್ಣಿಮಾ ಅಮೃತವಚನ ನಡೆಸಿಕೊಟ್ಟರು. ಸರ್ವಮಂಗಳ ವಂದಿಸಿದರು. ಸುಮಾರು ೩೫ಕ್ಕೂ ಹೆಚ್ಚು ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
     ಖಜಾಂಚಿ ವಿಶ್ವನಾಥ್, ಸದಸ್ಯರಾದ ರಾಮಚಂದ್ರ, ಸತ್ಯನಾರಾಯಣ, ಸಿದ್ದರಾಮಣ್ಣ, ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.