೮ ಜನ ಗ್ರಾ.ಪಂ ಸದಸ್ಯರ ಮೇಲೆ ಹಲ್ಲೆ ಆರೋಪ: ಇಬ್ಬರ ಸೆರೆ
ಭದ್ರಾವತಿ, ಜು. ೨೮: ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಶಂಕರಘಟ್ಟದ ಕುವೆಂಪು ನಗರ ಬಡಾವಣೆಯ ಹೋಟೆಲ್ ಒಂದರಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ 8 ಜನ ಗ್ರಾಮಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವಿ ಕಿಶೋರ್ ಬೆಂಬಲಿತರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಗ್ರಾಮ ಪಂಚಾಯಿತಿ ಸದಸ್ಯರಾದ ಧನಪಾಲ್, ದಶರಥ್, ಶ್ರೀಧರ್, ವೆಂಕಟರಮಣ, ಮಂಜುನಾಥ್ ಸೇರಿದಂತೆ ಇನ್ನಿತರರು ಹಲ್ಲೆಗೊಳಗಾಗಿದ್ದಾರೆ. ರವಿಕಿಶೋರ್, ಆಕಾಶ್, ಪವನ್, ಕಿಶೋರ್, ಕಾರ್ತಿಕ್ ಮತ್ತು ಡ್ರೈವರ್ ಸಾದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ರವಿಕಿಶೋರ್ ಮತ್ತು ಆಕಾಶ್ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಮೂವರು ನಾಪತ್ತೆಯಾಗಿದ್ದಾರೆ.