Tuesday, January 23, 2024

ಸಂಪನ್ಮೂಲ ವ್ಯಕ್ತಿ ನವೀದ್‌ ಅಹಮದ್‌ ಪರ್ವೀಜ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ನವೀದ್‌ ಅಹಮದ್‌ ಪರ್ವೀಜ್‌  
    ಭದ್ರಾವತಿ: ನಗರದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಚುನಾವಣಾ ನೋಡಲ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನವೀದ್‌ ಅಹಮದ್‌ ಪರ್ವೀಜ್‌ ಅವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ʻಸ್ಟೇಟ್‌ ಲೆವೆಲ್‌ ಮಾಸ್ಟರ್‌ ಟ್ರೈನರ್‌ʼ ಪ್ರಶಸ್ತಿ ಲಭಿಸಿದೆ.
    ಕಳೆದ ಹಲವಾರು ವರ್ಷಗಳಿಂದ ಆಯೋಗದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮಹತ್ವ, ಪ್ರಕ್ರಿಯೆಗಳು, ಸಮುದಾಯದ ಜವಾಬ್ದಾರಿಗಳು, ಮತದಾರರ ಪಾಲ್ಗೊಳ್ಳುವಿಕೆ ಹಾಗು ಹಕ್ಕುಗಳು ಸೇರಿದಂತೆ ಹಲವಾರು ವಿಚಾರಗಳ ಕುರಿತು ಅರಿವು ಮೂಡಿಸುವ ನಿರಂತರ ಜಾಗೃತಿ ಕಾರ್ಯದಲ್ಲಿ ನವೀದ್‌  ಅವರು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಚುನಾವಣಾ ಆಯೋಗ ಪ್ರಶಸ್ತಿ ನೀಡಿದೆ.  
    ನವೀದ್‌ ಅವರಿಗೆ ‍ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಅಭಿನಂದಿಸಿವೆ.

ನೂತನ ನಗರಸಭೆ ಅಧ್ಯಕ್ಷರಿಗೆ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಅಭಿನಂದನೆ

ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅವರನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಎಸ್. ಅರುಣ್ ಕುಮಾರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
    ಭದ್ರಾವತಿ: ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅವರನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಎಸ್. ಅರುಣ್ ಕುಮಾರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
    ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ನಗರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪಕ್ಷದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಲಾಯಿತು.
    ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್, ಎಚ್. ರವಿಕುಮಾರ್ ಮತ್ತು ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಮಮಂದಿರ ಲೋಕಾರ್ಪಣೆ : ಗಮನ ಸೆಳೆದ ಶ್ರೀರಾಮ, ಹನುಮಂತ ವೇಷಧಾರಿಗಳು

ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಹಳೇನಗರ ಬಸವೇಶ್ವರ ವೃತ್ತದಲ್ಲಿ ಕಲಾವಿದ ರಮೇಶ್‌ರವರು ಶ್ರೀರಾಮ ಹಾಗು ಆಟೋ ಪ್ರದೀಪ್‌ರವರು ಹನುಮಂತ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
    ಭದ್ರಾವತಿ : ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ಹಳೇನಗರ ಬಸವೇಶ್ವರ ವೃತ್ತದಲ್ಲಿ ವರ್ತಕರ ಸಂಘದಿಂದ ಧಾರ್ಮಿಕ ಆಚರಣೆಗಳು ಜರುಗಿದವು.
  ಪ್ರಭು ಶ್ರೀರಾಮ ಚಂದ್ರನಿಗೆ ವರ್ತಕರು, ಸ್ಥಳೀಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಕಲಾವಿದ ರಮೇಶ್‌ರವರು ಶ್ರೀರಾಮ ಹಾಗು ಆಟೋ ಪ್ರದೀಪ್‌ರವರು ಹನುಮಂತ ವೇಷ ಧರಿಸಿ ಎಲ್ಲರ ಗಮನ ಸೆಳೆದರು.

ಎನ್. ಗಣೇಶ್‌ರಾವ್ ಸಿಂಧ್ಯಾ ನಿಧನಕ್ಕೆ ಸಂತಾಪ

ಎನ್. ಗಣೇಶ್‌ರಾವ್ ಸಿಂಧ್ಯಾ 
ಭದ್ರಾವತಿ : ನಗರದ ಹಿರಿಯ ಪತ್ರಕರ್ತ ಎನ್. ಗಣೇಶ್‌ರಾವ್ ಸಿಂಧ್ಯಾರವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿ ಪತ್ರಿಕಾ ಕ್ಷೇತ್ರಕ್ಕೆ ಅವರ ಸೇವೆಯನ್ನು ಸ್ಮರಿಸಿದೆ.
    ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಠಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು. ಸಿಂಧ್ಯಾರವರು ಪತ್ರಿಕಾ ಕ್ಷೇತ್ರದಲ್ಲಿ ಸುದೀಘ ಕಾಲ ತೊಡಗಿಸಿಕೊಂಡಿದ್ದು, ಅಲ್ಲದೆ ಸಂಘದ ಹಿರಿಯ ಸದಸ್ಯರಾಗಿ ಮಾರ್ಗದರ್ಶಕರಾಗಿದ್ದರು. ಇವರ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಇವರ ನಿಧನದಿಂದ ಉಂಟಾಗಿರುವ ದುಃಖ ಭರಿಸುವ ಶಕ್ತಿ ದೇವರು ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.  
       ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಸಂಘದ ಹಿರಿಯ ಪತ್ರಕರ್ತರಾದ ಎನ್ ಬಾಬು, ಎಚ್.ಕೆ ಶಿವಶಂಕರ್, ಕೆ.ಎನ್ ರವೀಂದ್ರನಾಥ್(ಬ್ರದರ್), ಕೆ. ಎಸ್ ಸುಧೀಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.